ಮಂಗಳೂರು: ವೆನ್ಲಾಕ್ ಆಸ್ಪತ್ರೆಗೆ ಹೆಚ್ಚುವರಿ ವೆಂಟಿಲೇಟರ್ ಇರುವ ಹಾಸಿಗೆ ಮಂಜೂರು ಮಾಡುವಂತೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ ನೇತೃತ್ವ ನಿಯೋಗ ಬುಧವಾರ ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಿತು.

“ದ.ಕ. ಜಿಲ್ಲೆಯ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 270 ಹಾಸಿಗೆಗಳ ವ್ಯವಸ್ಥೆ ಇದೆ. ಕೇವಲ 70 ಹಾಸಿಗೆಗಳಿಗೆ ಮಾತ್ರ ವೆಂಟಿಲೇಟರ್ ಸೌಲಭ್ಯ ಇದ್ದು, ಈ ಪೈಕಿ 70 ಹಾಸಿಗೆಯಲ್ಲಿ 20 ನಾನ್ ಕೋವಿಡ್ ಮತ್ತು ತುರ್ತು ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಉಳಿದ 50 ಹಾಸಿಗೆಗಳಲ್ಲಿ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿದಿನ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ಗಮನಿಸಿದಾಗ ಬೆಂಗಳೂರಿನ ಪರಿಸ್ಥಿತಿ ಇಲ್ಲಿ ಕೂಡ ನಿರ್ಮಾಣಗೊಳ್ಳುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಆದುದರಿಂದ ತಾವು ಕೇಂದ್ರ, ರಾಜ್ಯ ಸರಕಾರಕ್ಕೆ ತಕ್ಷಣ ಶಿಫಾರಸು ಮಾಡಿ ವೆನ್ಲಾಕ್ ಆಸ್ಪತ್ರೆಗೆ ಹೆಚ್ಚಿನ ವೆಂಟಿಲೇಟರ್‌ಗಳ ಮಂಜೂರು ಮಾಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಮ.ನ.ಪಾ ವಿಪಕ್ಷ ನಾಯಕ ಎ.ಸಿ.ವಿನಯರಾಜ್, ಕಾರ್ಪೊರೇಟರ್ ಗಳಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್ ಪೂಜಾರಿ, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಜಿಲ್ಲಾ ಕಾಂಗ್ರೆಸ್ ಓಬಿಸಿ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ವಿಕಾಶ್ ಶೆಟ್ಟಿ ನಿಯೋಗದಲ್ಲಿದ್ದರು.