ಮೂಡಬಿದ್ರೆ: ಸ್ಥಳೀಯ ಮಾಜಿ ಸೈನಿಕರ ವೇದಿಕೆಯಿಂದ ಆಗಸ್ಟ್ 15ರಂದು ಮಧ್ಯಾಹ್ನ 2 ಗಂಟೆಗೆ ಮೂಡಬಿದ್ರೆ ಸೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಶಮಾನೋತ್ಸವ ಸಂಭ್ರಮವನ್ನು ಆಚರಿಸಲು ನಿರ್ಧರಿಸುತ್ತಾರೆ. 2013-14ರಲ್ಲಿ 15 ಮಂದಿ ಮಾಜಿ ಸೈನಿಕರಿಂದ ಸ್ಥಾಪಿಸಲ್ಪಟ್ಟ ವೇದಿಕೆಯಲ್ಲಿ ಪ್ರಸ್ತುತ ನೂರಕ್ಕಿಂತ ಹೆಚ್ಚು ಮಾಜಿ ಸೈನಿಕರು ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷವೂ ಕೂಡ ದೇಶಭಕ್ತಿಗೆ ಸಂಬಂಧಪಟ್ಟ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಂತಹ ವೇದಿಕೆ ಪ್ರಸ್ತುತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಲವಾರು ಸ್ಪರ್ಧೆಗಳನ್ನು ನಡೆಸುವ ಮೂಲಕ ಇನ್ನು ಹೆಚ್ಚಿನ ಜನರನ್ನು ತಲುಪುವ ಆಶಯವನ್ನು ಹೊಂದಿದೆ.
ಮುಂದಿನ ಒಂದು ತಿಂಗಳಲ್ಲಿ ಮೂಡುಬಿದಿರೆ ಕಾರ್ಕಳದ ಎಲ್ಲಾ ಶಾಲಾ ಕಾಲೇಜುಗಳ ಮಕ್ಕಳಿಗೆ ದೇಶಭಕ್ತಿ, ಗಾಯನ ಸ್ಪರ್ಧೆ, ಛದ್ಮಾವೇಶ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಪಿಕ್ ಅಂಡ್ ಸ್ಪೀಚ್ ಸ್ಪರ್ಧೆ ಹಾಗೂ ಡ್ಯಾನ್ಸ್ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಶಾಲಾ ಕಾಲೇಜು ಹಂತದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದವರಿಗೆ ಆಗಸ್ಟ್ 15 ರಂದು ಮಧ್ಯಾಹ್ನ ಸೌಟ್ಸ್ ಗೈಡ್ಸ್ ಭವನದಲ್ಲಿ ಅಂತಿಮ ಸ್ಪರ್ಧೆಯನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಗುವುದೆಂದು ವೇದಿಕೆಯ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಅವರು ತಿಳಿಸಿರುತ್ತಾರೆ. ಇದೇ ಸಂದರ್ಭದಲ್ಲಿ 3-4 ಮಂದಿ ಮಾಜಿ ಸೈನಿಕರು ಎರಡನೇ ಮಹಾಯುದ್ದದಲ್ಲಿ ಪಾಲ್ಗೊಂಡವರಿದ್ದು ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ ಎಂದು ತಿಳಿಸಿದರು.
ಆಗಸ್ಟ್ 15 ರಂದು ದಶಮಾನೋತ್ಸವ ಕಾರ್ಯಕ್ರಮದ ಗೌರವಾಧ್ಯಕ್ಷರಾದ ಡಾ. ಮೋಹನ್ ಆಳ್ವ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಗಳಾಗಿ ಮಾನ್ಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಮಂತ್ರಿ ಸುನಿಲ್ ಕುಮಾರ್, ಅಭಯ ಚಂದ್ರಜೈನ್, ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಶ್ರೀಪತಿ ಭಟ್ ಮುಂತಾದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಆಳ್ವಾಸ್ ಕಾಲೇಜು ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸಂಜೆ ಗಂಟೆ ಆರರಿಂದ ಕಲ್ಲಡ್ಕ ವಿಠಲ್ ನಾಯಕ್ ತಂಡದವರ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ ಕಾರ್ಯದರ್ಶಿ ಭಾಸ್ಕರ್, ಖಜಾಂಚಿ ವಾಸುದೇವ ಸೇರೆಗಾರ, ನಿರ್ದೇಶಕ ರಾಮಕೃಷ್ಣ ಶೆಣೈ ಮತ್ತು ಕ್ಯಾ.ಸುರೇಶ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.