ಮಂಗಳೂರು: ಕೊಂಕಣಿ ಕಡಿಮೆ ಸಂಪನ್ಮೂಲವಿರುವ ಭಾಷೆ, ಇಲ್ಲಿ ನಡೆದಿರುವ ಸಂಶೋಧನೆಗಳೂ ಕಡಿಮೆ. ಶಬ್ದಭಂಡಾರ, ಟಿಪ್ಪಣಿಗಳನ್ನು ಬೆಳೆಸುವ ಜೊತೆಗೆ ಉಪಭಾಷೆಗಳ ಗೊಂದಲ ಪರಿಹರಿಸಿಕೊಂಡರೆ ಕೊಂಕಣಿಗೆ ಅದ್ಭುತ ಭವಿಷ್ಯವಿದೆ, ಎಂದು ಗೋವಾದ ದೆಂಪೆ ಕಾಲೇಜಿನ ಕಂಪ್ಯೂಟರ್‌ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಿಕೆ ಅನ್ನಿ ರಾಜನ್‌ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗ ಮತ್ತು ವಿವಿ ಕಾಲೇಜಿನ ಸ್ನಾತಕೋತ್ತರ ಹಿಂದಿ ವಿಭಾಗಗಳ ಸಹಯೋಗದೊಂದಿಗೆ ಶಿವರಾಮ ಕಾರಂತ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ʼಕಂಪ್ಯೂಟೇಷನ್‌ ಟೂಲ್ಸ್‌ ಫಾರ್‌ ಲ್ಯಾಂಗ್ವೇಜಸ್‌ʼ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಭಾಷೆಗಳನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ. ಕೊಂಕಣಿಯನ್ನು ಇನ್ನಷ್ಟು ಅಂತರ್ಜಾಲ ಸ್ನೇಹಿಯಾಗಿಸಬೇಕಿದೆ, ಎಂದರು.

ಮುಖ್ಯ ಅತಿಥಿಯಾಗಿದ್ದ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ತಾಂತ್ರಿಕ ಬುದ್ಧಿಮತ್ತೆ ಭಾಷೆಗಳಿಗೂ ನೆರವಾಗುತ್ತಿರುವುದು ಸ್ವಾಗತಾರ್ಹ, ಎಂದರು. ಸ್ನಾತಕೋತ್ತರ ಕೊಂಕಣಿ ವಿಭಾಗದ ಸಂಯೋಜಕ ಡಾ. ಬಿ ದೇವದಾಸ ಪೈ, ಕೊಂಕಣಿಯಲ್ಲಿ ಸಂಶೋಧನೆಗೆ ಹೇರಳ ಅವಕಾಶವಿದೆ. ಮುಂದಿನ ದಿನಗಳಲ್ಲಿ ಭಾಷೆಗಳೂ ಭಾವನೆ ಅರಿಯುವ ದಿನಗಳು ದೂರವಿಲ್ಲ, ಎಂದರು.

ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಎ ಹರೀಶ, ಹಿಂದಿ ಪದವಿ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ಎನ್‌ ರಾವ್‌ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ. ಜಯವಂತ ನಾಯಕ್‌ ಅತಿಥಿಗಳನ್ನು ಸ್ವಾಗತಿಸಿದರು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ಸುಮಾ ರೋಡನ್ನವರ್‌ ಧನ್ಯವಾದ ಸಮರ್ಪಿಸಿದರು.