ಮಂಗಳೂರು, ಮೇ 02: ವಾಣಿಜ್ಯ ಗ್ಯಾಸ್ ಬೆಲೆ, ದಿನಬಳಕೆಯ ವಸ್ತುಗಳ ಬೆಲೆಯೇರಿಕೆ, ಪಿಎಸ್‌ಐ ನೇಮಕಾತಿಯಲ್ಲಿ ಅವ್ಯವಹಾರ ಎಂದು ಕೇಂದ್ರ ಮತ್ತು ಕರ್ನಾಟಕದ ಬಿಜೆಪಿ ಸರಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಮಾಜೀ ಮಂತ್ರಿ ರಮಾನಾಥ ರೈ ಅವರು ಹೇಳಿದರು.

ಮನಮೋಹನ್ ಸಿಂಗ್ ಅವರ ಸರಕಾರ ಇದ್ದಾಗ ಚಿಲ್ಲರೆ ಲೆಕ್ಕದಲ್ಲಿ ಪೆಟ್ರೋಲಿಯಂ ಬೆಲೆ ಏರಿಕೆ ಆದಾಗ ರಸ್ತೆಯಲ್ಲಿ ಉರುಳಾಡಿದ ಬಿಜೆಪಿಯವರು ಎಂದೂ ಬೆಲೆ ಇಳಿಸುವುದು ರಾಜ್ಯಗಳ ಜವಾಬ್ದಾರಿ ಎಂದು ಹೇಳಿಲ್ಲ. ಕೇಂದ್ರದ ಬಿಜೆಪಿ ಸರಕಾರವು ಜನರ ದಾರಿ ತಪ್ಪಿಸುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ಪೆಟ್ರೋಲ್ ಡೀಸೆಲ್ ಅಬಕಾರಿ ಸುಂಕವು ರೂ 3 - 9 ಇದ್ದುದನ್ನು 31- 36ಕ್ಕೆ ಏರಿಸಿದ  ಕೇಂದ್ರ ಸರಕಾರವು ಯಾರ ಮೇಲೆ ಗೂಬೆ ಕೂರಿಸುತ್ತಿದೆ ಎಂದು ರಮಾನಾಥ ರೈ ಪ್ರಶ್ನಿಸಿದರು.

ಧರ್ಮದ ಹೆಸರಿನಲ್ಲಿ ಅಡ್ಡ ದಾರಿ, ಒಂದು ಧರ್ಮದವರನ್ನು ವ್ಯಾಪಾರ ಮಾಡಬಾರದು ಎನ್ನುವುದು ಎಂಬುದು ಅದರ ಗಲಭೆ ಹುಟ್ಟಿಸುವ ಜಾಯಮಾನ. ಇಲ್ಲಿ ನಡೆದ ಇಷ್ಟೊಂದು ಕೊಲೆಗಳಲ್ಲಿ ಆರೋಪ ಹೊತ್ತವರಲ್ಲಿ ಒಬ್ಬ ಕಾಂಗ್ರೆಸ್‌ನವರು ಕೂಡ ಇಲ್ಲ. ಆದರೂ ಬಿಜೆಪಿಯವರು ಕಾಂಗ್ರೆಸ್ ಗಲಾಟೆ ಮಾಡಿಸುತ್ತಿದೆ ಎಂದು. ನಾವು ಸಾಮರಸ್ಯದ ಭಾಷಣ ಮಾಡುವವರು. ಬಿಜೆಪಿಯವರು ಸಾಕಷ್ಟು ಬಾರಿ ಪ್ರಚೋದನಕಾರಿ ಭಾಷಣ ಮಾಡಿದ್ದು ನಿಮಗೆಲ್ಲ ಗೊತ್ತಿದೆ. ಇದನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ರಮಾನಾಥ ರೈ ಹೇಳಿದರು.

ಪೋಲೀಸು ಇಲಾಖೆಯು ಸಮಾಜದಲ್ಲಿ ಶಾಂತಿ ತರಬೇಕಾದವರು. ಆದರೆ ಆ ನೇಮಕಾತಿಯಲ್ಲಿ ಬಿಜೆಪಿ ಅಕ್ರಮ ಎಸಗಿದೆ. ಮನಮೋಹನ್ ಸಿಂಗ್ ಸರಕಾರ ಇದ್ದಾಗ ಎಂದೂ ಯಾವುದೇ ವಿಫಲತೆ ಕಾಡಿಲ್ಲ. ಇಂದಿನ ಬಿಜೆಪಿ ಸರಕಾರವು ಎಲ್ಲದರಲ್ಲೂ ವಿಫಲವಾಗಿದೆ. ರಾಜೀವ್ ಗಾಂಧಿಯವರ ಕಾಲದಲ್ಲಿ ನೇರ ಸರಕಾರದಿಂದ ಜಿ. ಪಂ,ಗ್ರಾ. ಪಂ.ವರೆಗೆ ಹಣ ವರ್ಗಾವಣೆ ಆರಂಭಿಸಿದವರು ಕಾಂಗ್ರೆಸ್‌ನವರು. ಬಿಜೆಪಿಯು ಕೊರೋನಾ ಮೊದಲಾದ ವಿಷಯದಲ್ಲಿ ನಡೆದುಕೊಂಡ ವಿಧಾನವು ಅದು ಆಳಲು ಯೋಗ್ಯತೆ ಇಲ್ಲದ ಪಕ್ಷ ಎಂಬುದು ಸಾಬೀತಾಗಿದೆ. ಜಗತ್ತಿನಲ್ಲಿ ಭಾರತದ ಸ್ಥಾನಮಾನ ಉತ್ತುಂಗಕ್ಕೆ ಏರಿದ್ದು ಮನಮೋಹನ್ ಸಿಂಗ್ ಸರಕಾರದ ಕಾಲದಲ್ಲಿ ಎಂದು ರೈ ಹೇಳಿದರು.

ಸಿದ್ದರಾಮಯ್ಯ ಸರಕಾರ ಒಂದು ಇತಿಹಾಸ. ಅದು ಮಾಡಿದ ಕೆಲಸ ಈಗಲೂ ಜನ ಮಾನಸದಲ್ಲಿದೆ. ಸ್ಮಾರ್ಟ್ ಸಿಟಿ ಆರಂಭ, ತುಂಬೆ ಅಣೆಕಟ್ಟು, ಜಿಲ್ಲಾಧಿಕಾರಿ ಕಚೇರಿ ಇವೆಲ್ಲ ಮಂಗಳೂರಿನಲ್ಲಿ ಆದುದು ಸಿದ್ದರಾಮಯ್ಯ ಸರಕಾರದ ಕಾಲದಲ್ಲಿ. ಭಾವನಾತ್ಮಕ ವಿಷಯದಲ್ಲಿ ಬಿಜೆಪಿ ಗೆದ್ದಿದೆ ನಿಜ. ಆದರೆ ಅದು ನಿರಂತರವಾಗಿ ಗೆಲುವು ಕೊಡುವುದಿಲ್ಲ ಎಂಬುದನ್ನು ನಾನು ಒತ್ತಿ ಹೇಳುವುದಾಗಿ ರೈ ಹೇಳಿದರು. ಈಗಂತೂ ಸತ್ತೆ ವಿರೋಧಿ ಒಳಗಾಳಿ ಇದೆ. ಗ್ಯಾಸ್ ಸಬ್ಸಿಡಿ ರದ್ದು ಮಾಡಿ ಗ್ಯಾಸ್ ಬೆಲೆಯನ್ನೂ ಏರಿಕೆ ಮಾಡಿದವರಿಗೇ ಮತ ಹಾಕುವ ಕೆಲಸ ಯಾರು ಮಾಡುವರು ಎಂದು ಅವರು ಕೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಶಿಧರ ಹೆಗ್ಡೆ, ರೌಫ್, ಹರಿನಾಥ್, ಅಪ್ಪಿ, ಮಮತಾ ಗಟ್ಟಿ, ದಿವ್ಯಾ, ಬೇಬಿ ಕುಂದರ್, ಇಬ್ರಾಹಿಂ ಕೋಡಿಜಾಲ್, ಪ್ರಕಾಶ್ ಸಾಲ್ಯಾನ್, ಸಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.