ಮಾರ್ಚ್ 8ರ ಮಂಗಳವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ *ಮೈ ಲಡ್ಕಿ ಹೂಂ, ಲಡ್ ಸಖ್ತಿ ಹೂಂ ಎನ್ನುವ ಘೋಷಣೆಯೊಂದಿಗೆ ಸ್ವಉದ್ಯೋಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಕ್ಲಬ್ ಹಾಲ್‌ನಲ್ಲಿ ಮಹಿಳೆಯರು ತಯಾರು ಮಾಡಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಶಾಲೆಟ್ ಪಿಂಟೋ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಕೊರೋನಾ ಕಾಲದಲ್ಲಿ ಮಹಿಳೆಯರು ಸಂಸಾರವನ್ನು ಮುನ್ನಡೆಸಿದ ರೀತಿ ಅಸೀಮ. ಪಕ್ಷಾತೀತವಾಗಿ ಶುಲ್ಕ ಇಲ್ಲದೆ ಮಹಿಳೆಯರಿಗೆ ಇಲ್ಲಿ ಅವರ ಉತ್ಪನ್ನ ಮಾರಲು ಅವಕಾಶ ನೀಡಲಾಗಿದೆ. 60ರಷ್ಟು ಮಹಿಳೆಯರು ಇದನ್ನು ಬಳಸಿಕೊಂಡರು. ಜೊತೆಗೆ ಎಲ್ಲರನ್ನೂ ಸ್ವಾಗತಿಸಿದರು.

ಇಲ್ಲಿ ಮಹಿಳಾ ವಜ್ರಗಳೇ ಇರುವಲ್ಲಿ ನಾನು ದೃಷ್ಟಿ ಬೊಟ್ಟಿಗೆ ಮಾತ್ರ ಇದ್ದೇನೆ. ಮಹಿಳಾ ದಿನದ ಅಭಿನಂದನೆ ಹಾಗೂ ಇಲ್ಲಿ ಮಹಿಳಾ ಕೈ ವಸ್ತುಗಳಿಗೆ ಅವಕಾಶ ನೀಡಿದ್ದಕ್ಕೆ ಅಭಿನಂದನೆ. ಆದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶ ನೀಡುವಲ್ಲಿ ನಾವು ಸೋತಿದ್ದೇವೆ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ಮಹಿಳೆಯರು ಹೇಗೆ ಪುರುಷರಿಗಿಂತ ಉತ್ತಮ ಆಡಳಿತ ನೀಡಬಲ್ಲರು ಎಂದು ತೋರಿಸಿದ್ದಾರೆ. ಶಕ್ತಿ ರೂಪಿಣಿ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿ ಎಂದು ನಾನು ಬಯಸುತ್ತೇನೆ ಎಂದು ಮಾಜೀ ಶಾಸಕ ಜೆ. ಆರ್. ಲೋಬೋ ಹೇಳಿದರು.

ಭಾರತದಲ್ಲಿ ಮಹಿಳೆಯರಿಗೆ ಗೌರವ ಬಹಳ. ಆದರೆ ಅವಕಾಶ ಕಡಿಮೆ. ನಾವು ಯಾರಿಗೂ ಕಡಿಮೆ ಅಲ್ಲ ಎಂಬ ಮನೋಭಾವದೊಡನೆ ರಾಜಕೀಯ ನಾಯಕತ್ವ ಗಳಿಸಬೇಕು. ಹೆಣ್ಣು ಮನಸ್ಸು ಮಾಡಿದರೆ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಮೊದಲಾದವರಾಗಲು ಸಾಧ್ಯ ಎಂದು ಮಾಜೀ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದರು.

ಸಮಾರಂಭದಲ್ಲಿ ಯುವ ಕಾಂಗ್ರೆಸ್‌ನ ಸೌಮ್ಯ, ತೃಪ್ತಿ, ಸಂಜನಾ ಹಾಗೂ ಕಾರ್ಪೊರೇಟರ್ ಜೆಸಿಂತಾ ಮಹಿಳಾ ಪದಾಧಿಕಾರಿಗಳಾದ ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ಸುನಿತಾ, ಶೋಭಾ ಮೊದಲಾದವರು ಉಪಸ್ಥಿತರಿದ್ದರು.