ರಾಯಿ ರಾಜಕುಮಾರ ಮೂಡುಬಿದಿರೆ
ಶಿಸ್ತು, ಕ್ಷಮೆ , ಕರುಣೆಯೇ ಮೈದಳೆದ ಶಿಕ್ಷಕರು ಸಮಾಜದಲ್ಲಿ ಮಾದರಿ ಸೇವೆ ಸಲ್ಲಿಸುವವರು. ವಿದ್ಯಾರ್ಥಿಗಳಿಗೆ ಹೆಚ್ಚಿನ ವಿಷಯ ಜ್ಞಾನ, ಭಾಷಾ ಕೌಶಲ್ಯ ಕಲಿಸುವಲ್ಲಿ ಸದಾ ಕಾರ್ಯ ತತ್ಪರನಾಗಿ ಯೋಚಿಸುವ ಶಿಕ್ಷಕ ನಿಜಕ್ಕೂ "ಗುರು" ಪದಕ್ಕೆ ಯೋಗ್ಯನಾದವನು. ಆದುದರಿಂದಲೇ ಹಿಂದಿನ ಕಾಲದಲ್ಲಿ ಸಮಾಜ ಗುರುಗಳಿಗೆ ಬಹಳ ಯೋಗ್ಯ ಗೌರವವನ್ನು ನೀಡುತ್ತಿತ್ತು. ಊರಿನಲ್ಲಿ ಶಿಕ್ಷಕರು ಬರುತ್ತಿದ್ದಾರೆ ಎಂದರೆ ಅವರಲ್ಲಿ ನ್ಯಾಯ, ನೀತಿ, ಸಾಮಾಜಿಕ ಅಭಿಪ್ರಾಯಗಳನ್ನು ಕೇಳುವ ಮೂಲಕ ಪ್ರತಿಯೊಂದಕ್ಕೂ ಮಾರ್ಗದರ್ಶನವನ್ನು ಪಡೆಯಲಾಗುತ್ತಿತ್ತು. ಏಕೆಂದರೆ ಅವರು ತಮ್ಮ ಘನತೆ, ಗಾಂಭೀರ್ಯಕ್ಕೆ ಸರಿಸಮನಾಗಿ ಎಲ್ಲ ದುಶ್ಚಟಗಳಿಂದ, ಅನಗತ್ಯ ಟೀಕೆ ಟಿಪ್ಪಣಿ ಗಳಿಂದ ದೂರವಿದ್ದು ಪ್ರತಿಯೊಬ್ಬರಿಗೂ ಮಾರ್ಗದರ್ಶನ ಮಾಡುತ್ತಾ ಗುರು/ಆಚಾರ್ಯ ಹುದ್ದೆಗೆ ಗುಣಮಟ್ಟವನ್ನು ತಂದು ಕೊಟ್ಟಿದ್ದರು.
ಆದರೆ ಗುರುಕುಲಗಳು ನಶಿಸಿ, ಆಧುನಿಕ ಶಾಲೆ-ಕಾಲೇಜುಗಳು, ಬಣ್ಣ ಬಣ್ಣದ ರೂಪದೊಂದಿಗೆ ಸಾಗರಗೊಂಡಂತೆ; ಆಧುನಿಕತೆಯ ಪ್ರಭಾವದಲ್ಲಿ ಸಮಾಜದ ಎಲ್ಲ ರೀತಿಯ ಜನರು ಶಿಕ್ಷಕರಾಗಿ ಸೇರಿಕೊಂಡಂತೆ; ಬೇರಾವುದೇ ಉದ್ಯೋಗ ಸಿಗದಾಗ ಅನಿವಾರ್ಯವಾಗಿ ಶಿಕ್ಷಕ ವೃತ್ತಿಗೆ ಬಂದವರ ಕಾರಣ; ಸಮಾಜದ ಇತರರ ಪ್ರಭಾವದಿಂದ ನಂಬಿಕೆ, ಭರವಸೆ ಗಳಿಗೆ ಕಿಲಾಂಜಲಿ ಇತ್ತು ಮೌಲ್ಯ, ಆದರ್ಶ, ಕರ್ತವ್ಯ ಮರೆತು ಅಡ್ಡ ಹಾದಿ ಹಿಡಿದು ದುಶ್ಚಟಗಳಿಗೆ ಬಲಿಯಾದ ಶಿಕ್ಷಕರಿಂದಾಗಿ, ಹಣ-ಜಾತಿ-ವಶೀಲಿ-ಬಾಜಿಗಳೆ ಮೇಲ್ಸ್ ತರಕ್ಕೆ ಬಂದ ಕಾರಣ ಶಿಕ್ಷಕ ಗುರು/ಆಚಾರ್ಯ ಪಟ್ಟಕ್ಕೆ ಏರುವ ಬದಲು ಅಧಪತನಕ್ಕೆ ತಿಳಿಯಲು ಕಾರಣನಾದನು.
ಶಾಲೆ, ಶಾಲಾ ಅಭಿವೃದ್ಧಿ ಸಮಿತಿ, ಸರಕಾರ, ಅಧಿಕಾರಿಗಳ ಎಂತಹ ಯಾವುದೇ ಅಡೆತಡೆಗಳಿದ್ದರೂ ಕೂಡ ಅದಾವುದಕ್ಕೂ ಸೊಪ್ಪು ಹಾಕದೆ ತಾನು ಶೈಕ್ಷಣಿಕವಾಗಿ ಮಾಡಬೇಕಾದ ಕೈಂಕರ್ಯದಲ್ಲಿ ಸದಾ ತೊಡಗಿರುತ್ತಾನೆ. ತನ್ನ ಶೈಕ್ಷಣಿಕ ವಿಚಾರ, ವಿಷಯ, ಜ್ಞಾನವನ್ನು ದೃಶ್ಯ, ಹಾವಭಾವ, ಧ್ವನಿ, ಚಟುವಟಿಕೆಗಳ ಮೂಲಕ ಮಕ್ಕಳ ಎದುರು ಪ್ರಸ್ತುತಪಡಿಸಿ ಎಲ್ಲಾ ಮಕ್ಕಳ ಮೆಚ್ಚುಗೆಗೆ ಶಿಕ್ಷಕ ಪಾತ್ರನಾಗುತ್ತಾನೆ. ಆದರೆ ಇಂತಹ ಕಲಿಕಾ ಅನುಭವ ವನ್ನು ರೂಪಿಸುವಲ್ಲಿ ಹಲವಾರು ಮಂದಿ ಎಡವುತ್ತಾರೆ. ಏಕೆಂದರೆ ಸಾಕಷ್ಟು ಬ್ಯಾಂಕ್ ಇತ್ಯಾದಿ ಪಡೆದವರು ತಿಳಿದದ್ದನ್ನು ತಿಳಿಸುವಲ್ಲಿ ಸೋತಿರುವುದನ್ನು ಗಮನಿಸಿದ್ದೇವೆ. ಆದರೆ ಯಾವ ಶಿಕ್ಷಕ ತನ್ನಲ್ಲಿರುವ ಜ್ಞಾನವನ್ನು ಸೂಕ್ತ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳ ಎದುರು ಪ್ರಸ್ತುತಪಡಿಸುತ್ತಾನೆಯೋ ಆತನೇ ಯಶಸ್ವಿ ಶಿಕ್ಷಕನಾಗಿ ಉತ್ತುಂಗಕ್ಕೆ ಏರಲು ಸಾಧ್ಯವಿದೆ.
ಬೋಧನೆಯೊಂದಿಗೆ ವಿದ್ಯಾರ್ಥಿಗಳಿಗೆ ಯಾವ ಶಿಕ್ಷಕ ಹೆಚ್ಚಿನ ವಿಷಯ ಜ್ಞಾನವನ್ನು ಎಲ್ಲ ರೀತಿಯ ನವೀನ ಮಾಧ್ಯಮಗಳನ್ನು ಬಳಸಿ ತಿಳಿಸುತ್ತಾನೆಯೋ. ವಿದ್ಯಾರ್ಥಿಯ ಸ್ವಂತ ಯೋಚನಾ ಸಾಮರ್ಥ್ಯವನ್ನು ಉದ್ಧೇಬನಗೊಳಿಸಿ ಅನ್ವಯಕ್ಕೆ ಬದಲಾಯಿಸಿ ಕೌಶಲ್ಯಯುಕ್ತ ತಿಳುವಳಿಕೆಯನ್ನು ಬೆಳೆಯಲು ಪ್ರೋತ್ಸಾಹಿಸುತ್ತಾನೆಯೋ ಆತನೇ ಗುರು/ಆಚಾರ್ಯ ಪಟ್ಟಕ್ಕೆ ಏರಲು ಸಾಧ್ಯ. ಇಂತಹ ಗುರುತರವಾದ ಗುಣಗಳ ಕಾರಣದಿಂದಾಗಿಯೇ ಸರ್ವಪಳ್ಳಿ ರಾಧಾಕೃಷ್ಣನ್ ರವರು ಸರ್ವ ಪೂಜಿತ ರಾಗಲು ಸಾಧ್ಯವಾಯಿತು. ಪ್ರಯತ್ನವಾದಿಗಳಾಗಿ ಮಗುವಿಗೆ ತನ್ನ ಜ್ಞಾನವನ್ನು ಧಾರೆ ಎರೆಯಲು ಸಾಧ್ಯವಾದವರು ಮಾತ್ರ ಗುರು ಪೂಜಿತರಾಗಿ ಉಳಿಯಲು ಸಾಧ್ಯವಿದೆ.
ಹಣ, ಜಾತಿ, ತೃಷೆ ಯ ಚಟಕ್ಕೆ ಬಲಿ ಬಿದ್ದ ಕೆಲವಾರು ಲಗಾಮಿ ಇಲ್ಲದ ಶಿಕ್ಷಕರ ದುರಾಚಾರ, ಅನಾಚಾರ ಗಳಿಂದಾಗಿ ಇಂದು ಇಡೀ ಶಿಕ್ಷಕ ಸಮುದಾಯ ತಲೆತಗ್ಗಿಸುವ ಪ್ರಮೇಯಕ್ಕೆ ಈಡಾಗಿದೆ. ಎಲ್ಲಿಯವರೆಗೆ ಶಿಕ್ಷಕನಲ್ಲಿ ತನ್ನ ಕೆಲಸದ ಬಗ್ಗೆ ಆಸ್ಥೆ, ಗೌರವ, ಬದ್ಧತೆ ಬೆಳೆಯುವುದಿಲ್ಲವೋ ; ಎಲ್ಲಿಯವರೆಗೆ ಜಾತಿ, ಹಣ ಬಿಟ್ಟು ದೇವರ ಸಮಾನ ಮಕ್ಕಳ ಶ್ರೇಯಸ್ಸನ್ನು ಬಯಸುವದಿಲ್ಲವೋ ಆತನಕ ಶಿಕ್ಷಕ ಗೌರವ, ಆದರ ಗಳಿಗೆ ಪಾತ್ರನಾಗಲು ಸಾಧ್ಯವಿಲ್ಲ. ಈ ಸಂಗತಿಯಲ್ಲಿ ಶಿಕ್ಷಕನಿಗೆ ಆತನು ಮಾಡಿದ ಕಾರ್ಯಕ್ಕೆ ಬೆಂಗಾವಲಾಗಿ ಸಮಾಜ, ಶಾಲಾ ಅಭಿವೃದ್ಧಿ ಸಮಿತಿ, ಅಧಿಕಾರಿಗಳು, ಸರಕಾರದ ಮಂದಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಶಿಕ್ಷಕನು ಸಂತುಷ್ಟ ನಾಗಿ ಅಭಿವೃದ್ಧಿಗೆ ಕೊಡುಗೆ ನೀಡಲು ತೊಡಗುತ್ತಾನೆ . ಶಿಕ್ಷಕ ದಿನಾಚರಣೆಯ ಈ ದಿನದಲ್ಲಾದರೂ ನೈಜ ಶಿಕ್ಷಕರಿಗೆ ನೈತಿಕ ಬಲ ಎಲ್ಲರಿಂದಲೂ ದೊರಕುವಂತಾಗಲಿ. ಶಿಕ್ಷಣಾಧಿಕಾರಿಗಳು ಸೇವೆ ನೀಡುವ ಶಿಕ್ಷಕರನ್ನು ಆಧರಿಸಿ ಗೌರವಿಸುವಂಥಾಗಲಿ ಎಂದು ಹಾರೈಸುವ.