ಪುತ್ತೂರು ಜುಲೈ 15:  ಸಂತ ಫಿಲೋಮಿನಾ ಕಾಲೇಜು, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಹಾಗೂ ಫಿಲೋಮಿನಾ ಕಾಲೇಜು ಪ್ರೌಢಶಾಲೆಯ ಎನ್ ಸಿ ಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ   ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪರ್ಲಡ್ಕದಲ್ಲಿ ಇಂದು ವನಮಹೋತ್ಸವವನ್ನು ಆಚರಿಸಲಾಯಿತು. 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಚಿತ್ರಾರವರು ಹಣ್ಣಿನ ಗಿಡವನ್ನು ನೆಟ್ಟು ವಿದ್ಯಾರ್ಥಿಗಳನ್ನುದ್ದೇಶಿಸಿ “ಅಳಿವಿನಂಚಿನಲ್ಲಿರುವ ಪರಿಸರವನ್ನು ಉಳಿಸಿ ಸುಂದರಗೊಳಿಸುವುದೇ ವನಮಹೋತ್ಸವದ ಮುಖ್ಯ ಉದ್ದೇಶವಾಗಿದೆ. ಈ ಭೂಮಿಯ ರಕ್ಷಕರಾದ ವೃಕ್ಷಗಳು ನಾವು ಉಸಿರಾಡುವ ಗಾಳಿಯನ್ನು ಶುದ್ಧೀಕರಿಸುತ್ತವೆ.  ಜೀವವೈವಿಧ್ಯಗಳಿಗೆ ಆಸರೆ ನೀಡುತ್ತವೆ. ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುತ್ತವೆ. ಅವುಗಳು ನಮ್ಮ ಗ್ರಹದ ಜೀವನಾಡಿ. ಆದುದರಿಂದ ಮರಗಳನ್ನು ನಮ್ಮ ಪರಿಸರದಲ್ಲಿ  ನೆಟ್ಟು ಪೋಷಿಸಬೇಕು. ಮರಗಳ ಅಸ್ಥಿತ್ವವಿಲ್ಲವೆಂದಾದಲ್ಲಿ ಮಾನವ ಹಾಗೂ ಇತರ ಜೀವರಾಶಿಗಳ ಜೀವನವು ಅಚಿಂತ್ಯ. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವಲ್ಲಿ ಫಿಲೋಮಿನಾ ವಿದ್ಯಾಸಂಸ್ಥೆಗಳ ಎನ್ ಸಿ ಸಿ ಘಟಕಗಳ ಪ್ರಯತ್ನ ಅಭಿನಂದನೀಯ” ಎಂದು ಹೇಳಿದರು. 

ಸಂತ ಫಿಲೋಮಿನಾ ಕಾಲೇಜಿನ ಎನ್ ಸಿ ಸಿ ಅಧಿಕಾರಿಯಾದ ಜೋನ್ಸನ್ ಡೇವಿಡ್ ಸಿಕ್ವೇರಾ ಸ್ವಾಗತಿಸಿದರು. ಸಂತ ಫಿಲೋಮಿನಾ ಪ್ರೌಢಶಾಲೆಯ ಎನ್ ಸಿ ಸಿ ಅಧಿಕಾರಿಯಾದ ಕ್ಲೆಮೆಂಟ್ ಪಿಂಟೋ ವಂದಿಸಿದರು. ಕಾಲೇಜಿನ ನೌಕಾದಳದ ಅಧಿಕಾರಿಯಾದ ತೇಜಸ್ವಿ ಭಟ್ ಕಾರ್ಯಕ್ರಮ ನಿರೂಪಿಸಿದರು. 

ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಉದಯ, ಅಧ್ಯಾಪಿಕೆಯರಾದ ಯಶೋದಾ ಮತ್ತು ಸುಂದರಿ, ಸಂತ ಫಿಲೋಮಿನಾ ಪ್ರೌಢಶಾಲೆಯ ಎನ್ ಸಿ ಸಿ ಘಟಕಗಳ ಅಧಿಕಾರಿಗಳಾದ ನರೇಶ್ ಲೋಬೋ ಹಾಗೂ ರೋಶನ್ ಸಿಕ್ವೆರಾ ಹಾಗೂ 5 ಎ ಎನ್ ಒ ಗಳು 45 ಕೆಡೆಟ್ ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸುಮಾರು 25 ಹಣ್ಣುಗಳ ಹಾಗೂ ಔಷಧೀಯ ಗಿಡಗಳನ್ನು ಈ ಸಂದರ್ಭದಲ್ಲಿ ಶಾಲಾ ಪರಿಸರದಲ್ಲಿ ನೆಡಲಾಯಿತು.