ಉಡುಪಿ: ಹೆಚ್ಚು ಹೆಚ್ಚು ಪುಸ್ತಕ ಓದುವುದರಿಂದ ಮಕ್ಕಳು ಮಾನಸಿಕವಾಗಿ ಪರಿಪಕ್ವರಾಗುತ್ತಾರೆ. ಮುಂದಿನ ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಗಳಿಸುತ್ತಾರೆ. ವಿವೇಚನಾಶಾಲಿಗಳಾಗಿ ಉತ್ತಮ ನಾಗರಿಕರು ಎನ್ನಿಸಿಕೊಳ್ಳುತ್ತಾರೆ ಎಂದು ಉಡುಪಿ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ  ಡಾ. ಅಶೋಕ್ ಕಾಮತ್ ಅಭಿಪ್ರಾಯಪಟ್ಟರು. ಅವರು ಉಡುಪಿ ಬಾಲಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಎಲ್ಲಮ್ಮ ಮಾತನಾಡುತ್ತಾ ನಿರಂತರ ಅಭ್ಯಾಸ ಮತ್ತು ಸತತ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಉಡುಪಿ ಡಯಟ್ ನ ಉಪನ್ಯಾಸಕ ಯೋಗನರಸಿಂಹ ಸ್ವಾಮಿ ಮಕ್ಕಳ ಕಲಿಕೆಗೆ ಪೂರಕವಾಗುವಂತ ಪೋಷಕರ ಜವಾಬ್ದಾರಿ ಮತ್ತು ಅಭ್ಯಾಸಗಳ ಬಗ್ಗೆ ತಿಳಿಸಿದರು.  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ನವ್ಯ ನಾಯಕ್, ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಸಕ ಯಶಪಾಲ್ ಸುವರ್ಣ ಅವರು ಪುಷ್ಪಾನಂದ ಫೌಂಡೇಶನ್ ವತಿಯಿಂದ ನೀಡಿದ ಸಿಹಿ ವಿತರಿಸಲಾಯಿತು.  ಇಂದಿರಾ ಸ್ವಾಗತಿಸಿದರು.‌ ಶೇಖರ್ ನಿರೂಪಿಸಿ, ಜ್ಯೋತಿ ವಂದಿಸಿದರು.