ಸುಳ್ಯ: ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಆದ್ಯತೆ ನೀಡಲಾಗುತಿದೆ. ರಸ್ತೆಗಳ ಅಭಿವೃದ್ಧಿಯ ಸಂದರ್ಭದಲ್ಲಿ ಜನರ ಸಹಕಾರ ಮತ್ತು ಸಹಭಾಗಿತ್ವ ಅತೀ ಅಗತ್ಯ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. ದಕ್ಷಿಣ ಕನ್ನಡ  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮ ಸಂಪರ್ಕಿಸುವ ಸೇವಾಜೆ-ಮಡಪ್ಪಾಡಿ  ರಸ್ತೆ ಹಾಗು ಎಲಿಮಲೆ-ಅರಂತೋಡು ರಸ್ತೆಯಲ್ಲಿ ಸೇವಾಜೆ ಎಂಬಲ್ಲಿ ನಿರ್ಮಾಣಗೊಂಡ ನೂತನ ಸೇತುವೆಯನ್ನು  ಉದ್ಘಾಟಿಸಿ ಅವರು ಮಾತನಾಡಿದರು. 

ಅಭಿವೃದ್ಧಿಯ ಮೂಲಕ ಜನರ ವಿಶ್ವಾಸ ಗಳಿಸುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ 75 ಗ್ರಾಮಗಳಿಗೂ ಅಭಿವೃದ್ಧಿಯ ಬೆಳಕನ್ನು ಹರಿಸುವ ಗುರಿ ಹೊಂದಲಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಗೆ 50 ಕೋಟಿ ಅನುದಾನ ಬಿಡುಗಡೆಯಾಗಿದೆ.ಜನರು ನೀಡಿದ ಅಧಿಕಾರಕ್ಕೆ ಮತ್ತು ತಮ್ಮ ಮೇಲಿರಿಸಿದ ವಿಶ್ವಾಸಕ್ಕೆ ಚ್ಯುತಿ ಬಾರದಂತೆ‌ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇನೆ ಎಂದು ಹೇಳಿದ ಸಚಿವರು ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದು ಸಚಿವರು ಹೇಳಿದರು. 

ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಎಲ್ಲಾ ರೀತಿಯ ಟೀಕೆಗಳನ್ನು ಸವಾಲಾಗಿ ಸ್ಚೀಕರಿಸಿ ಗ್ರಾಮಗಳ ಅಭಿವೃದ್ಧಿಯನ್ನು ಸಚಿವರ ನೇತೃತ್ವದಲ್ಲಿ ನಡೆಸಲಾಗುತಿದೆ ಎಂದು ಹೇಳಿದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಪತ್ರಕರ್ತರ ಸಂಘವು ನಡೆಸಿದ ಗ್ರಾಮ ವಾಸ್ತವ್ಯದ ಕಲ್ಪನೆಗೆ ಎಲ್ಲರೂ ಉತ್ತಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಕಾರವೇ ಈಗ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಕಲ್ಪನೆಯ ಮೂಲಕ ಗ್ರಾಮ ವಾಸ್ತವ್ಯ ಮಾಡುವುದರಿಂದ ಈ ಕಾರ್ಯಕ್ರಮಕ್ಕೆ ಹೆಚ್ಚು ಅರ್ಥ ಬರುವಂತೆ ಮಾಡಿದೆ ಎಂದು ಹೇಳಿದರು. ಪತ್ರಕರ್ತರು  ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಕೇಳಿ ಬಂದ ಪ್ರಮುಖ ಬೇಡಿಕೆ ಸೇವಾಜೆ-ಮಡಪ್ಪಾಡಿ ರಸ್ತೆ ಅಭಿವೃದ್ಧಿ. ಪತ್ರಕರ್ತರ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗು ಕಾಮಗಾರಿ ಅನುಷ್ಠಾನಕ್ಕೆ ಸಚಿವ ಅಂಗಾರ ಸಹಕಾರ ನೀಡಿದ ಕಾರಣ ಸುಂದರ ರಸ್ತೆ ನಿರ್ಮಾಣ ಆಗಿದೆ ಎಂದರು.

ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರ ಗುಂಡಿಮಜಲು, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಯೋಜನಾ ಉಪವಿಭಾಗದ ಸಹಾಯಕ  ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ ಮೂರ್ತಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಮೃತಕುಮಾರ್ ರೈ ಸ್ವಾಗತಿಸಿ, ಮರ್ಕಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವಿಂದ ಅಳಲುಪಾರೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,   ಇಂಜಿನಿಯರ್ ಶ್ರೀನಿವಾಸಮೂರ್ತಿ,  ಮಡಪ್ಪಾಡಿ ರಸ್ತೆಯ ಗುತ್ತಿಗಾರ ನಾರಾಯಣ ಕೇಕಡ್ಕ, ಸೇವಾಜೆ ಸೇತುವೆಯ ಗುತ್ತಿಗೆದಾರ ಮಹಮ್ಮದ್ ಕುಂಞಿ ಅವರನ್ನು‌ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ದ.ಕ.ಜಿಲ್ಲಾ  ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ.ಸಿ.ಜಯರಾಮ, ಎಪಿಎಂಸಿ ಮಾಜಿ ಅಧ್ಯಕ್ಷರಾದ ವಿನಯಕುಮಾರ್ ಮುಳುಗಾಡು, ಜಯರಾಮ ಹಾಡಿಕಲ್ಲು, ಪ್ರಮುಖರಾದ ಎಂ.ಡಿ.ವಿಜಯಕುಮಾರ್, ವೆಂಕಟ್ ವಳಲಂಬೆ, ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ, ಎನ್.ಟಿ.ಹೊನ್ನಪ್ಪ, ಗೀತಾಶೇಖರ,ಕೇಶವ ಅಡ್ತಲೆ,ಕರುಣಾಕರ ಪಾರೆಪ್ಪಾಡಿ, ಸಚಿನ್ ಬಳ್ಳಡ್ಕ, ಹೇಮಕುಮಾರ್ ಹಾಡಿಕಲ್ಲು,ರಾಮಚಂದ್ರ ಬಳ್ಳಡ್ಕ,ಯೋಜನಾ ಉಪವಿಭಾಗದ ಕಿರಿಯ ಇಂಜಿನಿಯರ್ ಪರಮೇಶ್ವರ ನಾಯ್ಕ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಕಾರ್ಯನಿರತ ಪತ್ರಕರ್ತರ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಪದ್ಮನಾಭ ಮುಂಡೋಕಜೆ, ಕೋಶಾಧಿಕಾರಿ ದಯಾನಂದ ಕೊರತ್ತೋಡಿ, ಮಾಜಿ ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ ಉಪಸ್ಥಿತರಿದ್ದರು.

2.5 ಕೋಟಿಯಲ್ಲಿ ಸೇವಾಜೆ ಸೇತುವೆ ನಿರ್ಮಾಣ ಎಲಿಮಲೆ-ಅರಂತೋಡು ರಸ್ತೆಯಲ್ಲಿ ಸೇವಾಜೆ ಎಂಬಲ್ಲಿ 5054 ಯೋಜನೆಯಲ್ಲಿ 2.50 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ನೂತನ ಸೇತುವೆ ನಿರ್ಮಿಸಲಾಗಿದೆ.