ವಿಜ್ಞಾನ ಬೆಳೆದಂತೆಲ್ಲ ಪ್ರಕೃತಿ-ಪರಿಸರ, ವಿನಾಶ ದತ್ತ ಮುಖ ಮಾಡಿರುವುದನ್ನು ನಾವು ಕಾಣಬಹುದು. ಮನುಷ್ಯ ತನ್ನ ಸಹಜಗುಣಗಳಿಂದ, ಹುಡುಕಾಡುವ ಭಾವನೆಯಿಂದನೂ ತನವಸ್ತು, ವಿಚಾರಗಳನ್ನು ಸಂಶೋಧಿಸುತ್ತಾ ತನ್ಮೂಲಕ ಮಹಾನ್ ಸಾಧನೆಯ ಶಿಖರವನ್ನು ತಲುಪಿದೆ ಎಂದು ಹೆಮ್ಮೆಯಿಂದ ಬೀಗುತ್ತಾನೆ. ಆದರೆ ಅಂತಹ ವಸ್ತು, ವಿಚಾರಗಳು ಕೆಲವೊಮ್ಮೆ ಅತ್ಯಂತ ಅಪಾಯಕಾರಿ ಮಾತ್ರವಲ್ಲ ವಿಶ್ವದ ಅಂತ್ಯಕ್ಕೂ ಮೂಲವಾಗಬಲ್ಲುದೆಂದು ಬಾಂಬ್ ಜನಕ ನೊಬೆಲ್ ಕಂಡುಕೊಂಡ ಕಾರಣ, ಅಭಿವೃದ್ಧಿಯ ಕಾರ್ಯಕ್ಕೆ ಉತ್ತೇಜಿಸ;ಲು ಅತ್ಯಂತ ದೊಡ್ಡ ಮೊತ್ತದ ತನ್ನ ಎಲ್ಲಾ ಹಣವನ್ನೂ ತೊಡಗಿಸಿ ಬಹುಮಾನ ನೀಡಲು ಪ್ರಾರಂಭಿಸಿ ಪ್ರಾಯಶ್ಚಿತ್ತ ಮಾಡಿಕೊಂಡನು. ಆದರೆ ಈ ವಿಚಾರ ಜಗತ್ತಿಗೆ ,ಜನರಿಗೆ ಇನ್ನೂ ಅರ್ಥವಾಗಿಲ್ಲ. 

ಮಾತನಾಡುವವರ, ಕೆಲಸ ಮಾಡುವವರ ಎಲ್ಲರ ಹೊಣೆಯೂ ಪರಿಸರ ರಕ್ಷಣೆಯಾಗಿದೆ. ಪರಿಸರವನ್ನು ನಾವೆಷ್ಟು ಅಭಿವೃದ್ಧಿಪಡಿಸಿದ್ದೇವೆಂದು ಆಲೋಚಿಸಿದರೆ ಪರಿಸರ ದಿನಾಚರಣೆಗೆ ಯೋಗ್ಯ ಅರ್ಥಬರಬಹುದು. ಪರಿಸರದ ಆರೋಗ್ಯವೇ ನಮ್ಮಆರೋಗ್ಯ. ಆದರೆ ಯಾವ ಪ್ರದೇಶಕ್ಕೆ ಹೋದರೂ ನಾವು ಹೋಗುವ ಮಾರ್ಗದ ಇಕ್ಕೆಲಗಳಲ್ಲೂ ಕಸ, ಕೊಳಕು, ಪ್ಲಾಸ್ಟಿಕ್ ನಂತಹ ಪರಿಸರ ವಿನಾಶಕಾರಿ ವಸ್ತುಗಳಿಂದ ತುಂಬಿರುವುದನ್ನು ನಾವು ಕಾಣುತ್ತೇವೆ. ಇತ್ತೀಚೆಗೆ ಹಲವಾರು ಪ್ರೇಕ್ಷಣೀಯ, ಐತಿಹಾಸಿಕ, ಧಾರ್ಮಿಕ ಸ್ಥಳದ ಸ್ಥಳೀಯರೇ ಒಟ್ಟಾಗಿ ಪರಿಸರ ಹಾನಿ ಮಾಡುವ, ಪರಿಸರದಲ್ಲಿ ಕೊಳಕು ಮಾಡುವ ವ್ಯಕ್ತಿಗಳನ್ನು ಸ್ವತ: ಹಿಡಿದು ಶಿಕ್ಷಿಸುವ, ಅಥವಾ ಅಂತಹವರನ್ನು ತಮ್ಮ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆಯುವ ಬಗ್ಗೆ ಯೋಚಿಸುತ್ತಿರುವ ಬಗೆಗೆ ಕೆಲವಾರು ಪಂಚಾಯತಗಳು ನಿರ್ಧರಿಸಿರುವುದು ನಿಜಕ್ಕೂ ಶ್ರೇಷ್ಠ ಆಲೋಚನೆಯಾಗಿದೆ. 

ಕೇಂದ್ರ, ರಾಜ್ಯ ಸರಕಾರಗಳು ಮತ್ತು ಸ್ಥಳೀಯ ಸಂಘ,  ಸಂಸ್ಥೆಗಳು ಎಷ್ಟೇ ಅತ್ಯತ್ತಮ ಕಾರ್ಯಗಳನ್ನು ಮಾಡಿ ಪರಿಸರವನ್ನು ಸ್ವಚ್ಛಇರಿಸುವ ಪ್ರಯತ್ನ ಮಾಡಿದ್ದರೂ ಕೂಡಾ ಹಾಳು, ಹಾನಿ, ಕಶ್ಮಲಗೊಳಿಸುವ ಕಶ್ಮಲ ಮನಸ್ಸಿನವರು ಬದಲಾಗದ ಹೊರತು ಇತರರು ಎಷ್ಟೇ ಪ್ರಯತ್ನಪಟ್ಟರೂ ಯಶಸ್ವಿಯಾಗಲು ಸಾಧ್ಯವಿಲ್ಲ. 1974 ರಂದ ಪ್ರಾರಂಭಗೊಂಡ ವಿಶ್ವಪರಿಸರ ದಿನಾಚರಣೆ ಜೂನ್ 5 ರಂದು ಪ್ರಪಂಚದಾದ್ಯಂತ ಗಿಡನೆಟ್ಟುಬೆಳೆಸುವಮೂಲಕ ಆಚರಿಸಲ್ಪಡುತ್ತಿದೆ. ಗಿಡಬೆಳೆಸಿ ಮರವನ್ನು ಕಾಪಾಡುವದರಿಂದ ನಮಗೆಲ್ಲ ತಿಳಿದಿರುವಂತೆ ನೆಲದ ಫಲವತ್ತತೆ, ಮಣ್ಣಿನ ಸವಕಳಿ ಎಲ್ಲವೂ ತಡೆಯಲ್ಪಟ್ಟು ಉತ್ತಮಗುಣಮಟ್ಟದ ಹಣ್ಣು-ಹಂಪಲು- ಬೆಳೆನ ಮಗೆದೊರೆತು ಆರೋಗ್ಯ ಹೆಚ್ಚಲು ಸಾಧ್ಯವಿದೆ. ಇದೆಲ್ಲದರ ಬಗೆಗೆ ಇಂದಿನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಮತ್ತೆಮತ್ತೆ ನೆನಪಿಸಿ ಸ್ವತ: ಗಿಡನೆಟ್ಟು ಪೋಷಿಸುವ ಮಹಾಕಾರ್ಯವನ್ನು ನಡೆಸಲು, ಆ ಕಾರ್ಯಮಾಡಿದವರನ್ನು ವಿಶೇಷ ಅಂಕದೊಂದಿಗೆ  ಪ್ರೋತ್ಸಾಹಿಸುವ ಪರೀಕ್ಷಾ ಕ್ರಮನೂತನ ಶಿಕ್ಷಣ ಪದ್ಧತಿಯಲ್ಲಿ ಜಾರಿಗೊಂಡರೆ ಪರಿಸರದಲ್ಲಿ ಗಿಡ-ಮರಗಳ ಸಂಖ್ಯೆ ಹೆಚ್ಚಿ ಪರಿಸರದಂತೆ ನಾವೂ ಶುದ್ಧಗಾಳಿ. ನೀರು, ಮಣ್ಣು, ವಾತಾವರಣ ಪಡೆಯಲು ಸಾಧ್ಯವಾಗಲಿದೆ.

ಗ್ರಾಮೀಣ ಪರಿಸರದ ಹೆಚ್ಚು ಕಲಿಯದ ವ್ಯಕ್ತಿಗಳೂ ಕೂಡಾ ಪ್ರಕೃತಿಯೊಂದಿಗೆ ಬದುಕಿ-ಜೀವಿಸಿ-ಸೇವಿಸಿ ಪ್ರಕೃತಿಯನ್ನು ಪೂಜಿಸಿ ಉಳಿಸಿಕೊಂಡು ಬಂದಿದ್ದಾರೆ. ಪ್ರಕೃತಿಯನ್ನು ಪೂಜಿಸಿದ ಕಾರಣದಿಂದ ಪೂಜನೀಯ ಗಿಡಗಳಾದರು ಉಳಿದು ಪರಿಸರ ಶುದ್ಧೀಕರಿಸಲ್ಪಡುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರೂ ಕೂಡಾ ನಾಗರೀಕತೆ ಬೆಳೆದಂತೆ, ಮನುಷ್ಯ ಹೆಚ್ಚು ಹೆಚ್ಚು ಕಲಿತಂತೆ ಪರಿಸರವನ್ನು ಹಾನಿಗೊಳಿಸುತ್ತುವದರೊಂದಿಗೆ ಸಿಕ್ಕ ಸಿಕ್ಕಲ್ಲಿ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯವನ್ನು ಎಸೆಯುತ್ತಿದ್ದಾನೆ. ಈ ರೀತಿ ಕಂಡ ಕಂಡಲ್ಲಿ ಎಸೆಯುವುದರಿಂದ ಅವೆಲ್ಲವೂ ಕೊಳೆತು ದುರ್ನಾತ ಬೀರುವದರೊಂದಿಗೆ ಮಣ್ಣು, ನೀರು, ಗಾಳಿ, ವಾತಾವರಣ ಎಲ್ಲವೂ ಕಲುಷಿತಗೊಳ್ಳುತ್ತಿದೆ. ಪ್ಲಾಸ್ಟಿಕ್ ನ ಒಳಗಿರುವ, ಒಟ್ಟಿಗೆ ಸೇರಿರುವ ಆಹಾರ, ಹಣ್ಣು-ಹಂಪಲುಗಳೊಂದಿಗೆ ಪ್ಲಾಸ್ಟಿಕ್ಕನ್ನು ಕೂಡಾ ತಿಂದು ಸಾವಿನ ಮನೆಯನ್ನು ಪಕ್ಷಿ-ಪ್ರಾಣಿಗಳು ಸೇರುತ್ತಿವೆ. ಈ ರೀತಿ ಪ್ರಕೃತಿಯೊಂದಿಗೆ ಪಕ್ಷಿ-ಪ್ರಾಣಿಗಳ ಸಾವಿಗೂ ಮನುಷ್ಯ ಕಾರಣನಾಗುತ್ತಿದ್ದಾನೆ. 

ಮನುಷ್ಯ ತಾನು ಬಳಕೆಮಾಡುವ ಎಲ್ಲವನ್ನೂ-ವಿದ್ಯುತ್, ಪೆಟ್ರೋಲ್, ಡೀಸೆಲ್, ವಾಹನ, ಕಟ್ಟಿಗೆ, ಉರುವಲು, ರಾಸಾಯನಿಕ, ಪ್ಲಾಸ್ಟಿಕ್, ಇತ್ಯಾದಿ ಎಲ್ಲವನ್ನೂ ಕಡಿಮೆಗೊಳಿಸಿ ಕೊಂಡಷ್ಟೂ ಆತ ಪರಿಸರಕ್ಕೆ, ದೇಶಕ್ಕೆ, ಯಥೇಚ್ಛ ಕೊಡುಗೆ ನೀಡಿದಂತೆ. ಹೀಗಾಗಿ ಈ ಎಲ್ಲಾ ಶ್ರೇಯಸ್ಕರ ಕಾರ್ಯಗಳಿಗೆ ಮೂಲ ಪ್ರೇರಕ ಶಕ್ತಿ ಪರಿಸರ ದಿನಾಚರಣೆ. ಈ ಪರಿಸರ ದಿನಾಚರಣೆಯನ್ನು ಕನಿಷ್ಠ ಪಕ್ಷ, ಮಳೆಗಾಲ ಮುಗಿಯುವ ತನಕವೂ ಸಾಧ್ಯವಾದಷ್ಟು ಬರಡು, ಬಂಜರು, ಖಾಲಿ ಪ್ರದೇಶಗಳಲ್ಲೆಲ್ಲಾ ಸಾಧ್ಯವಿದ್ದಷ್ಟು ಗಿಡಬೆಳೆಸಿ, ರಕ್ಷಿಸಿ ಆಚರಣೆಯನ್ನು ದೈನಂದಿನ ಕಾರ್ಯದಂತೆ ಸಂಘಟಿಸ ಬೇಕಾದದ್ದು ಸಾರ್ವಜನಿಕ ಅಭಿವೃದ್ಧಿ ಉದ್ದೇಶಿತ ಕ್ಲಬ್ಬು, ಸಂಘಗಳೆಲ್ಲದರ ಮೂಲ ಉದ್ದೇಶವಾಗಬೇಕಾಗಿದೆ. ಈ ಪ್ರಕಾರ ಕೈಗೊಳ್ಳುವ ಕಾರ್ಯಕ್ಕೆ ಸರಕಾರವೂ, ಸಹಕಾರ, ಪ್ರೋತ್ಸಾಹ ನೀಡಬೇಕಾಗಿದೆ. ಅದಕ್ಕಾಗಿಯೇ ಪರಿಸರದಿನವನ್ನು “ಪರಿಸರ ವ್ಯವಸ್ಥೆ ಪುನರ್ ಸ್ಥಾಪನೆ” ಎಂಬ ಧ್ಯೇಯದೊಂದಿಗೆ ಸಮೀಕರಿಸಲಾಗುತ್ತಿದೆ. 

ಲೇಖನ : ರಾಯೀ ರಾಜಕುಮಾರ್, ಮೂಡುಬಿದಿರೆ