ಲೇಖನ: ರಾಯಿ ರಾಜಕುಮಾರ ಮೂಡುಬಿದಿರೆ
ದೇಶದ ಪ್ರತಿ ರಾಜ್ಯದಲ್ಲೂ ರಾಜ್ಯಮಟ್ಟದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿವೆ.

ಅದಕ್ಕೆ ಪ್ರತ್ಯೇಕ ಸಚಿವರು, ಕಲ್ಯಾಣ ಸಮಿತಿ ಎಲ್ಲವೂ ಇದೆ. ಅದೇ ರೀತಿ ಪ್ರತಿ ಜಿಲ್ಲೆಗೂ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿ ಜಿಲ್ಲಾ ಮಹಿಳೆಯರ ಮಕ್ಕಳ ಕಲ್ಯಾಣ ಅಧಿಕಾರಿಗಳು, ಸಮಿತಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಪ್ರತಿ ತಾಲೂಕಿನಲ್ಲಿ ಕೂಡ ಅಂತಹ ಕಲ್ಯಾಣ ಅಧಿಕಾರಿಗಳು, ಸಮಿತಿ ತಾಲೂಕು ತಹಸಿಲ್ದಾರರ ಸುಪರ್ದಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
ಅದೇ ರೀತಿ ಪ್ರತಿ ಗ್ರಾಮ, ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಕೂಡ ಗ್ರಾಮ ಅಭಿವೃದ್ಧಿ ಅಧಿಕಾರಿಗಳು, ಸಮಿತಿಗಳು ಕಾರ್ಯನಿರ್ವಹಿಸುತ್ತವೆ.
ಇಷ್ಟೊಂದು ಪ್ರಮಾಣದ ಅಧಿಕಾರಿಗಳು, ಸಮಿತಿಗಳು ಅಧಿಕಾರದಲ್ಲಿ ಇದ್ದು ಕೂಡ ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ಮೇಲೆ ಅಲ್ಲಲ್ಲಿ ದೌರ್ಜನ್ಯ, ದಬ್ಬಾಳಿಕೆ, ದುರಾಚಾರ ನಡೆಯುತ್ತಿದೆ. ಇಂತಹ ಅಧಿಕಾರಿಗಳು, ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು, ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಎಷ್ಟು ಶಾಲೆಗಳಿಗೆ, ಮಹಿಳಾ ಸಂಘಗಳಿಗೆ ಭೇಟಿ ನೀಡಿ ಮಾಹಿತಿಯನ್ನು ನೀಡುವ ಮೂಲಕವಾಗಿ ಎಚ್ಚರಿಸುವ ಕೆಲಸವನ್ನು ನಿರ್ವಹಿಸುತ್ತಿದ್ದಾರ? ಎಷ್ಟು ಮಂದಿ ಅಧಿಕಾರಿಗಳು, ಸಮಿತಿಯವರ ಫೋನ್ ನಂಬರ್ಗಳು ಶಾಲೆ, ಮಹಿಳಾ ಸಂಘ, ಸ್ವಸಹಾಯ ಸಂಘಗಳವರ ಬಳಿಯಲ್ಲಿ ಇವೆ? ಈ ಪ್ರಶ್ನೆಗೆ ಹೆಚ್ಚಿನ ಪಕ್ಷ ಉತ್ತರ ಶೂನ್ಯ ಸಂಪಾದನೆಯೇ ಆಗಿರಬಹುದು.
ಮೇಲ್ಕಂಡ ಹೆಚ್ಚಿನ ಅಧಿಕಾರಿಗಳು ಒಂದು ಫ್ಯಾನಿನ ಅಡಿಯಲ್ಲಿ ಆರಾಮವಾಗಿ ಕುಳಿತಿರಬಹುದು ಅಥವಾ ಕಚೇರಿಯ ಹೆಸರಿನಲ್ಲಿ ತಮ್ಮ ಸ್ವಂತ ಕಾರ್ಯದಲ್ಲಿ ತೊಡಗಿರಬಹುದು.. ಇಲ್ಲವೆಂದಾದಲ್ಲಿ ತಾಲೂಕು ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ರಾಜ್ಯಾಧಿಕಾರಿಗಳು ಬಳಿಯಲ್ಲಿ ಎಷ್ಟು ಮಂದಿ ಎಷ್ಟು ಶಾಲೆ, ಎಷ್ಟು ಮಹಿಳಾ ಸ್ವಸಹಾಯ ಅಥವಾ ಮಹಿಳಾ ಸಂಘಗಳಿಗೆ ವಾರದಲ್ಲಿ ಎಷ್ಟು ಬಾರಿ ಭೇಟಿ ನೀಡಿ ಮಾಹಿತಿಯನ್ನು ನೀಡಿದ್ದಾರೆಂದು ಯಾರಾದರೂ ಮೇಲ್ಕಂಡ ಅಧಿಕಾರಿಗಳು ತಿಳಿಸಬಹುದೇ? ಸಾಧ್ಯವೇ ಇಲ್ಲ ಏಕೆಂದರೆ ವಾರದಲ್ಲಿ ಬಿಡಿ, ಕನಿಷ್ಠ ತಿಂಗಳಿಗೆ ಒಂದು ಬಾರಿಯೂ ಕೂಡ ಭೇಟಿ ನೀಡಿರಲು ಸಾಧ್ಯವೇ ಇಲ್ಲ. ಹೀಗಿರುವಾಗ ಇಷ್ಟು ಮಂದಿ ಅಧಿಕಾರಿಗಳು, ಸದಸ್ಯರು, ಸಮಿತಿಗಳು ಯಾವ ಪುರುಷಾರ್ಥಕ್ಕೆ? ಕೇವಲ ಹಣ ಕೊಳ್ಳೆ ಹೊಡೆಯುವುದಕ್ಕಾಗಿಯೇ?
ಅಧಿಕಾರಿ, ಸಮಿತಿಯ ಅಧ್ಯಕ್ಷರು, ಸದಸ್ಯರು ಸ್ವತಹ ಭೇಟಿ ನೀಡಿ ಅವರ ಇರುವಿಕೆಯನ್ನು ಸಾರ್ವಜನಿಕರೆದುರು ತೋರ್ಪಡಿಸುವುದಿಲ್ಲವೆಂದಾದರೆ ಊರಿನಲ್ಲಿರುವ ಯಾರಿಗೆ ಆಗಲಿ, ಯಾರನ್ನು ಸಂಪರ್ಕಿಸಬೇಕೆಂದು ತಿಳಿಯುವುದಾದರೂ ಹೇಗೆ? ಹೀಗಾಗಿಯೇ ಇಂದಿಗೂ ಕೂಡ ಶಾಲೆ, ಕಾಲೇಜು, ಸಂಘ, ಸಂಸ್ಥೆಗಳಲ್ಲಿ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿದೆ. ಏಕೆಂದರೆ ಅಧಿಕಾರಿಗಳು ಎಸಿ ರೂಮು, ಫ್ಯಾನ್ ಗಳ ಅಡಿಯಲ್ಲಿ ಕುಳಿತು"ಎಲ್ಲವೂ ಸರಿಯಾಗಿವೆ'' ಎಂಬ ದೃಢೀಕರಣ ಬರೆದು ಸಹಿ, ಮುದ್ರೆ ಒತ್ತಿ ಕಳುಹಿಸುತ್ತಿದ್ದಾರೆ.
ಹೀಗಾಗಿ ಕನಿಷ್ಠ ತಿಂಗಳಿಗೆ ಎರಡು ಬಾರಿಯಾದರೂ ಪ್ರತಿ ಗ್ರಾಮ, ಪಟ್ಟಣ, ನಗರ ಪಂಚಾಯತ್ನ ಸದಸ್ಯರು ತಮಗೆ ಸಮಯವಿದ್ದಾಗ ತಾವೇ ಸ್ವತಹ ಭೇಟಿ ನೀಡಿ ಅಥವಾ ಒಂದು ನಿರ್ದಿಷ್ಟ ದಿನದಂದು ಆಯಾ ಗ್ರಾಮದ, ಪಟ್ಟಣದ, ನಗರದ ಅಧಿಕಾರಗಳೊಂದಿಗೆ ಕಡ್ಡಾಯವಾಗಿ ಪ್ರತಿ ಶಾಲೆಗೂ, ಕಾಲೇಜುಗೂ, ಸ್ವಸಹಾಯ ಸಂಘ, ಮಹಿಳಾ ಸಂಘಗಳಿಗೆ ಭೇಟಿ ಇತ್ತು ಅಲ್ಲಿಯ ಎಲ್ಲರಿಗೂ ಮಾಹಿತಿ, ಸಹಾಯ ಸಂಖ್ಯೆಗಳನ್ನು ಒದಗಿಸಿ ಸ್ಪಂದಿಸುವ ಕೆಲಸ ಮಾಡಬೇಕು. ಈ ಪ್ರಕಾರ ಜನರೊಂದಿಗೆ ಯುಕ್ತ ಹಾಗೂ ಯೋಗ್ಯವಾಗಿ ಸ್ಪಂದಿಸಿದರೆ ಪ್ರತಿ ಪ್ರದೇಶದ ಮಂದಿಯು, ಮಕ್ಕಳು ಎಚ್ಚೆತ್ತು ತಮಗಾಗುತ್ತಿರುವ ತೊಂದರೆ, ತಮ್ಮ ಪ್ರದೇಶದಲ್ಲಾಗುತ್ತಿರುವ ಅಕ್ರಮಗಳನ್ನು ಸಾರ್ವಜನಿಕವಾಗಿ, ಅಥವಾ ಗುಪ್ತವಾಗಿ ತಿಳಿಸಿ ತಮ್ಮ ಹಲವಾರು ತೊಂದರೆ, ತಕರಾರುಗಳಿಗೆ ಬಹಳ ಶೀಘ್ರ ಪರಿಹಾರ ಪಡೆಯಲು ಸಾಧ್ಯವಾಗಲಿದೆ. ಅದೇ ರೀತಿ ಪ್ರತಿಯೊಬ್ಬ ಜನಪ್ರತಿನಿಧಿಯು ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ಪ್ರತೀ ತಾಲೂಕಿನಲ್ಲಿ ಜನ ಸಂಪರ್ಕ, ಅಹವಾಲು ಸಾರ್ವಜನಿಕ ಸಭೆಗಳನ್ನು ನಡೆಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಇಂತಹ ಕ್ರಮಗಳಿಂದ ಸಾಕಷ್ಟು ಬದಲಾವಣೆ, ಪರಿಹಾರ ದೊರಕಬಹುದಾಗಿದೆ.