ಉಡುಪಿ: ಬದುಕಿನ ಸ್ಥಿರವಾದ ಅರ್ಥವೇ ಸೇವೆ. ಯುವಜನರಿಗೆ ಶಿಕ್ಷಣದ ಜೊತೆಗೆ ಸಮಾಜ ಸೇವೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸಲು ಸೂಕ್ತ ಮಾರ್ಗದರ್ಶನ ನೀಡಿದ್ದಲ್ಲಿ ಅವರುಗಳು ಉತ್ತಮ ನಾಗರಿಕರಾಗುವುದರೊಂದಿಗೆ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹೇಳಿದರು.
ಅವರು ಇಂದು ನಗರದ ಬ್ರಹ್ಮಗಿರಿಯ ರೆಡ್‍ಕ್ರಾಸ್ ಭವನದ ಹೆನ್ರಿ ಡ್ಯುನಂಟ್ ಹಾಲ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಹಯೋಗದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಯುವ ರೆಡ್‍ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಿಗೆ ನಡೆದ ಒಂದು ದಿನದ ಯೂತ್ ರೆಡ್‍ಕ್ರಾಸ್ ಅಭಿವಿನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾನವೀಯತೆಯ ನೆಲೆಯಲ್ಲಿ ರೆಡ್‍ಕ್ರಾಸ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆÉ. ಎಲ್ಲಾ ಕಾಲೇಜುಗಳಲ್ಲಿಯೂ ಯುವ ರೆಡ್‍ಕ್ರಾಸ್ ಘಟಕಗಳನ್ನು ಸ್ಥಾಪಿಸುವುದರ ಮೂಲಕ ಉತ್ತಮ ಸಮಾಜದ ಚಿಂತನೆಯತ್ತ ವಿದ್ಯಾರ್ಥಿಗಳನ್ನು ಕೊಂಡೊಯ್ಯಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಯುವರೆಡ್‍ಕ್ರಾಸ್‍ನ ನೋಡೆಲ್ ಅಧಿಕಾರಿ ಡಾ. ಗಾಯತ್ರಿ ಎನ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿನ ರೆಡ್‍ಕ್ರಾಸ್ ಘಟಕವು ಸಮಾಜಮುಖಿ ಕಾರ್ಯಕ್ರಮಗಳನ್ನು ಯುವಜನತೆಯನ್ನು ಬಳಸಿಕೊಂಡು ಆಯೋಜಿಸುತ್ತಿದೆ. ಕಾಲೇಜುಗಳಲ್ಲಿ ರೆಡ್‍ಕ್ರಾಸ್ ಘಟಕವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತರಬೇತಿಯು ಅತ್ಯಗತ್ಯವಾಗಿದೆ ಎಂದರು.
ಕುಂದಾಪುರ ರೆಡ್‍ಕ್ರಾಸ್ ಘಟಕದ ಸಭಾಪತಿ ಎಸ್ ಜಯಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೆಡ್‍ಕ್ರಾಸ್ ಘಟಕದ ಸ್ವಯಂಸೇವಕರುಗಳು ತುರ್ತು ಸಂದರ್ಭಗಳಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ರಕ್ಷಣಾ ಚಟುವಟಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂಸ್ಥೆಯೆಂದರೆ ಅದು ರೆಡ್‍ಕ್ರಾಸ್ ಎಂದ ಅವರು ರೆಡ್‍ಕ್ರಾಸ್ ಸಂಸ್ಥೆಯು ರಕ್ತನಿಧಿ ಕೇಂದ್ರಗಳನ್ನು ಪ್ರಾರಂಭಿಸಿ, ಅಗತ್ಯವಿರುವವರಿಗೆ ರಕ್ತವನ್ನು ಒದಗಿಸುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಇತರರಿಗೆ ಸಹಾಯಮಾಡುವ ಪ್ರವೃತ್ತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ರೆಡ್‍ಕ್ರಾಸ್ ರಾಜ್ಯ ಆಡಳಿತ ಮಂಡಳಿಯ ಸದಸ್ಯ ವಿ.ಜಿ. ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯ ಟಿ. ಚಂದ್ರಶೇಖರ್, ನಿಕಟಪೂರ್ವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕುಂದಾಪುರ ರೆಡ್‍ಕ್ರಾಸ್ ಘಟಕದ ಖಜಾಂಜಿ ಶಿವರಾಂ ಶೆಟ್ಟಿ, ಕುಂದಾಪುರ ಯೂತ್ ರೆಡ್‍ಕ್ರಾಸ್ ಪ್ರೋಗ್ರಾಮಿಂಗ್ ಆಫೀಸರ್ ಸತ್ಯನಾರಾಯಣ ಪುರಾಣಿಕ್, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡೆಲ್ ಅಧಿಕಾರಿ ಜಯಶ್ರೀ, ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಅಧಿಕಾರಿ ಡಾ. ದಿವ್ಯಾ ಎಂ.ಎಸ್, ರೆಡ್‍ಕ್ರಾಸ್ ಹಾಗೂ ಡಿಡಿಆರ್‍ಸಿ ಸಿಬ್ಬಂದಿಗಳು, ವಿವಿಧ ಪ್ರಥಮ ದರ್ಜೆ ಕಾಲೇಜುಗಳ ಯುವ ರೆಡ್‍ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಸ್ವಾಗತಿಸಿ, ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಉಪನ್ಯಾಸಕ ಸನತ್ ಕೋಟ್ಯಾನ್ ನಿರೂಪಿಸಿ, ರೆಡ್‍ಕ್ರಾಸ್ ಸಂಸ್ಥೆಯ ಖಜಾಂಚಿ ರಮಾದೇವಿ ವಂದಿಸಿದರು.