ಮಂಗಳೂರು : ಸಮಾಜಕ್ಕೆ ಸೂಕ್ತ ಮಾರ್ಗದರ್ಶನೀಡುವ ಹಾಗೂ ಮಮಕಾರ, ಅಹಂಕಾರ, ಸ್ವಾರ್ಥ ರಹಿತ ವ್ಯಕ್ತಿ "ಗುರು" ಎಂದೆನಿಸಿಕೊಳ್ಳುತ್ತಾನೆ. ಅವರನ್ನು ವಂದಿಸುವುದು ಮತ್ತು ಕೃತಜ್ಞತೆ ಸಲ್ಲಿಸುವುದೇ "ಗುರುವಂದನೆ". ಇದು ಗುರುಗಳಿಗಲ್ಲ, ಉನ್ನತ ಗುರುಪೀಠಕ್ಕೆ ಸಲ್ಲಿಸುವ ವಂದನೆಯಾಗಿದೆ ಎಂದು ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಗುರುವರ್ಯರಾದ ಶ್ರೀ ಜ್ಞಾನೇಶ್ವರೀ ಪೀಠ, ದೈವಜ್ಞ ಬ್ರಾಹ್ಮಣ ಮಠ, ಶ್ರೀ ಕ್ಷೇತ್ರ ಕರ್ಕಿ. ಹೊನ್ನಾವರದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.
ಮಹಾಸ್ವಾಮೀಜಿಯವರು ರವಿವಾರ ಮಂಗಳೂರು ಮಹಾನಗರಕ್ಕೆ ಭೇಟಿ ನೀಡಿದ ಸಂದರ್ಭ ಮಂಗಳೂರು ದೈವಜ್ಞ ಬ್ರಾಹ್ಮಣ ಸಂಘ (ರಿ.), ದೈವಜ್ಞ ಮಹಿಳಾ ಮಂಡಳಿ ರಿ. ದೈವಜ್ಞ ಚಿನ್ನ ಬೆಳ್ಳಿ ಕೆಲಸಗಾರರ ಸಂಘ ರಿ. ದೈವಜ್ಞ ಯುವಕ ಮಂಡಳಿ ರಿ. ಇವರ ಆಶ್ರಯದಲ್ಲಿ ರವಿವಾರ ಬೆಳಿಗ್ಗೆ 10 :00 ಗಂಟೆಗೆ ಮಂಗಳೂರಿನ ಅಶೋಕ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸ್ವಾಮೀಜಿಯವರಿಗೆ ಗುರುವಂದನಾ ಮತ್ತು ಪಾದುಕಾ ಪೂಜೆ ಕಾರ್ಯಕ್ರಮ ನೆರವೇರಿತು. ಈ ವೇಳೆ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಒಗ್ಗಟ್ಟು, ಸೇವೆ, ಪರಸ್ಪರ ಸಹಕಾರ ಇಲ್ಲದಿದ್ದರೆ ಸಮಾಜ ಎಂಬ ಹೆಸರಿಗೆ ಮೊಲ್ಯವಿಲ್ಲ. ಏಕೀಕೃತ ಸಂಘಟನೆಯೇ ಸಮಾಜ ಎಂದೆನಿಸಿಕೊಳ್ಳುತ್ತದೆ. ಸಮಾಜದಲ್ಲಿ ಪರಸ್ಪರ ಪೈಪೋಟಿ ಇರಬಾರದು, ಪರಸ್ಪರ ಸಹಕಾರ ಇರಬೇಕು. ಸಮಾಜದ ಬಗ್ಗೆ ಅಲ್ಲಿನ ಜನಸಾಮಾನ್ಯರ ಬಗ್ಗೆ ಪ್ರತಿಯೊಬ್ಬನೂ ಕೆಳಸ್ತರದಿಂದಲೇ ಚಿಂತನೆ ಮಾಡಬೇಕು ಎಂದು ಸ್ವಾಮೀಜಿಯವರು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್. ಎಂ. ರೇವಣ್ಕರ್, ಸಮಾಜ ಸೇವಕ ನಾಗರಾಜ ಶೇಟ್ ಅಥಿತಿಗಳಾಗಿದ್ದರು.
ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಂ ಅಶೋಕ್ ಶೇಟ್, ಗಾಯತ್ರಿ ದೇವಿ ಮಂದಿರದ ಮುಕ್ತೇಸರ ರಮಾನಂದ ಶೇಟ್, ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ ಸುಧಾಕರ ಶೇಟ್, ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪ ಕೆ ಶೇಟ್, ದೈವಜ್ಞ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಶ್ರೀಪಾದ ರಾಯ್ಕರ್, ದೈವಜ್ಞ ಯುವಕ ಮಂಡಳಿಯ ಅಧ್ಯಕ್ಷ ಗಣೇಶ ಶೇಟ್ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೈವಜ್ಞ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ ಸ್ವಾಗತಿಸಿದರು. ರಾಜೇಂದ್ರ ಕಾಂತ್ ಶೇಟ್ ಕಾರ್ಯಕ್ರಮ ನಿರ್ವಹಿಸಿದರು ವಿಜಯಕಾಂತ್ ಶೇಟ್ ವಂದಿಸಿದರು..