ರಾಜರುಗಳು ಕೊಡೆ ಹಿಡಿಸಿಕೊಳ್ಳುತ್ತಿದ್ದರು.‌ ಆದರೆ ಅವು ಅಲಂಕಾರಿಕ. ಆಧುನಿಕ ಕೊಡೆಗಳು ಇಂಗ್ಲೆಂಡ್‌ನಲ್ಲಿ 250 ವರುಷಗಳ ಹಿಂದೆ ತೋರಿದವು.

ತುಳುನಾಡಿನಲ್ಲಿ ತತ್ರ ಎನ್ನುವ ಓಲಿ ಕೊಡೆ ನಾನು ಸಣ್ಣವನಿದ್ದಾಗ ಇತ್ತು. ಅದನ್ನು ಮಡಚಲಾಗದು. ಶಾಲೆಯ‌ ಜಗಲಿಯುದ್ದಕ್ಕೂ ಮಳೆಗಾಲದಲ್ಲಿ ತಂತ್ರಗಳ ಸಾಲು.

ಆಗ ನಮ್ಮ ತಂದೆ ಮಡಚುವ ಕೊಡೆಯನ್ನು ಮೇ ತಿಂಗಳ ಒಂದು ದಿನ ರಿಪೇರಿ ಮಾಡಲೆಂದು ಮೀಸಲಿಡುತ್ತಿದ್ದರು. ನಮ್ಮ ಮನೆ ಎಂದಲ್ಲ ಮಡಚುವ ಕೊಡೆ ಇರುವಲ್ಲೆಲ್ಲ ಅದು ಎಷ್ಟೋ ವರುಷ ರಿಪೇರಿಯಾಗಿ ಬಳಕೆಯಾಗುತ್ತಲೇ ಇತ್ತು.

ಕೊಡೆ ರಿಪೇರಿ ಮಾಡುವುದು ಆ ಕಾಲದ ಕೆಲವರ ಪೂರ್ಣಾವಧಿ ಉದ್ಯೋಗವಾಗಿತ್ತು. ಬೇಸಿಗೆಯಲ್ಲಿ ಬಿಸಿಲಿಗೆ ಕೊಡೆ ಅರಳಿಸುವವರು ಇದ್ದರಾದ್ದರಿಂದ ಇವರಿಗೆ ಕೆಲಸ ಕಡಿಮೆ ಆದುದಿಲ್ಲ.

ಕೆಲವರಿಗೆ ಕೊಡೆ ಹಿಡಿದು ನಡೆಯುವುದು ಅಂದು ಗೌರವದ ಸಂಕೇತವಾಗಿತ್ತು. ದುಡ್ಡಾಂಡ ಇರ್ಲ್‌ಡ್ ಕೊಡೆ ಅರ್ಲವೆ ಎಂದು ಬಿಸಿಲಿಗೆ ಕೊಡೆ ಹಿಡಿದು ನಡೆಯುವವರನ್ನು ಗೇಲಿ ಮಾಡುವ ಜನರೂ ಇದ್ದರು. ಅದು ಒಂದು ಗಾದೆಯೇ ಆಗಿಹೋಗಿದೆ.

ಮಡಚುವ ಕೊಡೆಯಲ್ಲಿ ಮುಂದೆ ಒಂದು ಒಳಮಡಚು, ಎರಡು‌ ಒಳಮಡಚು ಕೊಡೆಗಳು ಬಂದವು. ಹಿಂದೆ ಇದ್ದ ಕೊಡೆ ಕೈಯಲ್ಲಿ ಹಿಡಿದು ಹೋಗಬೇಕು. ಚೀಲದಲ್ಲಿ ಇಡಲು ಸಾಧ್ಯವಿರಲಿಲ್ಲ. ಹಾಗಾಗಿ ಹಿಂದೆ ಕೊಡೆ ಇಟ್ಟು‌ ಮರೆತು ಬರುವ ಜನ ಹೆಚ್ಚು. ‌

ಇಂದು ಒಳಮಡಚು ಕೊಡೆಯನ್ನು ಚೀಲದಲ್ಲಿ ಇಟ್ಟುಕೊಂಡು ಹೋಗುತ್ತಾರೆ. ಮಳೆ ನೀರು ಇದ್ದರೆ ಅದನ್ನು ಪ್ಲಾಸ್ಟಿಕ್ ಚೀಲದೊಳಗೆ ಇಟ್ಟು ಎಲ್ಲೂ ಹೊರಗಿಡದೆ ಜಾಗ್ರತೆ ವಹಿಸುವವರು ಇದ್ದಾರೆ.

ಹಣದ ಮೌಲ್ಯ ಲೆಕ್ಕ ಹಾಕಿದರೆ ನಾನು ಸಣ್ಣವನಿದ್ದಾಗ ಇದ್ದ ಕೊಡೆಗಳ ಬೆಲೆ ಹೆಚ್ಚು. ಇಂದು‌ ಅಗ್ಗದ ಯೂಸ್ ಆಂಡ್ ತ್ರೋ ಕೊಡೆಗಳು ಬಂದಿವೆ. ಈ ಬಳಸು ಬಿಸಾಡು ಕೊಡೆಗಳು ಮಳೆಗಾಲದ ಮೂರು ತಿಂಗಳಿಗೆ ಮಾತ್ರ.

ಹಿಂದೆ ಇದ್ದ ಮಡಚಲಾಗದ‌ ಕೊಡೆಗಳು ಕೆಲವು ಮತ್ತೆ ಬಂದಿವೆ. ಉದ್ದದ ಇವನ್ನು ಊರುಗೋಲಿನಂತೆ ಬಳಸಬಹುದು.

ಕೊಡೆ ನಾನು ಸಣ್ಣವನಿದ್ದಾಗ ಬರೀ ಕಪ್ಪು. ಇಂದು ಎಲ್ಲ ಬಣ್ಣಗಳೂ ಅದರಲ್ಲಿ ಬಿಡಿಸಿಕೊಳ್ಳುತ್ತವೆ, ವಾಹಕಗಳೂ ಇರುತ್ತವೆ. ಕೊಡೆ ‌ಮಳೆಗಾಲದಲ್ಲಿ ಕಡ ಕೊಟ್ಟರೆ ಕಷ್ಟ. ಜನ ಸೇರುವಲ್ಲಿ ಕೊಡೆ ಎಗರಿಸುವ ಜನ ಇರುತ್ತಾರೆ. ಈಗ ‌ಕೊರೋನಾ ಕಾಲದಲ್ಲಿ ಜನ ಸೇರುವಂತಿಲ್ಲ ಬಿಡಿ. ಅಷ್ಟು ಮಟ್ಟಿಗೆ ಕೊಡೆ ಉಳಿಯಿತು. ಕೊಡೆ ತುರ್ತು ಸ್ಥಿತಿಯಲ್ಲಿ ಅಯೋಗ್ಯರಿಗೆ ಬಾರಿಸಲಿಕ್ಕೂ ಆದೀತು.

ಮಳೆ ಆರಂಭವಾಯ್ತು ಎಂದರೆ‌ ಕರಾವಳಿಯಲ್ಲಿ ಕೊಡೆಯ ವ್ಯಾಪಾರ ಜೋರು. ಆದರೆ ತಯಾರಿಕ ಕೊಟ್ಟರೂ ಕೊರೋನಾ ಬಿಡ ಎಂಬಂತೆ ವ್ಯಾಪಾರಿ ಈಗ ಕೈ ಹಿಸುಕುತ್ತ ನಿಂತಿದ್ದಾನೆ. ಮಾಸ್ಕ್ ತೊಟ್ಟುಕೊಂಡು ಹೋಗಿ ಕೆಲವೊಮ್ಮೆ ಇಡೀ ‌ಮುಖ ಮುಚ್ಚಲು ಬೇಕಾಗುವ ಕೊಡೆ ಕೊಂಡು ತನ್ನಿ. 


-By ಪೇಜಾ