ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ  "ಶಿಕ್ಷಣವೇ ಎಲ್ಲಾ" ಶೀರ್ಷಿಕೆಯಡಿಯಲ್ಲಿ ಕ್ರಿಯೇಟಿವ್ ಸ್ಫೂರ್ತಿಮಾತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪಶ್ಚಿಮ ಬಂಗಾಳದ ಶಿಕ್ಷಣತಜ್ಞ, ಆನಂದ್ ಶಿಕ್ಷಾನಿಕೇತನ ಸಂಸ್ಥೆಯ ಸ್ಥಾಪಕರಾದ ಬಾಬರ್ ಅಲಿ ಅವರು ಶೈಕ್ಷಣಿಕ ವಿಚಾರಗಳ ಕುರಿತು ಹೇಳುತ್ತಾ, ತಾನು ಬೆಳೆದು ಬಂದ ಹಾದಿಯ ರೋಚಕತೆಯನ್ನು ವಿವರಿಸಿ ಇತರರಿಗೂ ಸ್ಫೂರ್ತಿಯಾದರು. ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಗಳಿಸಲು ಸಾಧ್ಯ. ಇಂದು ಶ್ರದ್ದೆಯಿಂದ ಓದಿ ಗುರಿ ಸಾಧಿಸಬೇಕು. ಮುಂದೊಂದು ದಿನ ಹಿಂದೆ ಕಳೆದ ದಿನಗಳನ್ನು ಅವಲೋಕಿಸಿದಾಗ, ಹೋರಾಟದ ದಿನಗಳು ಕೂಡ ನಿಮಗೆ ಅತ್ಯಂತ ಸುಂದರವಾಗಿ ಕಾಣುತ್ತವೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಮಾತನಾಡಿದರು. 

ಸಹಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಬೋಧಕ - ಬೋಧಕೇತರ ವರ್ಗದವರು, ವಿದ್ಯಾರ್ಥಿ - ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ಯೋಗೀಶ್ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.