ಉಜಿರೆ: ಜೈನಧರ್ಮದ ಸಂಪ್ರದಾಯದಂತೆ ಪ್ರತಿವರ್ಷ ಭಾದ್ರಪದ ಪಂಚಮಿಯಿಂದ ಹುಣ್ಣಿಮೆ ವರೆಗೆ ದಶಲಕ್ಷಣ ಪರ್ವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ. ಸೆ.20 ರಿಂದ 29ರ ವರೆಗೆ ಎಲ್ಲಾ ಜಿನಮಂದಿರ (ಬಸದಿ)ಗಳಲ್ಲಿ ಆಧ್ಯಾತ್ಮಿಕ ಉನ್ನತಿಗಾಗಿ ಜಪ, ತಪ, ಧ್ಯಾನ, ಸ್ವಾಧ್ಯಾಯದೊಂದಿಗೆ ದಶಲಕ್ಷಣ ಪರ್ವ ಆಚರಿಸುತ್ತಾರೆ. 

ಉತ್ತಮ ಕ್ಷಮಾ, ಉತ್ತಮ ಮಾರ್ದವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ ಮತ್ತು ಉತ್ತಮ ಬ್ರಹ್ಮಚರ್ಯ – ಇವು ದಶಧರ್ಮಗಳು. ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಇದೇ 20 ರಿಂದ 29ರ ವರೆಗೆ ಪ್ರತಿದಿನ ಬೆಳಿಗ್ಯೆ ಏಳು  ಗಂಟೆಯಿಂದ  ಮೂರೂ ಬಸದಿಗಳಲ್ಲಿ ಕ್ಷೀರಾಭಿಷೇಕ, ಅಷ್ಟವಿಧಾರ್ಚನಾ ಪೂಜೆ ಬಳಿಕ ದಶಧರ್ಮಗಳ ಚಿಂತನ-ಮಂಥನ ಮತ್ತು ಸ್ವಾಧ್ಯಾಯ ನಡೆಯಲಿದೆ ಎಂದು ಬಸದಿಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ತಿಳಿಸಿದ್ದಾರೆ.  

ಸೆ. 21 ರಂದು ಗುರುವಾರ ಹೊಂಬುಜ ಜೈನಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡುವರು ಇದೇ ಸಂದರ್ಭ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸ್ಮಾರಕ ವಿದ್ಯಾರ್ಥಿವೇತನವನ್ನೂ ವಿತರಿಸಲಾಗುವುದು.

ವೇಣೂರಿನಲ್ಲಿ ಬಾಹುಬಲಿ ಕ್ಷೇತ್ರದಲ್ಲಿ ಯಾತ್ರಿ ನಿವಾಸದಲ್ಲಿ ಸೆ. 20 ರಂದು ಬುಧವಾರ ಅಪರಾಹ್ನ 4 ಗಂಟೆಗೆ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ದಶಲಕ್ಷಣ ಪರ್ವ ಆಚರಣೆ ಉದ್ಘಾಟಿಸುವರು. ಬಳಿಕ ಹತ್ತು ದಿನಗಳಲ್ಲಿ ಪ್ರತಿದಿನ ವಿದ್ವಾಂಸರಿಂದ  ಧಾರ್ಮಿಕ ಉಪನ್ಯಾಸ ಆಯೋಜಿಸಲಾಗಿದೆ.

ದಶಲಕ್ಷಣಪರ್ವದ ಕೊನೆಯ ದಿನ “ಕ್ಷಮಾವಳಿ” ಆಚರಿಸುತ್ತಾರೆ. ಪರಸ್ಪರ ಮನ, ವಚನ, ಕಾಯದಿಂದ ಯಾವುದೇ ತಪ್ಪು ಮಾಡಿದಲ್ಲಿ ಕ್ಷಮೆ ಯಾಚಿಸಿ ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸ ಬೆಳೆಸುವುದೆ ಕ್ಷಮಾವಳಿಯ ಉದ್ದೇಶವಾಗಿದೆ.