ಚಿಕ್ಕಮಗಳೂರು:- ಸ್ಪೆಕ್ಟ್ರಮ್ ಹಾಸ್ಪಿಟಾಲಿಟಿ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನಿಂದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಬೇಕಾಗುವ ಕೌಶಲ್ಯಗಳ ತರಬೇತಿ ನೀಡಲಿದ್ದು ಇದರಿಂದ ಸ್ಥಳೀಯರಿಗೆ ಹೆಚ್ಚಿನ ಅವಕಾಶಗಳು ಲಭಿಸಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ನಗರದ ಎಂ.ಜಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಸ್ಪೆಕ್ಟ್ರಮ್ ಹಾಸ್ಪಿಟಾಲಿಟಿ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನ್ನು ಶನಿವಾರ ಜಿಲ್ಲಾಧಿಕಾರಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲೆಯು ಹಲವು ವೈವಿದ್ಯಮಯವಾದ ಪ್ರವಾಸಿತಾಣಗಳನ್ನು ಒಳಗೊಂಡಿದ್ದು ಪ್ರವಾಸೋದ್ಯಮ ಕೇಂದ್ರವೆನಿಸಿಕೊಂಡಿದೆ. ಇಲ್ಲಿಗೆ ಸಾಕಷ್ಟು ಪ್ರವಾಸಿಗರು ಆಗಮಿಸುವುದರಿಂದ ಇಲ್ಲಿನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಪುಲವಾದ ಉದ್ಯೋಗವಕಾಶಗಳು ಲಭಿಸುತ್ತವೆ ಎಂದರು.
ಬಹುತೇಕ ಯುವಕ, ಯುವತಿಯರಿಗೆ ಕೌಶಲ್ಯದ ಕೊರತೆ ಕಾಡುತ್ತಿದ್ದು ಇದನ್ನು ನಿವಾರಿಸುವ ನಿಟ್ಟಿನಲ್ಲಿ ಇದೀಗ ನಗರದಲ್ಲಿ ಸ್ಪೆಕ್ಟ್ರಮ್ ಹಾಸ್ಪಿಟಾಲಿಟಿ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಆರಂಭಗೊಂಡಿದ್ದು ಸ್ಥಳೀಯರಿಗೆ ರೆಸ್ಟೋರೆಂಟ್, ಹಾಸ್ಟಿಟಾಲಿಟಿ, ರೆಸಾರ್ಟ್ ಉದ್ಯಮ ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಬೇಕಾಗುವ ಕೌಶಲ್ಯಗಳ ತರಬೇತಿ ನೀಡಲಿದೆ ಎಂದರು.
ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರೆಸಾರ್ಟ್‍ಗಳಿದ್ದು ಬಹುತೇಕ ಕಡೆಗಳಲ್ಲಿ ಸ್ಥಳೀಯರಿಗಿಂತ ಹೆಚ್ಚಾಗಿ ಹೊರಗಿನಿಂದ ಬಂದವರೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಸ್ಥಳೀಯರಲ್ಲಿ ಕೌಶಲ್ಯದ ಕೊರತೆಯೇ ಕಾರಣ. ಇದೀಗ ಸ್ಪೆಕ್ಟ್ರಮ್ ಹಾಸ್ಪಿಟಾಲಿಟಿ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಕೇಂದ್ರವು ಉಚಿತವಾಗಿ ಕಡಿಮೆ ಅವಧಿಯಲ್ಲಿ ಕಾರ್ಯನಿರ್ವಹಿಸಲು ಬೇಕಾಗುವ ಕೌಶಲ್ಯ ತರಬೇತಿ ನೀಡಲಿದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಮುಂದಿನ ದಿನಗಳಲ್ಲಿ ರೆಸಾರ್ಟ್, ರೆಸ್ಟೋರೆಂಟ್‍ಗಳ ಮಾಲೀಕರೊಂದಿಗೆ ಜಿಲ್ಲಾಡಳಿತ ಒಟ್ಟುಗೂಡಿ ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಯೋಜನೆ ರೂಪಿಸಲಾಗುವುದು ಎಂದರು.
ಸ್ಪೆಕ್ಟ್ರಮ್ ಹಾಸ್ಪಿಟಾಲಿಟಿ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನ ವ್ಯವಸ್ಥಾಪಕ ತರಬೇತುದಾರ ಮಂಜುನಾಥ್ ಮಾತನಾಡಿ ಸ್ಥಳೀಯ ನಿವಾಸಿಗಳಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸ್ಪೆಕ್ಟ್ರಮ್ ಹಾಸ್ಪಿಟಾಲಿಟಿ ತರಬೇತಿ ಸಂಸ್ಥೆಯನ್ನು ಆರಂಭಿಸಲಾಗಿದೆ. 6 ತಿಂಗಳ ಕೌಶಲ್ಯ ತರಬೇತಿಯನ್ನು ಉಚಿತವಾಗಿ ನೀಡಲಿದೆ ಎಂದರು.
ಒಟ್ಟು 4 ವಿಭಾಗಗಳಿದ್ದು ರೆಸ್ಟೋರೆಂಟ್, ಹೋಟೆಲ್, ಫ್ರಂಟ್ ಆಫೀಸ್, ಹೌಸ್‍ಕೀಪಿಂಗ್‍ನಲ್ಲಿ ತರಬೇತಿ ನೀಡಲಾಗುವುದು, ಒಟ್ಟು 6 ತಿಂಗಳ ತರಬೇತಿಯಲ್ಲಿ 2 ತಿಂಗಳು ತರಗತಿ ಬೋಧನೆಗಳು ನಡೆಯಲಿದ್ದು ಇನ್ನುಳಿದ 4 ತಿಂಗಳು ರೆಸಾರ್ಟ್, ರೆಸ್ಟೋರೆಂಟ್‍ಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಈ ವೇಳೆ ಪ್ರತಿ ತಿಂಗಳು 5 ಸಾವಿರ ಸ್ಟೈಫಂಡ್ ಸಿಗಲಿದೆ ಎಂದು ತಿಳಿಸಿದರು.
ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೊಸದಾಗಿ ಕೌಶಲ್ಯ ತರಬೇತಿ ಸಂಸ್ಥೆ ಆರಂಭಿಸಲಾಗಿದ್ದು, ತರಬೇತಿ ಬಳಿಕ ಸಂಸ್ಥೆಯ ವತಿಯಿಂದಲೇ ಪ್ರತಿಷ್ಟಿತ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಉದ್ಯೋಗಕ್ಕೆ ಸೂಚಿಸಲಾಗುವುದು. 18 ವರ್ಷ ಮೇಲ್ಪಟ್ಟ ಹತ್ತನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣಗೊಂಡ ಅಭ್ಯರ್ಥಿಗಳು ತರಬೇತಿ ಪಡೆಯಬಹುದಾಗಿದೆ, ಇದರಿಂದ ಸ್ಥಳೀಯರಿಗೆ ಹೆಚ್ಚು ಅನುಕೂಲವಾಗಲಿದ್ದು ಉದ್ಯೋಗವಕಾಶಗಳು ಲಭಿಸಲಿದೆ ಎಂದರು.
ಈ ಸಂದರ್ಭದಲ್ಲಿ ತ್ರಿವೀಕ್ ರೆಸಾರ್ಟ್‍ನ ಮ್ಯಾನೇಜರ್ ಆನಂದ್, ಸೆರಾಯ್ ಮ್ಯಾನೇಜರ್ ಮಂಜು ಚೇತನ್, ಬ್ಲಾಜ್ಸಮ್ ರೆಸಾರ್ಟ್ ಮ್ಯಾನಜೇ ನಂಜಪ್ಪ, ಕುಟುಂಬದವರ ಜಯಪ್ರದ, ಸರೋಜಾ ಸೇರಿದಂತೆ ವಿವಿಧ ಹೋಟೆಲ್ ಹಾಗೂ ರೆಸಾರ್ಟ್ ಮ್ಯಾನೇಜರ್ ಹಾಜರಿದ್ದರು.