ಉಡುಪಿ: ಪ್ರತಿ ಕುಟಂಬಗಳು ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ವೆಚ್ಚದ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸೂರ್ಯ ಘರ್ ಯೋಜನೆಯನ್ನು ಜಾರಿಗೊಳಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ವತಿಯಿಂದ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ, ಮಾಹಿತಿ ಕಾರ್ಯಾಗಾರ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿದ್ಯುತ್ ಹೊಂದಿಲ್ಲದ ಕುಟುಂಬದ ಮನೆಗಳಿಗೆ ಮೊದಲ ಆದ್ಯತೆ ನೀಡಿದಾಗ ಈ ಯೋಜನೆ ಯಶಸ್ವಿಯಾಗುತ್ತದೆ ಎಂದ ಅವರು, ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳು ಈ ಯೋಜನೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು. ಇದರ ಅಡಿಯಲ್ಲಿ ಒದಗಿಸಲಾಗುವ ಸಹಾಯಧನದ ಕುರಿತು ಮಾಹಿತಿ ನೀಡಬೇಕು ಎಂದರು.

ಸೂರ್ಯ ಘರ್ ಯೋಜನೆಯಡಿ ಸೌರ ಶಕ್ತಿ ಪ್ಯಾನೆಲ್‍ಗಳನ್ನು ಅಳವಡಿಸಿಕೊಳ್ಳಲು ಗ್ರಾಹಕರಿಗೆ 3 ಕಿ.ವ್ಯಾಟ್ ವರೆಗೆ ಮಾತ್ರ ಸಹಾಯಧನ ಮೊತ್ತವನ್ನು ನೀಡಲಾಗುತ್ತದೆ. 1 ಕಿ.ವ್ಯಾಟ್‍ಗೆ 30,000 ರೂ, 2 ಕಿ.ವ್ಯಾಟ್‍ಗೆ 60,000 ರೂ. ಮತ್ತು 3 ಕಿ.ವ್ಯಾಟ್‍ಗೆ 78 ಸಾವಿರ ರೂ. ಸಬ್ಸಿಡಿ ನೀಡಲಾಗುವುದು ಎಂದರು.

ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುವ ಈ ಯೋಜನೆಯು ಕ್ರಾಂತಿಕಾರಿಯಾಗಿ ಜಾರಿಗೆ ಬರಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು. 

ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಪ್ರತಿ ಮನೆಗಳ ಮೇಲ್ಛಾವಣೆಯಲ್ಲಿಯೂ ನವೀಕರಿಸಬಹುದಾದ ಇಂಧನವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಸೂರ್ಯ ಘರ್ ಯೋಜನೆಯನ್ನು ಅಳವಡಿಸಿಕೊಳ್ಳಬೇಕು ಎನ್ನುವುದು ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾಗಿದ್ದು, ಇದನ್ನು ಅಳವಡಿಸಲು ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಉಂಟಾಗುವ ಸಣ್ಣ ಪುಟ್ಟ ನ್ಯೂನ್ಯತೆಗಳನ್ನು ನಿವಾರಿಸಿಕೊಂಡು, ಸೋಲಾರ್ ಶಕ್ತಿಯನ್ನು ಬಳಸಿಕೊಳ್ಳುವಂತೆ ಮನಮುಟ್ಟುವಂತೆ ಪ್ರಚಾರ ಮಾಡುವುದರೊಂದಿಗೆ ಪ್ರತಿಯೊಬ್ಬರೂ ಇದನ್ನು ಬಳಸಿಕೊಳ್ಳುವಂತಾಗಲಿ ಎಂದರು.   

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಜನಸಾಮಾನ್ಯರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಹಲವಾರು ಜನಪರ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಜಾರಿಗೊಳಿಸಲಾಗಿದೆ. ಅದರಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಸಹ ಒಂದಾಗಿದ್ದು, ಇದನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವಾಗಬೇಕು ಎಂದರು. 

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಮೆಸ್ಕಾಂ ವತಿಯಿಂದ ಸೌರ ವಿದ್ಯುತ್ ಒದಗಿಸುವುದು ಮಹತ್ವಪೂರ್ಣ ಯೋಜನೆಯಾಗಿದ್ದು, ವಿದ್ಯುತ್ ಅಭಾವದಿಂದ ಇತ್ತೀಚಿನ ದಿನಗಳಲ್ಲಿ ಜಲ ವಿದ್ಯುತ್, ಉಷ್ಣ ವಿದ್ಯುತ್ ಮೇಲೆ ಅವಲಂಬಿತರಾಗಿದ್ದೇವೆ. ಇದು ಸಾಕಾಗುತ್ತಿಲ್ಲ. ಇದರ ಕೊರತೆಯನ್ನು ನೀಗಿಸಲು ಕೇಂದ್ರ ಸರಕಾರವು ಜಾರಿಗೆ ತಂದಿರುವ ಸೂರ್ಯ ಘರ್ ಯೋಜನೆಯಡಿ ಸುಲಭವಾಗಿ ದೊರೆಯುವ ಸೂರ್ಯನ ಶಾಖದಿಂದ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದ ಅವರು, ಇದನ್ನು ಅಳವಡಿಸಿಕೊಂಡವರಿಗೆ ಸಬ್ಸಿಡಿ ಸಹ ನೀಡಲಾಗುವುದು ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವರ್ಚುಲ್ ಮೂಲಕ ಶುಭ ಹಾರೈಸಿದರು. ಶಾಸಕ ಯಶ್‍ಪಾಲ್ ಎ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಮಂಗಳೂರು ಮೆಸ್ಕಾಂ ತಾಂತ್ರಿಕ ನಿರ್ದೇಶಕ ಮಹಾದೇವ ಸ್ವಾಮಿ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಸೂರ್ಯ ಘರ್ ಯೋಜನೆಯಡಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಮತ್ತು ಸಹಾಯಧನ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಂಗಳೂರು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಆರ್ ಜಯಕುಮಾರ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೆಜರ್ ಹರೀಶ್ ಜಿ, ಮೆಸ್ಕಾಂ ಮುಖ್ಯ ಇಂಜಿನಿಯರ್ ರವಿಕಾಂತ ಕಾಮತ್, ನಗರಸಭಾ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಪಿ.ಡಿ.ಓ ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

ಮೆಸ್ಕಾಂ ವೃತ್ತ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯಾಯ ಸ್ವಾಗತಿಸಿ, ಪ್ರಶಾಂತ್ ಹಾವಂಜೆ ನಿರೂಪಿಸಿ, ಲೆಕ್ಕಾಧಿಕಾರಿ ಗಿರೀಶ್ ವಂದಿಸಿದರು.