ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮಂಗಳೂರು ತೋಟಗಾರಿಕಾ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ರೈತ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಮತ್ತು ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದ ಸಹಯೋಗದೊಂದಿಗೆ ಸುಧಾರಿತ ಮಲ್ಲಿಗೆ ಕೃತಿಯ ಕುರಿತು ಕಾರ್ಯಗಾರ ಜುಲೈ 20ರಂದು ನಡೆಯಿತು. ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಕೆ ಉದ್ಘಾಟಿಸಿದರು.
ಅವರು ತಮ್ಮ ಭಾಷಣದಲ್ಲಿ ಮಲ್ಲಿಗೆ ಕೃಷಿ ವಾಣಿಜ್ಯ ಬೆಳೆಯಾಗಿದ್ದು ಉತ್ತಮ ರೀತಿಯಲ್ಲಿ ಬೆಳೆಯುವುದರಿಂದ ಸಾಕಷ್ಟು ಹಣವನ್ನು ಕೃಷಿಕರು ಸಂಪಾದಿಸಬಹುದಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಎಸ್ ವಿ ಎಸ್ ಕಾಲೇಜು ಬಂಟ್ವಾಳದ ಪ್ರಾಧ್ಯಾಪಕ ಡಾ. ವಿನಾಯಕ ಕೆ ಎಸ್ ಮಾತನಾಡಿ ವ್ಯವಸ್ಥಿತವಾದ ರೀತಿಯಲ್ಲಿ ಮಲ್ಲಿಗೆಯನ್ನು ಉತ್ತಮ ಇಳುವರಿಯ ಗೊಬ್ಬರದೊಂದಿಗೆ ಬೆಳೆಯುವುದರಿಂದ ಸಾಕಷ್ಟು ಲಾಭವನ್ನು ಗಳಿಸಬಹುದಾಗಿದೆ. ಮದುವೆ, ಇತ್ಯಾದಿ ಸಂದರ್ಭಗಳಲ್ಲಿ ಹಾಗೂ ದೇವಾಲಯದ ವಿವಿಧ ಕಾರ್ಯಗಳಲ್ಲಿ ಮಲ್ಲಿಗೆಯ ಉಪಯೋಗ ಅತ್ಯಂತ ಹೆಚ್ಚು ಇರುವುದರಿಂದ ಬೆಲೆಯು ಅಂತಹ ಸಮಯಗಳಲ್ಲಿ ಹತ್ತಾರು ಪಟ್ಟು ಹೆಚ್ಚಾಗಿರುತ್ತದೆ ಆದುದರಿಂದ ಕೃಷಿಕರು ಮಲ್ಲಿಗೆ ಬೆಳೆಯನ್ನು ಬಹಳ ಉತ್ತಮ ರೀತಿಯಲ್ಲಿ ಮುಂದುವರಿಸಬಹುದಾಗಿದೆ ಎಂದು ಪ್ರಾತ್ಯಕ್ಷಿಕೆ ಮೂಲಕ ಸುಧಾರಿತ ಕ್ರಮವನ್ನು ತೋರಿಸಿಕೊಟ್ಟರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ನಾಗರಾಜ ಶೆಟ್ಟಿ ಅಂಬೂರಿ, ಸಂಘದ ಅಧ್ಯಕ್ಷ ವಾಸುದೇವ ಭಟ್, ಕಾರ್ಯನಿರ್ವಹಣಾಧಿಕಾರಿ ಸುಕೇಶ್ ಹಾಜರಿದ್ದರು. ರೈತ ಜನ್ಯ ಸಂಸ್ಥೆಯ ಸಂದೀಪ್ ಪೂಜಾರಿ ಸ್ವಾಗತಿಸಿದರು. ನಿಖಿತಾ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕ ಸುರೇಶ್ ವಂದಿಸಿದರು.