ಮಂಗಳೂರು, ಮೇ 20: ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸದಾ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೇಲೆ ಇರುತ್ತಿತ್ತು. ಆದರೆ ಈ ಬಾರಿ 20 ನೇ ಸ್ಥಾನಕ್ಕೆ ಕುಸಿದಿರುವುದು ಡಬಲ್ ಎಂಜಿನ್ ಸರಕಾರವು ಜಿಲ್ಲೆಯ ಶಾಲಾ ವಿದ್ಯಾರ್ಥಿಗಳ ಮನಸ್ಸನ್ನು ವಿಚಲಿತರಾಗಿ ಮಾಡಿರುವುದು ಕಾರಣ ಎಂದು ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಜೆಡಿಎಸ್ ನಾಯಕ ಎಂ. ಬಿ. ಸದಾಶಿವ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
ಜಿಲ್ಲೆಯಲ್ಲಿ ಓದಿದ 20ಕ್ಕೂ ಹೆಚ್ಚು ಜನರು ಜಾಗತಿಕ ಮಟ್ಟದ ಕಂಪನಿಗಳ ಸಿಇಒ ಆಗಿದ್ದಾರೆ. ಬಿಜೆಪಿಯ ದುರಾಡಿಳಿತದಿಂದ ಶಾಲಾ ವಾತಾವರಣ ಕೆಡುತ್ತ ನಡೆದರೆ ಮುಂದೆ ಇಂತಹ ಸಾಧಕರನ್ನು ನಮ್ಮ ಜಿಲ್ಲೆ ನೀಡುವ ಸ್ಥಿತಿ ಇಲ್ಲ ಎಂದು ಎಂ. ಬಿ. ಸದಾಶಿವ ಹೇಳಿದರು.
ಸಮಾನತೆ ಮತ್ತು ಶಿಕ್ಷಣಕ್ಕೆ ಒತ್ತು ಕೊಟ್ಟವರು ನಾರಾಯಣ ಗುರುಗಳು. ಚಕ್ರ ವಕ್ರತೀರ್ಥರಂಥವರು ಅವರ ಪಾಠ ತೆಗೆಯುವುದೆಂದರೆ ಮಾನವತೆಗೇ ಅವಮಾನ. ಕೋಟ ಶ್ರೀನಿವಾಸ ಪೂಜಾರಿಯವರು ಅಂಥ ವಿಷಯವೇ ಇಲ್ಲ ಎಂದರು. ಹಾಗಾದರೆ ಅವರು ಬೊಮ್ಮಾಯಿಯವರನ್ನು ನೋಡಿ ಮಾತನಾಡಿದ್ದೇಕೆ? ಹಾಗಿದ್ದರೆ ಕೋಟ ಪೂಜಾರಿಯವರು ತಾವೇ ಮುಂದೆ ನಿಂತು ಇಂತಹ ಪಠ್ಯಗಳ ವಿರುದ್ಧ ಹೋರಾಡಲಿ ಎಂದು ಎಂ. ಬಿ. ಸದಾಶಿವ ಹೇಳಿದರು.
ನಾವು, ಇತರರು ಅಧಿಕಾರದಲ್ಲಿ ಇದ್ದರು. ಆದರೆ ಪಕ್ಷದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಮೇಲೆ ಹೇರಿಲ್ಲ. ಬಿಜೆಪಿಗೆ ಈ ದುರಾಚಾರ ಏಕೆ. ಪೆರಿಯಾರ್ ದೊಡ್ಡ ವಿಚಾರವಾದಿ, ವಿವೇಕಾನಂದ ಇವರ ಪಾಠಗಳಿಗೂ ಕತ್ತರಿ ಹಾಕುವುದು ಜನದ್ರೋಹಿ ಕೆಲಸವಾಗಿದೆ. ಹಗರಣ ತುಂಬಿದ ಬಿಜೆಪಿಯು ಅದನ್ನು ಮುಚ್ಚಿ ಹಾಕಲು ಹಿಜಬ್, ಹಲಾಲ್, ದನ ಇತ್ಯಾದಿ ವಿವಾದ ಹುಟ್ಟು ಹಾಕುವುದನ್ನು ಬಿಜೆಪಿ ಒಂದು ಚಾಳಿ ಮಾಡಿಕೊಂಡಿದೆ ಎಂದು ಅವರು ಹೇಳಿದರು.
ಕುಂಞ ಅವರು ಮಾತನಾಡಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಮಂಗಳೂರು ವರ್ಸ್ಟ್ ಸಿಟಿ ಆಗಿದೆ ಎಂದು ಹಲವು ಉದಾಹರಣೆಗಳನ್ನು ನೀಡಿದರು.
ಕರ್ನಾಟಕದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ವಿಫಲವಾಗಿವೆ. ಅದರ ನಡುವೆ ಜೆಡಿಎಸ್ ಜನಪರ ಆಡಳಿತ ನೀಡಲು ಸಂಘಟನೆ ನಡೆದಿದೆ. ಬೆಲೆಯೇರಿಕೆ, ಶಾಲೆಗಳಲ್ಲಿ ಅನುಕೂಲ ಕೊಡಲಾಗದ ಸ್ಥಿತಿಯಲ್ಲಿ ಹೆಚ್ಚು ಮಕ್ಕಳು ಪಾಸಾಗಿದ್ದಾರೆ. ಅವರಿಗೆ ಅವಕಾಶ ಕೊಡುವುದು ಮುಖ್ಯ. ಇದರ ನಡುವೆ ಶಾಲೆಯಲ್ಲಿ ತ್ರಿಶೂಲ ನೀಡುವ, ಗನ್ ತರಬೇತಿ ನೀಡುವ ಕೆಲಸ ಮಾಡುತ್ತಾರೆ. ಭಗತ್ ಸಿಂಗ್ ಹೆಸರು ಬಳಸಿಕೊಳ್ಳುತ್ತಾರೆ. ಆದರೆ ಕಮ್ಯೂನಿಸ್ಟ್ ಆದ ಅವರ ಪಾಠ ಇವರಿಗೆ ಬೇಕಾಗಿಲ್ಲ. ಇವೆಲ್ಲದರ ವಿರುದ್ಧ ನಾವು ದೊಡ್ಡ ಹೋರಾಟ ಮಾಡುವುದಾಗಿ ಅವರು ಘೋಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಾಯಕರಾದ ಮೊಹಮ್ಮದ್ ಕುಂಞ, ವಸಂತ ಪೂಜಾರಿ, ಸುಶೀಲ್ ನೊರೋನ್ಹಾ ಮೊದಲಾದವರು ಉಪಸ್ಥಿತರಿದ್ದರು.