ಉಡುಪಿ: ಜಿಲ್ಲೆಯನ್ನು ಕ್ಷಯಮುಕ್ತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ನೂರು ದಿನಗಳ ಕ್ಷಯರೋಗ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಕ್ಷಯಮುಕ್ತ ವಾತಾವರಣ ನಿರ್ಮಿಸಲು ಹಾಗೂ ಕ್ಷಯರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ 100 ದಿನಗಳ ಅಭಿಯಾನ–ಕ್ಷಯರೋಗ ಉದ್ಘಾಟನಾ ಸಮಾರಂಭ ಹಾಗೂ ಕ್ಷಯ ಮುಕ್ತ ಗ್ರಾಮ ಪಂಚಾಯತ್ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಜಾಗತಿಕ ಮಟ್ಟದಲ್ಲಿ ಹೊರೆಯಾಗುತ್ತಿರುವ ಹಾಗೂ ಜನರನ್ನು ಭಯಭೀತರನ್ನಾಗಿಸುವಲ್ಲಿ ಕ್ಷಯರೋಗವು ಒಂದಾಗಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿನಿಂದಾಗಲೂ ಪ್ರಯತ್ನ ನಡೆಯುತ್ತಲೇ ಇದೆ ಎಂದ ಅವರು, ಸಮುದಾಯದಲ್ಲಿ ಕ್ಷಯರೋಗದ ಕುರಿತು ಮಾಹಿತಿ ನೀಡಿ, ಅವರುಗಳಲ್ಲಿ ಜಾಗೃತಿ ಮೂಡಿಸುವ ನೂರು ದಿನಗಳ ಕ್ಷಯಮುಕ್ತ ಅಭಿಯಾನಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದರು. 

ಜಿಲ್ಲೆಯನ್ನು ಕ್ಷಯರೋಗದಿಂದ ಮುಕ್ತವಾಗಿಸಲು ಸತತ ಪ್ರಯತ್ನ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಕ್ಷಯರೋಗ ಅಭಿಯಾನದಲ್ಲಿ, ಕ್ಷಯರೋಗವನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯೊಂದಿಗೆ ಸಂಬಂಧಿಸಿದ ಇಲಾಖೆಗಳು ಕೂಡ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದ ಅವರು, ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಸಮಾರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದರು.

ಅಭಿಯಾನದ ಅವಧಿಯಲ್ಲಿ ಕ್ಷಯ ರೋಗದ ಲಕ್ಷಣಗಳು, ಅದನ್ನು ತಡೆಗಟ್ಟುವಿಕೆ, ಕ್ಷಯರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿ, ತಪಾಸಣೆ ನಡೆಸುವುದು, ಕ್ಷಯರೋಗಿಗಳನ್ನು ಚಿಕಿತ್ಸೆಯ ವ್ಯಾಪ್ತಿಗೆ ಕರೆತರುವುದು ಸೇರಿದಂತೆ ಈ ಕಾಯಿಲೆಯ ಗಂಭೀರತೆಯ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಲಾಗುವುದು ಎಂದ ಅವರು,  ಗ್ರಾಮದ ಜನರ ಆರೋಗ್ಯ ತಪಾಸಣೆ, ಗುಣಮುಖವಾಗಿರುವ ಅಂಕಿ-ಅಂಶ, ಇತ್ಯಾದಿಗಳ ಆಧಾರದ ಮೇಲೆ ಶ್ರಮಿಸಿದ ಜಿಲ್ಲೆಯ 26 ಗ್ರಾಮ ಪಂಚಾಯತ್‍ಗಳನ್ನು ಕ್ಷಯ ಮುಕ್ತ ಗ್ರಾಮ ಪಂಚಾಯತ್‍ಗಳೆಂದು ಆಯ್ಕೆ ಮಾಡಲಾಗಿದೆ ಎಂದರು. 

ವಿಶ್ವ ಆರೋಗ್ಯ ಸಂಸ್ಥೆಯ ಮಂಗಳೂರು ರೀಜಿಯನ್ ಸಲಹೆಗಾರ ಡಾ. ಜೋಸ್ ಥೋಮಸ್ ಪ್ರಾಸ್ತಾವಿಕವಾಗಿ ಮಾತನಾಡಿ, 2025 ರ ಮಾರ್ಚ್ 24 ರ ಒಳಗಾಗಿ ನಮ್ಮ ರಾಜ್ಯದಲ್ಲಿ ಟಿ.ಬಿ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ನೂರು ದಿನಗಳ ಅಭಿಯಾನವನ್ನು ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಅಭಿಯಾನದಲ್ಲಿ ಕ್ಷಯರೋಗಿಗಳನ್ನು ಗುರುತಿಸಿ, ಅವರುಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು ಎಂದರು. 

ಈ ಸಂದರ್ಭದಲ್ಲಿ ಕ್ಷಯ ಮುಕ್ತ ಗ್ರಾಮ ಪಂಚಾಯತ್ ಎಂದು ಆಯ್ಕೆ ಮಾಡಲಾದ ಪಾಂಡೇಶ್ವರ, ಉಪ್ಪೂರು, ಹಾವಂಜೆ, ಚೇರ್ಕಾಡಿ, ನೀಲಾವರ, ಆರೂರು, ಕರ್ಜೆ, 38 ನೇ ಕಳ್ತೂರು, ಗಂಗೊಳ್ಳಿ, ಇಡೂರು-ಕುಜ್ಞಾಡಿ, ಯಡಮೊಗೆ, ಹೆಬ್ರಿ, ಮುದ್ರಾಡಿ, ದುರ್ಗಾ, ಈದು, ರೆಂಜಾಳ, ಮಜೂರು, ಕೋಟೆ, ಕುತ್ಯಾರು, ಬಡಾ, ಪಲಿಮಾರು, ನಾಡಾ, ಹಳ್ಳಿಹೊಳೆ, ಬೈರಂಪಳ್ಳಿ, ಬೆಳ್ಳೆ ಹಾಗೂ ಮಣಿಪುರ ಗ್ರಾಮ ಪಂಚಾಯತ್‍ಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಚಿದಾನಂದ ಸಂಜು, ಕ್ಷಯ ಮುಕ್ತ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಪಿ.ಡಿ.ಓಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

ಮಂಜುನಾಥ್ ಗಾಣಿಗ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.