ಮಂಗಳೂರು: ಕಳೆದ ಹದಿನೈದು ವರುಷಗಳಲ್ಲಿ ವಿಶ್ವ ಕೊಂಕಣಿ ಕೇಂದ್ರ ನಿಯೋಜಿಸಿದ ಹತ್ತು ಕೊಂಕಣಿ ಶಿಕ್ಷಕರು ಮೂರು ಕರಾವಳಿ ಜಿಲ್ಲೆಗಳ ಹನ್ನೇರಡು ಶಾಲೆಗಳಲ್ಲಿ ತೃತೀಯ ಭಾಷೆ ಕೊಂಕಣಿಯ ಕಲಿಕೆಯನ್ನು ನಿರಂತರವಾಗಿ ನಡೆಸಿ ಬಂದಿದ್ದಾರೆ.
ವಾರ್ಷಿಕವಾಗಿ 300 ವಿದ್ಯಾರ್ಥಿಗಳ ಲೆಕ್ಕದಲ್ಲಿ ಇಂದಿನ ತನಕ 4000 ವಿದ್ಯಾರ್ಥಿಗಳು ಕೊಂಕಣಿ ಭಾಷೆಯನ್ನು ಓದಲು ಹಾಗೂ ಬರೆಯಲು ಸಶಕ್ತರಾಗಿದ್ದಾರೆ. ಹತ್ತು ವರುಷಗಳ ಹಿಂದೆ ಮೊದಲ ಬ್ಯಾಚನಿಂದ ಇಂದಿನ ತನಕ SSLC ರಾಜ್ಯ ಬೋರ್ಡ ಪರೀಕ್ಷೆಯಲ್ಲಿ 100% ಉತ್ತೀರ್ಣರಾಗಿರುವ ಮೊದಲ ದಾಖಲೆಯಾಗಿದ್ದು ಮಂಗಳೂರಿನ ನಲಂದಾ ಆಂಗ್ಲ ಮಾಧ್ಯಮ ಶಾಲೆಯ ಪೂರ್ಣಿಮಾ ಪ್ರಭು 2023ರ ಪರೀಕ್ಷೆಯಲ್ಲಿ ಪ್ರಥಮ ಬಾರಿ ಕೊಂಕಣಿ ತೃತೀಯ ಭಾಷೆಯಲ್ಲಿ 100ರಲ್ಲಿ ನೂರು ಅಂಕ ಪಡೆದು ಇತಿಹಾಸ ನಿರ್ಮಿಸಿದ್ದರು. ಇಂದಿನ ಸಾಲಿನಲ್ಲಿ ಇದೇ ಶಾಲೆಯ ವಿದ್ಯಾ ಬಾಳಿಗಾ, ಜಯಶ್ರಿ ಕಾಮತ,ವಿಧಿ ಪುರೊಹಿತ ಹಾಗೂ ಗಂಗೊಳ್ಳಿಯ ಎಸ್.ವಿ.ಎಸ್ ಶಾಲೆಯ ಮಾನ್ಯಾ ಖಾರ್ವಿ ಹಾಗೂ ಅಮುಲ್ಯಾ ಖಾರ್ವಿ ಸಹಿತ ಐದು ವಿದ್ಯಾರ್ಥಿಗಳು ನೂರು ಅಂಕಗಳನ್ನು ಪಡೆದು ಒಟ್ಟು 45 ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ 100% ಫ಼ಲಿತಾಂಶ ದಾಖಲಾಗಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಗೌರವ ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ್ ಪೈ ತಿಳಿಸಿದ್ದಾರೆ.