ಉಜಿರೆ: ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ವಿದ್ಯಾರ್ಥಿಗಳು ಸೇವೆ ಹಾಗೂ ನಾಯಕತ್ವ ಗುಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಹೇಳಿದರು.

ಅವರು ಸೋಮವಾರ ಉಜಿರೆಯಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಅಂತರ ಕಾಲೇಜು ಉತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಬಾಲ್ಯದ ಸವಿನೆನಪುಗಳು ಜೀವನವಿಡೀ ನೆನಪಿರುತ್ತವೆ. ವ್ಯಕ್ತಿತ್ವ ವಿಕಸನವೇ ಶಿಕ್ಷಣದ ಗುರಿಯಾಗಿದ್ದು ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಸಂಸ್ಕಾರದೊಂದಿಗೆ  ವಿದ್ಯಾರ್ಥಿಗಳು ಸಭ್ಯ, ಸುಸಂಸ್ಕೃತ ನಾಗರಿಕರಾಗಲು ಪ್ರೇರಣೆ ನೀಡುತ್ತದೆ ಎಂದರು.

ಕೆ.ಪಿ.ಸಿ.ಸಿ. ಕಾರ್ಯದರ್ಶಿ ಅಶ್ವಿತ್‌ ಜೈನ್, ಮಹ್ಮದ್‌ ತುಂಬೆ, ಮತ್ತು ಪ್ರಸಾದ್‌ ಕುಮಾರ್ ಶುಭಾಶಂಸನೆ ಮಾಡಿದರು.   

ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ ಇಂತಹ ಉತ್ಸವಗಳು ಮಾನವೀಯ ಮೌಲ್ಯಗಳ ಉದ್ದೀಪನಕ್ಕೆ ಪ್ರೇರಕವಾಗಿವೆ ಎಂದರು.

ಎಸ್.ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಉಪಸ್ಥಿತರಿದ್ದರು.

ರೇಂಜರ್ ಲೀಡರ್ ಗಾನವಿ ಡಿ., ಸ್ವಾಗತಿಸಿದರು. ರೋವರ್ ಲೀಡರ್ ಪ್ರಸಾದ್ ಕುಮಾರ್ ಧನ್ಯವಾದವಿತ್ತರು.

ಭೂಮಿಕಾ, ಕೆ.ಎಲ್. ಜೈನ್ ಮತ್ತು ಮಾನಸ ಅಗ್ನಿಹೋತ್ರಿ ಕಾರ್ಯಕ್ರಮ ನಿರ್ವಹಿಸಿದರು.