ಅಳಿಕೆ ಗ್ರಾಮದ ನೆಗಳಗುಳಿಯ ಕೊಲ್ಲಗುಳಿ ಎಂಬಲ್ಲಿ ಶ್ರೀ ದುರ್ಗಾ ರಕ್ತೇಶ್ವರೀ ದೈವಸ್ಥಾನದ ಆಶ್ರಯದಲ್ಲಿ ಸರೊಳಿ ತಿಮ್ಮಣ್ಣ ಭಟ್ಟರ ಸಾರಥ್ಯದಲ್ಲಿ ರಕ್ತೇಶ್ವರೀ ಭೂತಾರಾದನಾ ಕೋಲವು ಫೆಬ್ರವರಿ 12 ರಂದು ವಿಜೃಂಭಣೆಯಿಂದ ನಡೆಯಿತು.
ಸಾರ್ವಜನಿಕ ಸಭಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳೂರಿನ ವೈದ್ಯ ಡಾ ಸುರೇಶ ನೆಗಳಗುಳಿಯವರು ಸ್ವಾಸ್ಥ್ಯ ಸಂಜೀವಿನಿ ಹಾಗೂ ವನ ಭೋಜನದ ಮಹತ್ವದ ಕುರಿತು ದೀರ್ಘ ಉಪನ್ಯಾಸ ನೀಡಿದರು.
ಅವರು ಸ್ವಾಸ್ಥ್ಯ ಕಾಪಾಡುವ ಕುರಿತಾಗಿ ದಿನಚರ್ಯೆ ಋತುಚರ್ಯೆ ಗಳ ಮಹತ್ವ, ಪ್ರಜ್ಞಾಪರಾಧ ಹಾಗೂ ರೋಗೋತ್ಪತ್ತಿ ಕುರಿತು ಹಲವಾರು ಕಿವಿ ಮಾತು ನೀಡಿದರು. ದೈವಾರಾಧನೆ, ವನ ಭೋಜನ ಇತ್ಯಾದಿಗಳು ಸಾರ್ವಜನಿಕರನ್ನು ಒಂದು ಮಾಡಲು ಹಾಗೂ ಭಾವೈಕ್ಯತೆಗೆ ಪ್ರಧಾನ ಅಂಶಗಳಾಗಿವೆ ಎಂದರು.
ರಕ್ತೇಶ್ವರಿ ಸನ್ನಿಧಿಯ ಮುಖ್ಯಸ್ಥ ಹಾಗೂ ಪ್ರಧಾನ ಅರ್ಚಕ ಸರೊಳಿ ತಿಮ್ಮಣ್ಣ ಭಟ್ಟರು ತಾವು ತಮ್ಮ ಮಾಂತ್ರಿಕ ಸಿದ್ಧಿಯಿಂದ ಹಲವಾರು ಗಂಭೀರ ಸಮಸ್ಯೆಗಳನ್ನು ಬಗೆ ಹರಿಸಿದ ಉದಾಹರಣೆ ಸಹಿತ ದೇವಿಯನ್ನು ಭಕ್ತಿಯಿಂದ ಆರಾಧಿಸುವವರಿಗೆ ಬಹಳ ಒಳಿತಾಗಿದೆ ಎಂದರು.
ಅಳಿಕೆ ಗ್ರಾಮದ ಹಲವಾರು ಗಣ್ಯರೂ ಮಂಗಳೂರು ಮಡಿಕೇರಿ ಪರ್ಯಂತದ ಹಲವಾರು ಭಕ್ತರೂ ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.
ರಕ್ತೇಶ್ವರೀ ಹಾಗೂ ಗುಳಿಗ ಕೋಲ ಸಹಿತ ಪೂರ್ಣ ರಾತ್ರಿ ನಡೆದ ಕೋಲವು ಮುಂಜಾನೆ ಅರಿಶಿಣ ಪ್ರಸಾದದೊಡನೆ ಮುಕ್ತಾಯವಾಯಿತು.