ಉಡುಪಿ, ಅ 25: ಪೋಷಕರು ಮತ್ತು ಹಿರಿಯ ನಾಗರಿಕರಿಗೆ ಅವರ ಜೀವನ ನಿರ್ವಹಣೆ ಮತ್ತು ಯೋಗಕ್ಷೇಮಕ್ಕೆ ಇನ್ನೂ ಹೆಚ್ಚಿನ ಪರಿಣಾಮಕಾರಿ ಅವಕಾಶ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2007 ನ್ನು ಜಾರಿಗೊಳಿಸಿದ್ದು, 2008 ಏಪ್ರಿಲ್ 1 ರಿಂದ ರಾಜ್ಯ ಸರ್ಕಾರದಲ್ಲಿ ಜಾರಿಗೊಳಿಸಿ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.

ಸಮಾಜದಲ್ಲಿ ಕಿರಿಯರಿಂದ ಸಮಸ್ಯೆಗಳಲ್ಲಿ ಸಿಲುಕಿದ ಹಿರಿಯ ನಾಗರಿಕರ ರಕ್ಷಣೆಗಾಗಿ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಲ್ಲಿನ ಅವಕಾಶದನ್ವಯ ಪ್ರತಿ ಕಂದಾಯ ಉಪವಿಭಾಗದಲ್ಲಿ ಒಂದು “ನಿರ್ವಹಣಾ ನ್ಯಾಯಮಂಡಳಿ”ಯನ್ನು  ಸ್ಥಾಪಿಸಲಾಗಿದ್ದು, ಈ ನ್ಯಾಯ  ಮಂಡಳಿಗಳಲ್ಲಿ ಜೀವನ ನಿರ್ವಹಣೆಗಾಗಿ ತೊಂದರೆಗೊಳಗಾದ ಹಿರಿಯರು ಜೀವನಾಂಶವನ್ನು ಪಡೆಯಬಹುದಾಗಿದೆ. 

ವೃದ್ದರ ಸಂಖ್ಯೆ ಹೆಚ್ಚಾಗುತ್ತಿರುವ ಜೊತೆಗೆ ಕೂಡಿ ಬಾಳುವುದನ್ನು ಕಲಿಸುವ ಅವಿಭಕ್ತ ಕುಟುಂಬಗಳು ವಿಭಜಿಸಿ ವಿಭಕ್ತ ಕುಟುಂಬ ಹೆಚ್ಚುತ್ತಿರುವುದರಿಂದ, ಸಾಂಸ್ಕೃತಿಕ ಮೌಲ್ಯಗಳು ಕುಸಿದು ಹಿರಿಯರ ಬಗ್ಗೆ ಅಗೌರವ, ನಿರ್ಲಕ್ಷ್ಯ ಹೆಚ್ಚುತ್ತಿದೆ. ವೃದ್ಧರ ಮೇಲೆ ಅಪರಾಧ ಮತ್ತು ದೌರ್ಜನ್ಯ ನಡೆಯುತ್ತಿದ್ದು, ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವುದರಿಂದ ಹಿರಿಯರು ಆಶ್ರಮವನ್ನು ಸೇರಿಕೊಳ್ಳುವ ಪರಿಸ್ಥಿತಿ  ಒದಗಿಬಂದಿದೆ. 

ಆರ್ಥಿಕ ಅಭದ್ರತೆ, ಗಗನಕ್ಕೇರುತ್ತಿರುವ ನಿತ್ಯ ವಸ್ತುಗಳ ಬೆಲೆಗಳು ಮತ್ತು ಆರೋಗ್ಯ ವೆಚ್ಚ ಇವೆಲ್ಲ ಹಿರಿಯರನ್ನು ಕಾಡುತ್ತಿರುವ ನಿತ್ಯ ಸಮಸ್ಯೆಗಳಾಗಿದ್ದು, ಪೋಷಕರ ಮತ್ತು ಹಿರಿಯರ ಪಾಲನೆ ಪೋಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ತಪ್ಪಿದಲ್ಲಿ ಹಿರಿಯ ನಾಗರಿಕರ ಕಾಯ್ದೆ ಅನ್ವಯ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ.

ನೊಂದ, ಶೋಷಿತ ಹಾಗೂ ದೌರ್ಜನ್ಯಕ್ಕೊಳಗಾದ ಹಿರಿಯ ನಾಗರಿಕರಿಗಾಗಿ ರಾಜ್ಯ ಸರ್ಕಾರವು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು 2014-15 ನೇ ಸಾಲಿನಲ್ಲಿ ಪ್ರಾರಂಬಿಸಿದ್ದು, ಸಹಾಯವಾಣಿ ಕೇಂದ್ರವು ಆಪ್ತ ಸಮಾಲೋಚನೆ, ಪೊಲೀಸ್ ನೆರವು, ಪುನರ್ವಸತಿ, ಕಾನೂನು ನೆರವು, ವೈದ್ಯಕೀಯ ನೆರವನ್ನು ನೀಡುತ್ತಿದೆ. 

ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಈವರೆಗೆ ಮಾಹಿತಿ ಕೋರಿ 2,329 ಮಂದಿ ನೇರ ಭೇಟಿ ನೀಡಿದ್ದು, ದೂರವಾಣಿ ಕರೆಯ ಮೂಲಕ 19,701 ಸ್ವೀಕೃತವಾಗಿದೆ. ಕೇಂದ್ರದಲ್ಲಿ 1,174 ದೂರುಗಳು ದಾಖಲಾಗಿದ್ದು, 1,169 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಕೇಂದ್ರದಲ್ಲಿ 3,393 ವಿವಿಧ ರೀತಿಯ ಸೇವೆಗಳ (ಕಾನೂನು ಸಲಹೆ, ಪೊಲೀಸ್ ನೆರವು, ಸಮಾಲೋಚನೆ, ಮನೆಭೇಟಿ ಇತ್ಯಾದಿ)ನ್ನು ಒದಗಿಸಲಾಗಿದ್ದು, ಸಹಾಯವಾಣಿ ಕೇಂದ್ರದ ಕುರಿತು 265 ಮಾಹಿತಿ ಶಿಬಿರಗಳನ್ನು ನಡೆಸಲಾಗಿದೆ. 

ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ, ಬನ್ನಂಜೆ, ಉಡುಪಿ ಜಿಲ್ಲೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹಿರಿಯ ನಾಗರಿಕರ ರಕ್ಷಣೆಗಾಗಿ 24*7 ಕರ್ತವ್ಯ ನಿರ್ವಹಿಸುತ್ತಿದೆ. ಹಿರಿಯ ನಾಗರಿಕರು ಮಾಹಿತಿ ಪಡೆಯಲು, ದೂರುಗಳನ್ನು ದಾಖಲಿಸಲು ಹಾಗೂ ಯಾವುದೇ ಸಮಸ್ಯೆಗಳಿದ್ದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಟೋಲ್ ಫ್ರೀ ನಂ: 1090 ಅಥವಾ ದೂರವಾಣಿ ಸಂಖ್ಯೆ: 0820-2526394 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.