ಮಂಗಳೂರು, ನವೆಂಬರ್ 28: ಪಂಚಾಯತಿ ರಾಜ್ಯ ಗ್ರಾಮ ಸ್ವರಾಜ್ಯ ಪುಸ್ತಕವನ್ನು ಬಿಡುಗಡೆ ಮಾಡಿದ ಮಾಜೀ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಗ್ರಾಮ ಸ್ವರಾಜ್ಯ ಎಂಬುದು ಗಾಂಧೀಜಿಯವರಿಂದ ಬಂದ ಪರಿಕಲ್ಪನೆ. ರಾಜೀವ್ ಗಾಂಧಿಯವರು ಅದನ್ನು ಸಾಕಾರಗೊಳಿಸಿದರು. ನೆಹರೂ ಕಾಲದಲ್ಲಿ ಬಲವಂತ್ ರಾವ್ ಸಮಿತಿಯಿಂದ ಪಂಚಾಯತ್‌ರಾಜ್ ಹುಟ್ಟಿದರೂ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಲೋಕ ಪ್ರಿಯ ಗೊಳಿಸಿದವರು ರಾಜೀವ್ ಗಾಂಧಿ. ಈ ಸಂಬಂಧವಾಗಿ ಬಹುಮತ ಇದ್ದಾಗಲೂ ಸರಕಾರದ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಹೋದವರು ರಾಜೀವ್ ಗಾಂಧಿ. ಅದನ್ನು ಕಾಂಗ್ರೆಸ್ ಸರಕಾರ ಮತ್ತೆ ಜಾರಿಗೆ ತಂದಾಗ ಇಡೀ ದೇಶದಲ್ಲಿ ಮೊದಲಿಗೆ ಈ ರಾಜ್ಯದಲ್ಲಿ ಜಾರಿಗೆ ತಂದುದು ನನ್ನ ಸರಕಾರ. ಪಂಚಾಯತಿಯಲ್ಲಿ ಆಗ 33% ಮೀಸಲಾತಿ ಇದ್ದರೂ 50% ಮಹಿಳೆಯರು ಗೆದ್ದರು. ಇದು ನಮ್ಮ ಯಶಸ್ಸು. ಪಂಚಾಯತಿಗಳಲ್ಲಿ ಅಧ್ಯಕ್ಷತೆಯಲ್ಲೂ ಕೂಡ ಎಲ್ಲರಿಗೂ ಅವಕಾಶ ಆಗುವಂತೆ ಮಾಡಿದ್ದು ಕಾಂಗ್ರೆಸ್ ಎಂದು ವೀರಪ್ಪ ಮೊಯ್ಲಿ ಅವರು ಹೇಳಿದರು.
ಲೇಖಕರಾದ ವಿಲ್ಫ್ರೆಡ್ ಡಿಸೋಜಾ ಅವರು ತನ್ನ ಪತ್ರಿಕಾ ಕೃಷಿಯ ಬಗೆಗೆ ಹೇಳಿ ಮೈಸೂರಿನಲ್ಲಿ ನಜೀರ್‌ಸಾಬ್ ಪಂಚಾಯತ್‌ರಾಜ್ ಸೇರಿದ ಮೇಲೆ ಪಂಚಾಯತ್‌ರಾಜ್ ವಿಷಯ ಇನ್ನಷ್ಟು ಗಟ್ಟಿಯಾಗಿ ಈ ಪುಸ್ತಕ ಬರೆದು ಮುಗಿಸಿದ್ದೇನೆ ಎಂದು ಹೇಳಿದರು.
ಪಂಚಾಯತ್‌ರಾಜ್ ಬಗೆಗೆ ನನಗೆ ವಿಶೇಷ ಆಸಕ್ತಿ ಇತ್ತು. ಹಾಗಾಗಿ ಎಂಜಿನಿಯರಿಂಗ್, ರಾಜಕೀಯ ಶಾಸ್ತ್ರದ ಎಂಎಗೆ ನಿಲ್ಲಿಸದೆ ಪಂಚಾಯತ್‌ರಾಜ್ ವಿಷಯದಲ್ಲಿ ಡಾಕ್ಟರೇಟ್ ಮಾಡಿದೆ. ವಿಲ್ಪ್ರೆಡ್ ಡಿಸೋಜಾ ಅವರು ಪತ್ರಿಕೆಯಲ್ಲಿ ಸರಣಿಯಾಗಿ ಬರೆದುದರಿಂದ ಅವರ ಈ ಪಂಚಾಯತ್‌ರಾಜ್ ಪುಸ್ತಕವನ್ನು ನಮ್ಮ ಟ್ರಸ್ಟ್ ಮೂಲಕ ಪ್ರಕಟಿಸಿದ್ದೇವೆ ಎಂದು ಪ್ರಕಾಶಕ ಮಂಜುನಾಥ ಭಂಡಾರಿಯವರು ಪ್ರಾಸ್ತಾವಿಕವಾಗಿ ಹೇಳಿದರು. ಹಾಗೆಯೇ ಇದರ ಬಿಡುಗಡೆಗೆ ವೀರಪ್ಪ ಮೊಯ್ಲಿ ಅವರೇ ಸರಿ ಎಂದು ತೀರ್ಮಾನಿಸಿದೆ ಎಂದೂ ಭಂಡಾರಿ ಹೇಳಿದರು.
ಮೊಹಮ್ಮದ್ ಬಡಗನ್ನೂರು ಸಾಂದರ್ಭಿಕವಾಗಿ ಪಂಚಾಯತ್‌ರಾಜ್ ವಿವರದೊಡನೆ ಸ್ವಾಗತಿಸಿದರು. ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಮಾಜೀ ಶಾಸಕಿ ಶಕುಂತಲಾ ಶೆಟ್ಟಿ ಉಪಸ್ಥಿತರಿದ್ದರು.