ಮಂಗಳೂರು:- 2020 ನೇ ಇಸವಿ ಫೆಬ್ರವರಿ ಕೊನೆಯ ವಾರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿ.ಜೆ.ಪಿ ಪಕ್ಷ ನೇತೃತ್ವದ ಆಡಳಿತ ಆರಂಭವಾಗಿ ಇಂದಿಗೆ ಸುಮಾರು ಒಂದು ವರ್ಷ ಪೂರ್ತಿಯಾಗುತ್ತಿದೆ. ಈ ಒಂದು ವರ್ಷಾವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಜನರು ಬಿ.ಜೆ.ಪಿ ಪಕ್ಷದ ಮೇಲೆ ಇಟ್ಟ ವಿಶ್ವಾಸಕ್ಕೆ ತದ್ವಿರುದ್ಧವಾದ ನಡೆಯನ್ನು ಕಂಡಿದ್ದಾರೆ. ಯಾವುದೇ ಒಂದು ಗೊತ್ತುಗುರಿ ಇಲ್ಲದೆ ತುಘಲಕ್ ದರ್ಬಾರ್‍ನ್ನು ನಡೆಸುತ್ತಿದೆ. ಆಡಳಿತ ಪಕ್ಷದ ಸಲಹೆಗಳನ್ನು ಗಾಳಿಗೆ ತೂರುತ್ತಿದೆ.

2020 ನೇ ಇಸವಿಯಲ್ಲಿ ಕೊರೊನಾ ಮಹಾಮಾರಿಯ ನೆಪಒಡ್ಡಿ ಕೆ.ಎಂ.ಸಿ ಕಾಯಿದೆಯನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಸುಮಾರು 598 ಕ್ಕಿಂತಲೂ ಹೆಚ್ಚಿನ ವ್ಯಾಪಾರಿಗಳನ್ನು ಏಕಾಏಕಿ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಹೊರಗೆ ಹಾಕಿ ತದನಂತರ ನ್ಯಾಯಾಲಯದಲ್ಲಿ ಹಿನ್ನಡೆಯನ್ನು ಕಂಡ ಪ್ರಮೇಯ. ಸುಮಾರು 5 ಸಾವಿರ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ನಷ್ಟ.

ಸ್ಮಾರ್ಟ್ ಸಿಟಿ ಯೋಜನೆಯ ಸುಮಾರು 32 ಕಾಮಗಾರಿಗಳನ್ನು 2016 ರ ಕನ್‍ಸ್ಟ್ರ್ಟ್ರಕ್ಷನ್ ಆ್ಯಂಡ್ ಡೆಮೊಲಿಷನ್ ವೇಸ್ಟ್ನಿ ಯಮಗಳನ್ನು ಗಾಳಿಗೆ ತೂರಿ ಏಕಾಏಕಿ ಮಂಗಳೂರು ನಗರದ ಆರ್ಥಿಕ ವಹಿವಾಟು ಕೇಂದ್ರ (ಬಂದರು, ಹಂಪನಕಟ್ಟ, ರಥಬೀದಿ, ಕೆ.ಎಸ್.ರಾವ್ ರಸ್ತೆ, ಬಲ್ಮಠ ರಸ್ತೆ, ಪಿ.ವಿ.ಎಸ್ ಕುದ್ಮಲ್ ರಂಗರಾವ್ ರಸ್ತೆ, ಕಂಕನಾಡಿ ಫಳ್ನಿರ್ ರಸ್ತೆ) ದ ಎಲ್ಲಾ ರಸ್ತೆಗಳನ್ನು ಏಕ ಕಾಲದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಪೂರ್ಣಾವಸ್ಥೆಯಲ್ಲಿ ಬಿಟ್ಟು ಈಗಾಗಲೇ ಕೊರೊನಾ ಮಹಾಮಾರಿಯಿಂದ ಆರ್ಥಿಕವಾಗಿ ತತ್ತರಿಸಿ ಹೋಗಿರುವ ನಗರದ ವ್ಯಾಪಾರ ವಹಿವಾಟು ಮಾಡುವ ಕುಟುಂಬಗಳು ಧೂಳಿನ ಮಧ್ಯೆ ಯಾವುದೇ ವ್ಯಾಪಾರವಿಲ್ಲದೆ ಸಂಕಷ್ಟ ಪಡುವ ಪ್ರಮೇಯ.

ಅಮೃತ್ ಯೋಜನೆಅಡಿಯಲ್ಲಿ ಒಳಚರಂಡಿ ಕಾಮಗಾರಿಗಳನ್ನು ನಡೆಸಲು ರಸ್ತೆಗಳನ್ನು ಅಗೆದು ಅವುಗಳನ್ನು ಮೂಲ ಸ್ಥಿತಿಗೆ ತರದೇ ಬಿಟ್ಟಿರುವ ಪ್ರಮೇಯ.

ನೀರಿನ ದರವನ್ನು 2011 ನೇ ಇಸವಿಯಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ ಆಡಳಿತ ಇದ್ದಂತಹ ಸಂಧರ್ಭದಲ್ಲಿ ನೀರಿನ ಬಳಕೆಯ ಪ್ರಮಾಣವನ್ನು ಕಡಿತ ಮಾಡಿ ಆದೇಶವನ್ನು ನಗರಪಾಲಿಕೆಗೆ ನೀಡಿರುತ್ತದೆ. 2013 ರಿಂದ 2018 ರ ತನಕ ಕಾಂಗ್ರೆಸ್ ಆಡಳಿತ ಮ.ನ.ಪಾದಲ್ಲಿ ಇದ್ದಾಗ 2011 ರ ಬಿ.ಜೆ.ಪಿ ಸರಕಾರದ ಆದೇಶವನ್ನು ಅನುಷ್ಠಾನ ಮಾಡಿರುವುದಿಲ್ಲ. ಕಾಂಗ್ರೆಸ್ ಆಡಳಿತ ಕೊನೆಗೊಂಡ ತಕ್ಷಣ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 2011 ರ ಬಿ.ಜೆ.ಪಿ ಸರಕಾರದ ಆದೇಶವನ್ನು ಯಥಾವತ್ತಾಗಿ ಜಾರಿಗೆ ಮಾಡಿದ್ದು ಜನರಿಗೆ ಮಾಡಿದ ಅನ್ಯಾಯ. ರೂ.65/- ಕ್ಕೆ ಕನಿಷ್ಟ 24 ಸಾವಿರ ಲೀಟರಿನಿಂದ ರೂ.56/- ಕ್ಕೆ 8ಸಾವಿರ ಲೀಟರ್‍ ಗೆ ಕಡಿತ ಮಾಡಿ ಜನರ ಮೇಲೆ ಆರ್ಥಿಕ ಹೊರೆಯನ್ನು ಹೇರಿರುವುದು, ಬೇಕಾಬಿಟ್ಟಿ ನೀರಿನ ಬಿಲ್ಲಿನ ಹೆಚ್ಚಿನ ದರ ಹಾಕಿ ಕೊಟ್ಟಿರುತ್ತದೆ. ನೀರಿನ ಬಿಲ್ಲಿನ ದರವನ್ನು ಕಡಿಮೆ ಮಾಡಲು ಪರಿಷತ್ತು ಸಭೆಯಲ್ಲಿ ಪ್ರತಿಪಕ್ಷ ಒತ್ತಾಯಪಡಿಸಿದ್ದು, ಆ ಸಂಧರ್ಭದಲ್ಲಿ ಕಡಿಮೆಮಾಡುತ್ತೇವೆಂದು ಪರಿಷತ್ತು ಸಭೆಯಲ್ಲಿ ರೂಲಿಂಗ್ ನೀಡಿದ್ದು ಅದು ಕಡತಕ್ಕೆ ಸೀಮಿತವಾಗಿ ಬಿಟ್ಟ ಪ್ರಮೇಯ.

ಉದ್ಯಮ ಪರವಾನಗಿ ಯನ್ನು ಆನ್‍ಲೈನ್ ನಲ್ಲಿ ಅರ್ಜಿ ಹಾಕಿ ಪಡೆಯಬಹುದು ಎಂದು ಪ್ರಚಾರ ಕೊಟ್ಟು ಉದ್ಯಮ ನಡೆಸುತ್ತಿರುವವರು ಉದ್ಯಮ ಪರವಾನಗಿ ನವೀಕರಣ ಮಾಡಲು ಭವಣೆ ಪಡುತ್ತಿದ್ದು, ಪ್ರತೀ ವರ್ಷ ಜನವರಿಯಿಂದ ಮಾರ್ಚ್ತಿಂ ಗಳ ಅವಧಿಯಲ್ಲಿ ಸುಮಾರು 15 ಸಾವಿರದಿಂದ 20 ಸಾವಿರದವರೆಗೆ ಉದ್ಯಮ ಪರವಾನಗಿ ನವೀಕರಣವಾಗುತ್ತಿದ್ದ ಜಾಗದಲ್ಲಿ ಈಗ ಕೇವಲ 1 ಸಾವಿರ ಉದ್ಯಮ ಪರವಾನಗಿ ನವೀಕರಣವಾಗಿ ಮ.ನ.ಪಾ ಗೆ ಆದಾಯ ಕುಂಠಿತವಾಗುತ್ತಿರುವ ಪ್ರಮೇಯ.

ಕೊರೊನಾ ಮಹಾಮಾರಿಯ ಸಂಧರ್ಭ ಮಂಗಳೂರು ಮಹಾನಗರ ಪಾಲಿಕೆಯಿಂದ ಜನರಿಗೆ ಯಾವುದೇ ರೀತಿಯ ಕಿಟ್ ನ್ನು ವಿತರಿಸದೆ ಕಾರ್ಮಿಕ ಇಲಾಖೆಯಿಂದ ವಿತರಿಸಲ್ಪಡಬೇಕಾಗಿದ್ದ ಕಿಟ್‍ಗಳನ್ನು ಮಹಾನಗರ ಪಾಲಿಕೆಯ ಮೇಯರ್ ಅವರ ಮೇಲೆ ಒತ್ತಡ ಹಾಕಿ ಮ.ನ.ಪಾ ಸದಸ್ಯರ ಮೂಲಕ ವಿತರಿಸಿ ತಾವೇ ಇದನ್ನು ಕೊಟ್ಟದ್ದಾಗಿ ಪರಿಷತ್ತಿನಲ್ಲಿ ಸುಳ್ಳು ಹೇಳಿರುವ ವಿಚಾರ ಇವೆಲ್ಲವುಗಳನ್ನು ಗಮನಿಸಿದಾಗ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತ ವೈಫಲ್ಯ ಆಗಿದೆ ಮತ್ತು ತುಘಲಕ್ದ ರ್ಬಾರ್ ನಡೆದಿದೆ ಎಂಬುವುದಕ್ಕೆ ಸಾಕ್ಷಿ.

ಸ್ಮಾರ್ಟ್ ಸಿಟಿ ಕಾಮಗಾರಿಗಳು ದಿನಾಂಕ 23.12.2020 ರಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಕಾಮಗಾರಿಗಳು ಸ್ಥಗಿತಗೊಂಡ ಕಾರಣ ಆರ್ಥಿಕ ಚಟುವಟಿಕೆ ಕೇಂದ್ರೀಕೃತ ಭಾಗಗಳ ವ್ಯಾಪಾರಸ್ಥರು ಧೂಳಿನ ಮಧ್ಯೆ ವ್ಯಾಪಾರವಿಲ್ಲದೆ ಕಷ್ಟಪಡುವ ಸಂಧರ್ಭ ಬಂದಿದೆ. ಅಂಗಡಿಗಳ ಒಳಗಡೆ ಧೂಳು ಹೋಗಿ ಬಟ್ಟೆಯಂಗಡಿಗಳಲ್ಲಿ ಬಟ್ಟೆಗಳು ಹಾಳಾಗುತ್ತಿವೆ, ಆಹಾರ ಪದಾರ್ಥಗಳ ಮೇಲೆ ಧೂಳು ಕೂತು ಅವುಗಳು ಹಾಳಾಗುತ್ತಿವೆ, ಇತರ ಅಂಗಡಿಗಳಲ್ಲಿರುವ ಯಾವುದೇ ಸಾಮಾನು ಸರಂಜಾಮುಗಳ ಮೇಲೆ ಧೂಳು ಆವರಿಸಿ ಅವುಗಳನ್ನು ಖರೀದಿಸದೇ ಇರುವ ಸಂಗತಿ, ಒಟ್ಟಾರೆಯಾಗಿ ಎಲ್ಲೂ ಕೂಡ ವಾಹನ ನಿಲುಗಡೆ ಮಾಡಲು ಸ್ಥಳವಿಲ್ಲದೇ ಈ ಪ್ರದೇಶಕ್ಕೆ ಗ್ರಾಹಕರು ಬರುವುದನ್ನೇ ಕಡಿಮೆ ಮಾಡಿರುವಂತಹ ಸಂಗತಿ, ಇವುಗಳಿಂದ ವ್ಯಾಪಾರಸ್ಥರು ಆರ್ಥಿಕ ಮುಗ್ಗಟ್ಟನ್ನು ಅನುಭವಿಸುತ್ತಿದ್ದಾರೆ. ಅವರ ಭವಣೆ ಕೇಳುವವರು ಯಾರೂ ಇಲ್ಲ. ಸ್ಥಳೀಯ ಶಾಸಕರುಗಳು ಮತ್ತು ಸಂಸದರು ಇದರ ಬಗ್ಗೆ ಗಮನ ಹರಿಸದೇ ಇರುವುದು ಶೋಚನೀಯ.

ಸ್ಮಾರ್ಟ್ ಸಿಟಿ ಕಾಮಗಾರಿಗಳು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಿಂದ ಸ್ಥಗಿತವಾಗಿದೆ ಇದರ ಹಿಂದೆ ಕಾಂಗ್ರೆಸ್ಪ ಕ್ಷದ ಕೈವಾಡ ಇದೆ ಎಂದು ಮ.ನ.ಪಾ ಆಡಳಿತ ಹಾಗೂ ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ರವರು ಜನರಿಗೆ ಸುಳ್ಳು ಹೇಳುವುದರ ಮೂಲಕ ಅವರ ಆಡಳಿತ ವೈಫಲ್ಯವನ್ನು ಮುಚ್ಚಲು ಶ್ರಮಿಸುತ್ತಿದ್ದಾರೆ.

ಡಬ್ಲ್ಯು.ಪಿ. ನಂಬ್ರ 9367/2020 ರಲ್ಲಿ ದಿನಾಂಕ 23.12.2020 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಆಧೇಶ ಪತ್ರದ 2ನೇ ಖಂಡಿಕೆಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ಧೇಶಕರು ‘2016 ರ ನಿಯಮಗಳನ್ನು ಅನುಸರಿಸಿರುವುದಿಲ್ಲ’ ಎಂದು ಹೇಳಿದಾಗ ‘ಹಾಗಾದರೆ ನೀವು ಏನು ಮಾಡುತ್ತೀರಿ’ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಕೇಳಿದ ಸಂಧರ್ಭ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ಧೇಶಕರು ‘ಸ್ಮಾರ್ಟ್ ಸಿಟಿಯ ಎಲ್ಲಾ ಗುತ್ತಿಗೆದಾರರಿಗೆ ಕೆಲಸವನ್ನು ನಿಲ್ಲಿಸಲು ಸೂಚಿಸುತ್ತೇನೆ’ ಎಂದು ಸ್ವಯಂ ಪ್ರೇರಿತವಾಗಿ ಅಂಡರ್‍ಟೇಕಿಂಗ್ (undertaking) ನೀಡಿರುತ್ತಾರೆ. ಆ ಸಂಧರ್ಭದಲ್ಲಿ ಮ.ನ.ಪಾ ಆಯುಕ್ತರಾಗಿ ಮತ್ತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಲಿ ಮ.ನ.ಪಾ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದರು. ಮಾತ್ರವಲ್ಲದೇ ದಿನಾಂಕ 15.02.2021 ರಂದು ಆದೇಶ ಪತ್ರದ ಖಂಡಿಕೆ 4 ರ ಕೊನೆಯ ಭಾಗದಲ್ಲಿ ‘ಈ ನ್ಯಾಯಾಲಯವು ಕಾಮಗಾರಿಗಳನ್ನು ನಿಲ್ಲಿಸುವರೇ ಯಾವುದೇ ಆಧೇಶವನ್ನು ಹೊರಡಿಸಿರುವುದಿಲ್ಲ. ದಿನಾಂಕ 23.12.2020 ರಂದು 8ನೇ ಪ್ರತಿವಾದಿ (ಸ್ಮಾರ್ಟ್‍ಸಿಟಿ) ಪರವಾಗಿ ಕೆಲಸ ಕಾರ್ಯಗಳನ್ನು ನಿಲ್ಲಿಸಲು ಗುತ್ತಿಗೆ ದಾರರಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿಕೆ ನೀಡಿರುತ್ತಾರೆ’ ಎಂದು ಐ.ಎ ನಂಬ್ರ 1/2021 ರ ಪ್ರಯುಕ್ತ ಮಾಡಿದ ಆದೇಶದಲ್ಲಿ ಉಚ್ಚ ನ್ಯಾಯಾಲಯ ಹೇಳಿರುತ್ತದೆ.

 ಮ.ನ.ಪಾ ಆಯುಕ್ತರಾಗಿ ಮತ್ತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ಧೆಶಕರಾಗಿ ಒಬ್ಬರೇ ಇದ್ದರೆ ಕಾಮಗಾರಿಗಳು ಸುಲಲಿತವಾಗಿ ನಡೆಯುತ್ತಿದೆ ಎಂದು ಇಲ್ಲಿಯ ಸಂಸದರು ಹೇಳಿಕೆ ಕೊಟ್ಟಿದ್ದರು. ಮಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಇಬ್ಬರು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಹಾಗೂ ಇಲ್ಲಿಯ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರ ನೇತೃತ್ವದ ‘ಸಿಟಿ ಲೆವೆಲ್ ಅಡೈಸರಿ ಕಮಿಟಿ’ (CLAC) ಇದ್ದು ಸ್ಮಾರ್ಟ್ ಸಿಟಿ ಕಾಮಗಾರಿಯ ಬಗ್ಗೆ ಸಲಹೆ ಸೂಚನೆ ಕೊಡುವ ಜವಾಬ್ದಾರಿ ಇವರ ಮೇಲೆ ಇದ್ದು, ಇವರ ಒತ್ತಡದಿಂದ ಅವೈಜ್ಞಾನಿಕ ಕಾಮಗಾರಿಗಳು ನಗರದಾದ್ಯಂತ ನಡೆಸಲಾಗುತ್ತಿದೆ. ಇದರಿಂದ ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತ ಮಾಡುವ ಸಮಸ್ಯೆ ಬಂದೊದಗಿದೆ. ಇದಕ್ಕೆ ಇವರು ಉತ್ತರಿಸಬೇಕಿದೆ.

 ಹೀಗಿದ್ದಾಗಿಯೂ ತನ್ನ ತಪ್ಪನ್ನು ಮತ್ತು ಆಡಳಿತ ವೈಫಲ್ಯವನ್ನು ಮರೆಮಾಚಲು ಉಚ್ಚ ನ್ಯಾಯಾಲಯದ ಮೇಲೆ ಆರೋಪ ಹೊರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲ ಎಂದು ಹೇಳುವ ಮ.ನ.ಪಾ ಪರಿಷತ್ತು ಸಭೆಯಲ್ಲಿ ಮಹಾ ಪೌರರು, ಆಡಳಿತ ಪಕ್ಷದ ಸದಸ್ಯರು ಹಾಗೂ ಆಯುಕ್ತರು ಸುಳ್ಳು ಹೇಳಿಕೆಯನ್ನು ನೀಡಿ ಉಚ್ಚ ನ್ಯಾಯಾಲಯವನ್ನು ಅವಹೇಳನ ಮಾಡಿದ್ದು ಮಾತ್ರವಲ್ಲದೇ ಆಡಳಿತ ಪಕ್ಷದವರು ಸುಳ್ಳು ಹೇಳುತ್ತಿದ್ದಾರೆ ಎಂದು ಪರಿಷತ್ತು ಸಭೆಯಲ್ಲಿ ಹೇಳಿರುವುದು ಖಂಡನೀಯ.

ಒಂದು ವೇಳೆ ಕಾಮಗಾರಿಗಳನ್ನು ನಿಲ್ಲಿಸುವರೇ ಉಚ್ಚ ನ್ಯಾಯಾಲಯದ ಆದೇಶವಿದ್ದಲ್ಲಿ ರಥಬೀದಿಯ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಹೇಗೆ ಪೂರೈಸಿದ್ದಾರೆ ಎಂದು ಸ್ಪಷ್ಟನೆ ನೀಡಬೇಕಾಗಿದೆ ಮಾತ್ರವಲ್ಲ ಇದೊಂದು ನ್ಯಾಯಾಲಯ ನಿಂದನೆ ಪ್ರಕರಣವಾಗುತ್ತದೆ. ಇದಕ್ಕೆ ಬಿ.ಜೆ.ಪಿ ಆಡಳಿತ ಉತ್ತರ ನೀಡಬೇಕಾಗಿದೆ.

 ಇನ್ನು ಮೂರು ತಿಂಗಳಲ್ಲಿ ಮಳೆ ಆರಂಭವಾಗಲಿದ್ದು, ಈಗಾಗಲೇ ಅಪೂರ್ಣಾವಸ್ಥೆಯಲ್ಲಿರುವ ರಸ್ತೆ ಕಾಮಗಾರಿಗಳು, ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗಳು, ಒಳಚರಂಡಿ ಕಾಮಗಾರಿಗಳು, ಈಗಾಗಲೇ ಗೇಲ್ ಇಂಡಿಯ ಗ್ಯಾಸ್ ಲೈನ್ಹಾ ಕುವ ಬಗ್ಗೆ ನಗರದ ರಸ್ತೆಯ ಉದ್ದಗಲಕ್ಕೆ ದೊಡ್ಡ ದೊಡ್ಡ ಪೈಪ್‍ಗಳನ್ನು ಇಟ್ಟಿರುವುದು ಈ ಎಲ್ಲಾ ಅವ್ಯವಸ್ಥೆಗಳಿಂದ ಮಂಗಳೂರು ನಗರದಲ್ಲಿ ಕೃತಕ ನೆರೆ ಉಂಟಾಗಲಿದ್ದು, ಅಂಗಡಿ ಮುಂಗಟ್ಟುಗಳ ಒಳಗಡೆ ನೆರೆ ನೀರು ಹೋಗಿ ಎಲ್ಲಾ ಸಾಮಾನು ಸರಂಜಾಮುಗಳು ಹಾಳಾಗುವುದು ಮಾತ್ರವಲ್ಲದೇ ಎಲ್ಲರನ್ನು ಆರ್ಥಿಕ ಮುಗ್ಗಟ್ಟಿಗೆ ಹಾಕಿಲಿದೆ. ಇದಕ್ಕೆ ಮ.ನ.ಪಾ ಆಡಳಿತ ಯಾವ ಕ್ರಮವನ್ನು ಕೈಗೊಳ್ಳಲಿದೆ ಎಂದು ಜನತೆಗೆ ಉತ್ತರ ನೀಡಬೇಕಿದೆ.