ಉಜಿರೆ:  ರಾಜ್ಯದಲ್ಲಿ ಕನ್ನಡ ಭಾಷೆಗೆ ಪ್ರಭುತ್ವ ದೊರಕಬೇಕು. ಇತರ ಭಾಷೆಗಳು ಕನ್ನಡದ ಮೇಲೆ ಸವಾರಿ ಮಾಡಬಾರದು. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ ನಾಡು, ನುಡಿ ಮತ್ತು ಸಂಸ್ಕೃತಿಗೆ ಕಾಯಕಲ್ಪ ನೀಡಿ ಸಂರಕ್ಷಣೆ ಮಾಡಬೇಕು ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.

ಅವರು ಭಾನುವಾರ ಉಜಿರೆಯಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದದಲ್ಲಿ ಎಲ್ಲಾ ಚಟುವಟಿಕೆಗಳು ಕನ್ನಡದ ಮೂಲಕವೇ ನಡೆಯಬೇಕು. ಸಾಹಿತ್ಯದ ಸೊಗಡನ್ನು ಸವಿಯಲು ದೇಶೀ ಪರಂಪರೆ ಅನುಸರಿಬೇಕು ಎಂದು ಅವರು ಸಲಹೆ ನೀಡಿದರು. ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಾಹಿತಿಗಳಷ್ಟೇ ಸಹೃದಯ ಅಭಿಮಾನಿಗಳು ಕೂಡಾ ಮುಖ್ಯ ಪ್ರೇರಕರಾಗಿದ್ದಾರೆ. ಮೂರು ದಿನಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಆಶಯವಾದ ಸಾಹಿತ್ಯ-ಸಾಮರಸ್ಯ ಮತ್ತು ಸಮೃದ್ಧಿ ಈಡೇರಿದೆ ಎಂದು ಅವರು ಸಂತಸ ವ್ಯಕ್ತಪಡಿಸಿ ಸಂಘಟಕರು ಮತ್ತು ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸಿದರು.

ಬಾಕ್ಸ್ ಐಟಮ್: ತುಳುವನ್ನು ರಾಜ್ಯದ ಎರಡನೇ ಭಾಷೆಯಾಗಿ ಸರ್ಕಾರ ಅಧಿಕೃತ ಘೋಷಣೆ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಧ್ಯಕ್ಷ ಡಾ. ಎಂ. ಮೋಹನ ಆಳ್ವರ ನೇತೃತ್ವದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಈಗಾಗಲೇ  ಸಮಿತಿ ರಚಿಸಿದ್ದು ಸಿದ್ಧತೆಗಳು ನಡೆಯುತ್ತಿವೆ. ವರದಿಯನ್ನು ಪರಿಶೀಲಿಸಿ ಸರ್ಕಾರ ತುಳುವಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ನಿರ್ಧಾರ ಪ್ರಕಟಿಸಬೇಕೆಂದು ಅವರು ಒತ್ತಾಯಿಸಿದರು. ರಾಜ್ಯದ ಎರಡನೇ ಭಾಷೆಯಾಗಿ ತುಳುವಿಗೆ ಮಾನ್ಯತೆ ಸಿಕ್ಕಿದರೆ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ವೇಗ ಸಿಗಲಿದೆ. ಆಡಳಿತ, ಶಿಕ್ಷಣ ಮತ್ತು ನ್ಯಾಯಾಂಗ ಮೊದಲಾದ ರಂಗಗಳಲ್ಲಿ ತುಳುವಗೆ ಸೂಕ್ತ ಸ್ಥಾನ - ಮಾನ ಸಿಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಸಾಹಿತ್ಯಕ್ಕೆ ಸಹೃದಯ ಓದುಗರೇ ಜೀವಾಳ : ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಸಾಹಿತ್ಯಕ್ಕೆ ಓದುಗರೇ ಜೀವಾಳವಾಗಿದ್ದು ಸಾಹಿತ್ಯ ರಚನೆಯಿಂದಲೇ ಬದುಕು ಕಟ್ಟಿಕೊಂಡ ಅನೇಕ ಸಾಹಿತಿಗಳು ಇದ್ದಾರೆ. ಹ್ಯಾರಿ ಪ್ಯಾಟರ್‌ನಂತಹ ಲೇಖಕರು ತಮ್ಮ ಕೃತಿಗಳಿಂದಲೇ ವಿಶ್ವವಿಖ್ಯಾತರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು ಎಂದು ಸಲಹೆ ನೀಡಿದ ಅವರು ಎಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗ್ರಂಥಾಲಯದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಸಮಮಾರೋಪ ಭಾಷಣ ಮಾಡಿದ ಮುಂಬೈ ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ತಾಳ್ತಜೆ ವಸಂತ ಕುಮಾರ್, ಬಹುಮುಖೀ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರ ಮಾಡುತ್ತಿರುವ ಉಜಿರೆ ಒಂದು ಸಾಂಸ್ಕೃತಿಕ ಗ್ರಾಮ ಎಂದು ಬಣ್ಣಿಸಿದರು. ಕರಾವಳಿ ಕರ್ನಾಟಕ ಕನ್ನಡದ ಭದ್ರ ತಳಹದಿಯಾಗಿದೆ. ಕೋಮಲವಾದ ಕನ್ನಡವನ್ನು ಜಗ್ಗದೇ ಯೋಚಿಸಿ ಬಳಸಬೇಕು ಎಂದು ಅವರು ಸಲಹೆ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಸಾಧಕರನ್ನು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಸಿ.ಇ.ಒ. ಮಹಾಬಲೇಶ್ವರ ಎಂ.ಎಸ್. ಸನ್ಮಾನಿಸಿ ಅಭಿನಂದಿಸಿದರು.

ಸನ್ಮಾನಿತರು: ಡಾ. ಚಿದಾನಂದ ಕೆ.ವಿ. ಸುಳ್ಯ (ವೈದ್ಯಕೀಯ ಸೇವೆ) ಎಡ್ಚರ್ಡ್ ಡಿಸೋಜ, ನಿವೃತ್ತ ಯೋಧರು (ಪುತ್ತೂರು) ಡಾ. ಶ್ರೀಪತಿ ರಾವ್ ಪುತ್ತೂರು (ವೈದ್ಯಕೀಯ ಸೇವೆ), ಆರ್. ನಾಭಿರಾಜ ಪೂವಣಿ, ಉಜಿರೆ. (ಪತ್ರಕರ್ತರು) ಅಬೂಬಕ್ಕರ್ ಕೈರಂಗಳ, ಉಳ್ಳಾಲ (ಸಾಹಿತ್ಯ) ಪ್ರೊ ಮಧೂರು ಮೋಹನ ಕಲ್ಲೂರಾಯ, ಬೆಳ್ತಂಗಡಿ. (ಗಮಕ) ಕಮಲಾ ಭಟ್, ಮಂಗಳುರು (ಭರತನಾಟ್ಯ) ತನಿಯಪ್ಪ ನಲ್ಕೆ (ಕುಕ್ಕೆಜಾಲು, ಬೆಳ್ತಂಗಡಿ( ದೈವಾರಾಧನೆ) ಚೈತನ್ಯ ಕಲ್ಯಾಣತ್ತಾಯ, ಉಜಿರೆ (ಜ್ಯೋತಿಷ್ಯ) ಜೀವನ್‌ರಾಮ್ ಸುಳ್ಯ, ರಂಗಮನೆ, ಸಾಂಸ್ಕ್ರತಿಕ  ಕೇಂದ್ರ, ಮಾಸ್ಟರ್, ಅದ್ವೆತ್ ಕನ್ಯಾನ (ಚೆಂಡೆ ವಾದನ) ಧರ್ಮಸ್ಥಳ ಡಿ. ಹರ್ಷೇಂದ್ರ ಕುಮಾರ್ ಮತ್ತು ಉಜಿರೆಯ ಶರತ್‌ಕೃಷ್ಣ ಪಡ್ವೆಟ್ನಾಯ ಉಪಸ್ಥಿತರಿದ್ದರು.

ಯದುಪತಿ ಗೌಡ ಸ್ವಾಗತಿಸಿದರು. ಬೆಳಾಲ್ ರಾಮಕೃಷ್ಣ ಭಟ್ ಧನ್ಯವಾದವಿತ್ತರು. ಶಿಕ್ಷಕರದ ದೇವುದಾಸ ನಾಯಕ್ ಮತ್ತು ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.