ಉಜಿರೆ: ಕಲಿಕೆ ಮತ್ತು ಪ್ರಗತಿಗೆ ಮಿತಿ ಇರುವುದಿಲ್ಲ. ಸತತ ಪ್ರಯತ್ನ, ನಿರಂತರ ಕಲಿಕೆ ಮತ್ತು ಪ್ರಗತಿಯಿಂದ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಎರಡು ದಿನ ನಡೆದ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳು ಮತ್ತು ತರಬೇತುದಾರರ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸೃಜನಾತ್ಮಕ ಚಿಂತನೆಯೊoದಿಗೆ ನಿರುದ್ಯೋಗಿಗಳಿಗೆ ಸಕಾಲಿಕ ಪ್ರೇರಣೆ, ಮಾರ್ಗದರ್ಶನ ಮತ್ತು ತರಬೇತಿಯೊಂದಿಗೆ ಹೊಸ ಅವಕಾಶಗಳನ್ನು ಒದಗಿಸಿದಲ್ಲಿ ಅವರು ಪ್ರಗತಿಯೊಂದಿಗೆ ಉನ್ನತ ಸಾಧನೆ ಮಾಡಬಲ್ಲರು. ಈ ದಿಸೆಯಲ್ಲಿ ರುಡ್‌ಸೆಟ್ (ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ) ಸಂಸ್ಥೆಗಳ ಸೇವೆ-ಸಾಧನೆ ಇತರ ಎಲ್ಲಾ ಸಂಸ್ಥೆಗಳಿಗೂ ಮಾದರಿಯಾಗಿದ್ದು ಶ್ಲಾಘನೀಯವಾಗಿದೆ ಎಂದರು. ಎಲ್ಲಾ ರುಡ್‌ಸೆಟ್ ಸಂಸ್ಥೆಗಳ ನೌಕರ ವರ್ಗದವರ ಸೇವಾಬದ್ಧತೆ ಮತ್ತು ಕಾಳಜಿ ಹಾಗೂ ಸಂಘಟಿತ ಪ್ರಯತ್ನದಿಂದ ಉನ್ನತ ಸಾಧನೆ ಸಾಧ್ಯವಾಗಿದೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉನ್ನತ ಸಾಧನೆ ಮಾಡಿದ ನಿರ್ದೇಶಕರುಗಳನ್ನು ಗೌರವಿಸಲಾಯಿತು.
ಪಶ್ಚಿಮ ಬಂಗಾಲದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಸೈಬಲ್‌ರಾಯ್ ಚೌಧರಿ ಮತ್ತು ಕಣ್ಣೂರು ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಜಯಚಂದ್ರನ್ ವಾರ್ಷಿಕ ಸಮ್ಮೇಳನದ ಬಗ್ಯೆ ಅನಿಸಿಕೆ ವ್ಯಕ್ತಪಡಿಸಿದರು.
ನೇಶನಲ್ ಅಕಾಡೆಮಿ ಆಫ್ ರುಡ್‌ಸೆಟ್ ಸಂಸ್ಥೆಯ ಪ್ರಧಾನ ನಿಯಂತ್ರಣಾಧಿಕಾರಿ ಆರ್.ಆರ್. ಸಿಂಗ್ ಮತ್ತು ನಿರ್ದೇಶಕ ನಟರಾಜ್ ಶುಭಾಶಂಸನೆ ಮಾಡಿದರು.
ರುಡ್‌ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ್ ಕಲ್ಲಾಪುರ್ ಸ್ವಾಗತಿಸಿದರು. ಧಾರವಾಡ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಗವಿಸಿದ್ದಪ್ಪ ಕಟ್ಟೀಮನಿ ಧನ್ಯವಾದವಿತ್ತರು. ಕಣ್ಣೂರು ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಭಿಲಾಶ್, ಎನ್. ಕಾರ್ಯಕ್ರಮ ನಿರ್ವಹಿಸಿದರು.
ಎರಡು ದಿನ ನಡೆದ ವಾರ್ಷಿಕ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿರುವ ೨೭ರುಡ್‌ಸೆಟ್ ಸಂಸ್ಥೆಗಳ ೨೫ ನಿರ್ದೇಶಕರು ಮತ್ತು ೨೫ ತರಬೇತುದಾರರು ಭಾಗವಹಿಸಿದರು.