ಮಂಗಳೂರು: ಇಂಚರ ಫೌಂಡೇಶನ್ “ಸೈಬರ್ ಸ್ಮಾರ್ಟ್” ಸೈಬರ್ ಸುರಕ್ಷತೆ ಸರಣಿ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಹಮ್ಮಿಕೊಂಡಿದೆ. ಕೊರೊನಾ ಕಾಲಘಟ್ಟದ ಈಚೆಗೆ ಮಕ್ಕಳಲ್ಲಿ ಮೊಬೈಲ್ ಬಳಕೆಯು ಅತಿಯಾಗಿದ್ದು ಮೊಬೈಲ್ ವ್ಯಸನವಾಗಿ ಮಾರ್ಪಟ್ಟಿದೆ. ಈ ನಿಟ್ಟಿನಲ್ಲಿ ಇಂಚರ ಫೌಂಡೇಶನ್ ಸಂಸ್ಥೆಯು ಡಬ್ಲ್ಯೂ.ಎನ್.ಎಸ್ ಕೇರ್ಸ್ ಫೌಂಡೇಶನ್ನಿನ ಸಹಯೋಗದಲ್ಲಿ “ಸೈಬರ್ ಸ್ಮಾರ್ಟ್” ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುತ್ತಿದೆ. 

ಸೈಬರ್ ಸ್ಟಾಕಿಂಗ್, ಸೈಬರ್ ಬುಲ್ಲಿಯಿಂಗ್, ಆನ್ಲೈನ್ ಖರೀದಿ, ನಕಲಿ ಖಾತೆ, ಗುರುತು ಕಳವು (ಐಡೆಂಟಿಟಿ ಥೆಫ್ಟ್), ಸೈಬರ್ ಗ್ರೂಮಿಂಗ್, ಸೈಬರ್ ಅಪರಾಧಗಳಿಂದಾಗುವ ಹಾನಿ ಮತ್ತು ಮೊಬೈಲ್ ಫೋನಿನ ಜವಬ್ದಾರಿಯುತ ಬಳಕೆ, ಖಾಸಗೀತನದ ರಕ್ಷಣೆ ಮುಂತಾದವುಗಳ ಬಗ್ಗೆ ಮಕ್ಕಳಲ್ಲಿ ವಿಡಿಯೋ ಮೂಲಕ ಜಾಗೃತಿ ಮೂಡಿಸಿ, ವಿಚಾರ ವಿನಿಮಯ ನಡೆಸಿ, ವಿಷಯಕ್ಕೆ ಸಂಬಂಧಿಸಿ ಮಕ್ಕಳಿಗೆ ರಸಪ್ರಶ್ನೆಯನ್ನು ನಡೆಸಲಾಗುತ್ತದೆ. 

ಈಗಾಗಲೆ ಕುಲಶೇಖರದ ಸೇಕ್ರೆಡ್ ಹಾರ್ಟ್ ಮತ್ತು ಸೈಂಟ್ ಜೋಸೆಫ್ ಪ್ರೌಢಶಾಲೆ, ಸೈಂಟ್ ಆನ್ಸ್ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆ ಮಲ್ಲಿಕಟ್ಟೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಇಂಚರ ಫೌಂಡೇಶನ್ ಕಾರ್ಯಕ್ರಮ ವ್ಯವಸ್ಥಾಪಕರಾದ ಯೋಗೀಶ್ ಮಲ್ಲಿಗೆಮಾಡು, ಹಿರಿಯ ಕಾರ್ಯಕ್ರಮ ಸಂಯೋಜಕರಾದ ಅಥೀನಾ ಅರಾನ್ಹಾ ಮತ್ತು ಸುಮನಾ, ಕಾರ್ಯಕ್ರಮ ಸಂಯೋಜಕರಾದ ಮಿಥ್ಯಾಶ್ರೀ, ವಿಸ್ತರಣ ಸಂಯೋಜಕರಾದ ಸೌಜನ್ಯಾ, ಸಮಾಜ ಕಾರ್ಯ ವಿದ್ಯಾರ್ಥಿಗಳಾದ ಆಗ್ನೇಸ್, ಗೋಪಾಲ್, ಲಾರೆನ್, ಸೌಜನ್ಯಾ, ಚೇತನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮತ್ತು ಸೈಂಟ್ ಅಲೋಶಿಯಸ್ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಸಹಕರಿಸಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಇನ್ನಷ್ಟು ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಇಂಚರ ಫೌಂಡೇಶನ್ ನಿರ್ದೇಶಕರಾದ ಪ್ರೀತಂ ರೋಡ್ರಿಗಸ್ ತಿಳಿಸಿದ್ದಾರೆ.