ರಾಯಿ ರಾಜಕುಮಾರ ಮೂಡುಬಿದಿರೆ 

ನೂರು ವರ್ಷಗಳ ಕರ್ಮಯೋಗಿ ಬದುಕನ್ನು ಬಾಳಿದ ವಿಶ್ವೇಶ್ವರಯ್ಯನವರು ಎಲ್ಲ ಕೆಲಸವನ್ನೂ, ಎಲ್ಲ ಕೆಲಸದವರನ್ನೂ ಆದರಿಸಿ, ಗೌರವಿಸಿ, ಪೂಜಿಸಿದವರು. ಅದೃಷ್ಟ ಮನುಷ್ಯನ ಕೈಯಲ್ಲಿ ಇರುವ ಸಾಧನ ಎಂದು ಸದಾ ದೂರದೃಷ್ಟಿ ಯೊಂದಿಗೆ ಸಮಾಜಮುಖಿಯಾಗಿ ತುಡಿಯುತ್ತಿದ್ದವರು ಅವರು. ಹೀಗಾಗಿ ಅವರ ಕೈಂಕರ್ಯದಿಂದ ನಿರ್ಮಿತ ಸಾಧನೆ ಯೆಮನ್ ದೇಶದಲ್ಲೂ ಕಂಡುಬರುತ್ತದೆ. ಈ ಪ್ರಕಾರ ನಿಸ್ವಾರ್ಥ, ಪ್ರಾಮಾಣಿಕ ದುಡಿಮೆಗೆ ಇನ್ನೊಂದು ಹೆಸರೇ ವಿಶ್ವೇಶ್ವರಯ್ಯನವರು. 1955 ರ ಭಾರತ ರತ್ನ ವಿಶ್ವೇಶ್ವರಯ್ಯ ರಿಂದ ಒಂದು ಮೌಲ್ಯವನ್ನು ಪಡೆಯಿತು.

ಕಾವೇರಿ ನದಿಗೆ ಕನ್ನಂಬಾಡಿ ಅಣೆ ನಿರ್ಮಿಸಿ ಅಭೂತಪೂರ್ವ ಕೌಶಲ ಮೆರೆದ ವಿಶ್ವೇಶ್ವರಯ್ಯನವರು ಹಲವಾರು ನಗರಗಳಿಗೆ ಕುಡಿಯುವ ನೀರನ್ನು ಒದಗಿಸಿದ ಮಹಾನ್ ವ್ಯಕ್ತಿ. ಶರಾವತಿ ಅಣೆಯಿಂದ ವಿದ್ಯುತ್ ಉತ್ಪಾದನೆ ಮಾಡಿ ಮೈಸೂರನ್ನು ಬೆಳಗಿದ ಮುದ್ದೇನಹಳ್ಳಿಯಲ್ಲಿ 1860 ರ ಸಪ್ಟೆಂಬರ್ 15 ರಂದು ಜನಿಸಿದ ವಿಶ್ವೇಶ್ವರಯ್ಯನವರು ಪೂನಾದಲ್ಲಿ 1885 ರಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು. 1907 ರ ವರೆಗೆ ಮುಂಬೈ ಸರ್ಕಾರದಲ್ಲಿ, 1911 ರ ತನಕ ಹೈದರಾಬಾದ್ ನಿಜಾಮರಲ್ಲಿ ಸೇವೆ ಸಲ್ಲಿಸಿದರು. ತರುವಾಯ ಮೈಸೂರು ಮಹಾರಾಜರ ಪ್ರೀತಿಗೆ ಕಟ್ಟುಬಿದ್ದು ಮೈಸೂರು ಸರ್ಕಾರದ ದಿವಾನರಾಗಿ, ಪ್ರಧಾನ ಮಂತ್ರಿಯಾಗಿ ಖ್ಯಾತರಾದವರು.

ರಸ್ತೆ, ರೈಲು ಮಾರ್ಗ ವಿಸ್ತರಣೆ, ನೀರಾವರಿ-ಕೆರೆಕಟ್ಟೆ ನಿರ್ಮಾಣಗಳನ್ನು ವ್ಯವಸ್ಥಿತ ಗೊಳಿಸಿದರು. ಕೃಷ್ಣರಾಜಸಾಗರದ ನಿರ್ಮಾಣ, ಭದ್ರಾವತಿ ಕಬ್ಬಿಣ ಉಕ್ಕು ಕಾರ್ಖಾನೆಯ ಅಭಿವೃದ್ಧಿ, ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕು, ಸಾರ್ವಜನಿಕ ಗ್ರಂಥಾಲಯ, ಚೆಂಬರ ಆಫ್ ಕಾಮರ್ಸ್, ಕನ್ನಡ ಸಾಹಿತ್ಯ ಪರಿಷತ್, ಐ ಜಯಚಾಮರಾಜೇಂದ್ರ ಅವರಂತೆ ಶಿಕ್ಷಣ ತರಬೇತಿ ಸಂಸ್ಥೆ ಇತ್ಯಾದಿಗಳ ಸ್ಥಾಪನೆ ಹಾಗೂ ಇವುಗಳಿಂದಾಗಿ ಶಿಕ್ಷಣ, ಉದ್ಯೋಗ, ಸಾಹಿತ್ಯ, ತರಬೇತಿ, ನಿರ್ಮಾಣಗಳ ಕ್ಷೇತ್ರಗಳಲ್ಲಾದ ಅತ್ಯಪೂರ್ವ ಬದಲಾವಣೆ , ಅಭಿವೃದ್ಧಿಯನ್ನು ಜಗತ್ತೇ ಬೆರಗು ಗಣ್ಣಿನಿಂದ ನೋಡುವಂತೆ ಮಾಡಿದವರು ವಿಶ್ವೇಶ್ವರಯ್ಯನವರು. 

ಪ್ರತಿವರ್ಷದಂತೆ ಈ ವರ್ಷ 53 ನೇ ಎಂಜಿನಿಯರ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆಧುನಿಕ ಚಿಂತನೆಯೊಂದಿಗೆ ವಿಮರ್ಶಾತ್ಮಕ ಅವಲೋಕನ ಗೈದು ಅತ್ಯುತ್ತಮ ಕೌಶಲ್ಯಯುತ ನಿರ್ಮಾಣ ಮಾಡುವ ಎಂಜಿನಿಯರ್ ಗಳಿಂದ ಭೂತಪೂರ್ವ ನಿರ್ಮಾಣಗಳೇ ನಮ್ಮೆದುರು ಸಾದೃಶ್ಯಗೊಂಡಿವೆ. ಕಡುಬಡತನದಲ್ಲಿ ಬೆಳೆದರೂ ಮೈಸೂರು ರಾಜ್ಯಕ್ಕೆ ಅತ್ಯಪೂರ್ವ ಕೊಡುಗೆಗಳನ್ನು ನೀಡಿದ ಭಾರತ ರತ್ನ ವಿಶ್ವೇಶ್ವರಯ್ಯನವರು ಮುಂಚೂಣಿ ಸ್ಥಾನದಲ್ಲಿ ವಿರಾಜಮಾನರಾಗುವ ದಾರ್ಶನಿಕ ಎಂಜಿನಿಯರ್.