ಉಡುಪಿ: ಇದೇ ವರ್ಷದ ಡಿಸೆಂಬರ್ ಒಳಗೆ ರಾಜ್ಯದ ಸರಕಾರಿ ನೌಕರರ ಬಹು ನಿರೀಕ್ಷಿತ 7 ನೇ ವೇತನ ಆಯೋಗದ ಸೌಲಭ್ಯಗಳನ್ನು ನೌಕರರಿಗೆ ದೊರಕಿಸುವಲ್ಲಿ ರಾಜ್ಯ ಸರಕಾರಿ ನೌಕರರ ಸಂಘ ಬದ್ದವಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಭರವಸೆ ನೀಡಿದರು.

ಅವರು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಸರಕಾರಿ ನೌಕರರ ವಾರ್ಷಿಕ ಸಮಾವೇಶ 2021 ಮತ್ತು ಸೇವಾ ನಿವೃತ್ತಿಗೊಳ್ಳುತ್ತಿರುವ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸರಕಾರಿ ನೌಕರರ 7 ನೇ ವೇತನ ಆಯೋಗದ ರಚನೆ ಕುರಿತಂತೆ ಒಂದು ತಿಂಗಳೊಳಗೆ ಸಮಿತಿ ರಚನೆಯಾಗಲಿದ್ದು, ಇದೇ ಡಿಸೆಂಬರ್ ಒಳಗೆ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ನೀಡುವಂತೆ ಸರಕಾರದ ಮೇಲೆ ಈಗಾಗಲೇ ಒತ್ತಡ ಹಾಕಲಾಗಿದ್ದು, ಡಿ ದರ್ಜೆ ನೌಕರರಿಗೆ   ರೂ.10000,ಸಿ ದರ್ಜೆ ನೌಕರರರಿಗೆ   20000 , ,ಬಿ ದರ್ಜೆ ಅಧಿಕಾರಿಗಳಿಗೆ   30000 ಹಾಗೂ ,ಎ ದರ್ಜೆ ಅಧಿಕಾರಿಗಳಿಗೆ   40000 ರೂ ವರೆಗೆ  ವೇತನ ಹೆಚ್ಚಳವಾಗಲಿದೆ ಎಂದು ರಾಜ್ಯಾಧ್ಯಕ್ಷರು ಹೇಳಿದರು.

 ರಾಜ್ಯದ ಸರ್ಕಾರಿ ನೌಕರರಿಗೆ ನಗದು ರಹಿತ 100% ಉಚಿತ ಆರೋಗ್ಯ ಚಿಕಿತ್ಸೆ ನೀಡುವ ಯೋಜನೆಯು ಶೀಘ್ರದಲ್ಲಿ ಜಾರಿಯಾಗಲಿದ್ದು, ಈ ಕುರಿತಂತೆ ಅಂತಿಮ ಸಭೆ ನಡೆಯಲಿದ್ದು, ಈ ಯೋಜನೆಯ ಮೂಲಕ ನೌಕರರು ಮತ್ತು ಅವರ ಅವಲಂಬಿತರು ಯಾವುದೇ ಕಾಯಿಲೆಗಳಿಗೆ 1 ಲಕ್ಷದಿಂದ 1 ಕೋಟಿಯ ವರೆಗೆ ಯಾವುದೇ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ.

 ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು , ರಾಜ್ಯದ 6 ಲಕ್ಷ ನೌಕರರ ಸಮಸ್ಯೆಗಳನ್ನು ಆಧ್ಯಯನ ಮಾಡಿ,ಇವುಗಳನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು , ಯಾವುದೇ ಪ್ರತಿಭಟನೆ, ಮುಷ್ಕರಗಳಿಲ್ಲದೇ ಮನವಿ ನೀಡುವ ಮೂಲಕ ಹಂತಹAತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ , ಸರಕಾರಿ ನೌಕರರ ಸೇವಾವಹಿಗಳನ್ನು ಆನ್ಲೈನ್ ಮಾಡಲಾಗುತ್ತಿದ್ದು, ಹೆಚ್.ಆರ್.ಎಂ.ಎಸ್, ಮಹಾಲೇಖಪಾಲರ ಕಚೇರಿ ಮತ್ತು ಖಜಾನೆಗಳನ್ನು ಪರಸ್ಪರ ಜೋಡಣೆ ಮಾಡುವ ಮೂಲಕ ನಿವೃತ್ತ ನೌಕರರು ನಿವೃತ್ತಿ ದಿನವೇ ಪಿಂಚಣಿ ಪಡೆಯುವಂತೆ ಯೋಜನೆ ರೂಪಿಸಲಾಗುತ್ತಿದೆ, ಕೆಜಿಐಡಿಯನ್ನು ಆನ್ ಲೈನ್ ಮಾಡಲಾಗಿದ್ದು ,ಅರ್ಜಿ ಸಲ್ಲಿಸಿದ 7 ದಿನಗಳ ಒಳಗೆ ಸಾಲದ ಮೊತ್ತ ಬ್ಯಾಂಕ್ ಖಾತೆಗೆ ಜಮೆ ಆಗುವ ಯೋಜನೆ 1 ತಿಂಗಳೊಳಗೆ ಜಾರಿಗೆ ತರುವ ಚಿಂತನೆಯಿದೆ. 2019 ರಿಂದ ಬಾಕಿ ಇರುವ ಕೆಜಿಐಡಿ ಬೋನಸ್ ಮೊತ್ತ 488 ಕೋಟಿ ರೂ ಒಂದು ವಾರದಲ್ಲಿ ಬಿಡುಗಡೆ ಆಗಲಿದೆ . ಎನ್.ಪಿ.ಎಸ್ ಬದಲು ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಕುರಿತಂತೆ ಮುಖ್ಯಮಂತ್ರಿಯವರೊoದಿಗೆ ಚರ್ಚಿಸಿದ್ದು, ರಾಜ್ಯದ ಸರಕಾರಿ ನೌಕರರ ಹಿತ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದ ವಿವಿಧ ಇಲಾಖೆಗಳ ಎಲ್ಲಾ ನೌಕರರ ಸಮಸ್ಯೆಗಳ ಕುರಿತು ,ಸಂಘದ ವತಿಯಿಂದ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ನ್ಯಾಯ ಒದಗಿಸಲಾಗುವುದು ಎಂದು ಹೇಳಿದರು.

ಉಡುಪಿಯ ಸರಕಾರಿ ನೌಕರರ ಸಮಸ್ಯೆಗಳನ್ನು ಬಗ್ಗೆ ಅರಿತು ,ಆ ಕುರಿತು ರಾಜ್ಯಮಟ್ಟದ ಸಭೆಯಲ್ಲಿ ಚಿರ್ಚಿಸಿ ಅವುಗಳ ಪರಿಹಾರಕ್ಕೆ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಹಣ್ಯ ಶೇರಿಗಾರ್ ಶ್ರಮಿಸುತ್ತಿದ್ದರು, ಜಿಲ್ಲೆಯ ಮಾತ್ರವಲ್ಲದೇ ರಾಜ್ಯದ ಎಲ್ಲಾ ನೌಕರರ ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ತಮ್ಮ ವಾದ ಮಂಡನೆ ಮಾಡುವ ಮೂಲಕ ಉತ್ತಮ ನಾಯಕತ್ವ ಗುಣಗಳನ್ನು ಹೊಂದಿದ್ದು, ತಮ್ಮ ಸೇವಾ ಮನೋಭಾವದ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಮತ್ತು ನೌಕರರಿಗೆ ಆತ್ಮಸ್ಥೆöÊರ್ಯ ತುಂಬುವ ಮೂಲಕ 3 ಬಾರಿ ಉಡುಪಿ ಜಿಲ್ಲಾಧ್ಯಕ್ಷರಾಗಿ ತಮ್ಮ ಸಾಧನೆಯ ಮೂಲಕ ಅಗ್ರಪಂಕ್ತಿಯಲ್ಲಿದ್ದಾರೆ ಎಂದು ಸಿ.ಎಸ್.ಷಡಾಕ್ಷರಿ ಹೇಳಿದರು.

 ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಮೂಲಕ ಜಿಲ್ಲೆಯಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಸುಬ್ರಹ್ಮಣ್ಯ ಶೇರಿಗಾರ್ ಅವರು, ಸರಕಾರಿ ನೌಕರರ ಸೇವೆ ಮಾತ್ರವಲ್ಲದೇ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದು, ಕೋವಿಡ್ ಅವಧಿಯಲ್ಲಿ ಕಾರ್ಯ ನಿರ್ವಹಿಸದ್ದ ಹೊರಗುತ್ತಿಗೆ ನೌಕರರ ಸೇವೆಯನ್ನು ಗುರುತಿಸಿ ಅಭಿಂದಿಸಿದ್ದರು, ಸರ್ವೋತ್ತಮ ಸೇವಾ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಸಹ ಪ್ರಾಮಾಣಿಕ ಮತ್ತು ಪಾರದರ್ಶಕ ಆಯ್ಕೆ ನಡೆಯುವಂತೆ ನೋಡಿಕೊಂಡಿದ್ದ ಅವರು, ನೌಕರರ ಕಾರ್ಯ ಒತ್ತಡವನ್ನು ತಿಳಿದು ಅವರಿಗಾಗಿ ವಿಶೇಷ ಕಾರ್ಯಾಗಾರ ಸಹ ಆಯೋಜಿಸಿದ್ದು, ನೌಕರರ ಎಲ್ಲಾ ಚಟುವಟಿಕೆಗಳಿಗೆ ಅಗತ್ಯ ಪ್ರೋತ್ಸಾಹ ನೀಡುತ್ತಿದ್ದರು ಎಂದರು.

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಆಶಯ ನುಡಿ ಕಾರ್ಯಕ್ರಮ ನೆರವೇರಿಸಿದರು.

 ಸುಬ್ರಹ್ಮಣ್ಯ ಶೇರಿಗಾರ್ ಅವರ ಪತ್ನಿ ಸಜನಿ ಸುಬ್ರಹ್ಮಣ್ಯ , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿವಿಧ ಪದಾಧಿಕಾರಿಗಳಾದ ವೆಂಕಟೇಶಯ್ಯ, ಮಲ್ಲಿಕಾರ್ಜುನ ಬಳ್ಳಾರಿ, ರುದ್ರಪ್ಪ, ಬಸವರಾಜು, ರವಿ, ಮೋಹನ್ ಕುಮಾರ್, ಹರ್ಷ,ಸತೀಶ್ ಸಿದ್ದರಾಮಣ್ಣ, ದ.ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕೃಷ್ಣ, ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಶರೀಫ ಮ ರೋಣ, ಕಾರ್ಕಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಹೆಬ್ರಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ, ಕಾಪು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಬಿಲ್ಲವ,ಮತ್ತಿತರರು ಉಪಸ್ಥಿತರಿದ್ದರು.

 ಅಭಿನಂದನಾ ಸಮಿತಿ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು. ಅಭಿನಂದನಾ ಸಮಿತಿ ಸದಸ್ಯ ಗಣಪತಿ ಹೋಬಳಿದಾರ್ ವಂದಿಸಿದರು.