ಮಂಗಳೂರು: ಪ್ರಸ್ತುತ ಪತ್ರಿಕೆಯ ಆದಿ ಸಂಪಾದಕರಾದ ಕೆ. ಎಂ. ಶರೀಫ್ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಚಾರ ಸಂಕಿರಣವು ಫೆಬ್ರವರಿ 22ರ ಮಂಗಳವಾರ ಬಲ್ಮಠದ ಶಾಂತಿ ನಿಲಯ ಸಭಾಂಗಣದಲ್ಲಿ ನಡೆಯಿತು.

ಮೊದಲು ನಡೆದ ಅಭಿವ್ಯಕ್ತಿ ಸ್ವಾತಂತ್ರ್ಯ: ಫ್ಯಾಸಿಸಂ ಒಡ್ಡುತ್ತಿರುವ ಸವಾಲುಗಳು ಎಂಬ ವಿಚಾರ ಸಂಕಿರಣ ನಡೆಯಿತು. ಅದರಲ್ಲಿ ಪ್ರೊ. ಎಚ್. ಪಟ್ಟಾಭಿರಾಮ ಸೋಮಯಾಜಿ, ದ್ರಾವಿಡ ಚಳವಳಿಯ ಅಭಿ ಗೌಡ, ಲೇಖಕಿ ಶಾಹಿದಾ ಅಸ್ಲಮ್ ವಿಚಾರ ಮಂಡಿಸಿದರೆ, ಪ್ರಸ್ತುತ ಬಳಗದ ಇಲ್ಯಾಸ್ ಮುಹಮ್ಮದ್ ತುಂಬೆ ಅಧ್ಯಕ್ಷತೆ ವಹಿಸಿದ್ದರು.

ಜಿ. ರಾಜಶೇಖರಿಗೆ ಇದು ಮೊದಲ ಪ್ರಶಸ್ತಿ, ಅದನ್ನು ಪ್ರಸ್ತುತ ಕೊಡುತ್ತಿರುವುದರಿಂದ ಅವರು ಸ್ವೀಕರಿಸುತ್ತಿದ್ದಾರೆ. ಸಂಘ ಪರಿವಾರದವರು ಎಸ್‌ಡಿಪಿಐಯಂಥ ಸಂಘಟನೆಗಳ ವಿರುದ್ಧ ಹುಯಿಲೆಬ್ಬಿಸಿರುವುದರ ನಡುವೆ ಈ ಪ್ರಶಸ್ತಿ ಹರಿದಿರುವುದು ಸಹ ವಿಶೇಷ. ನಮ್ಮದು ಲಿಬರಲ್ ಡೆಮಾಕ್ರಸಿ. ಇಲ್ಲಿ ಸಂಘಟನೆಗೆ ಮಹತ್ವವಿದೆ. ಕರ್ನಾಟಕದ ಎಲ್ಲ ಜಾತಿ ಉಪ ಜಾತಿಗಳ ಮಠ ಸಂಘ ಇರುವಾಗ ಮುಸ್ಲಿಮರ ಸಂಘಟನೆಗಳು ಯಾಕೆ ಇರಬಾರದು? ಬೀದಿ ಬೀದಿಗೆ ಜಗದ್ಗುರುಗಳು ಇದ್ದಾರೆ. ಅದರಂತೆ ಮುಸ್ಲಿಮರ ಸಹಿತ ಎಲ್ಲರೂ ಸಂಘಟನೆ ಆಗುವುದರಲ್ಲಿ ಯಾವ ಅಸಹಜತೆಯೂ ಈ ಮುಕ್ತ ಪ್ರಜಾಪ್ರಭುತ್ವದಲ್ಲಿ ಇಲ್ಲ ಎಂದರು ಪಟ್ಟಾಭಿರಾಮ ಸೋಮಯಾಜಿ.

ಪ್ರಜಾಪ್ರಭುತ್ವ ಸತ್ತಿದೆ. ಅದು ಚಿರಾಯುವಾಗಲಿ ಎಂದು ಘೋಷಣೆ ಮಾತ್ರ ವಿಪರೀತ ಇದೆ. ಸಂವಿಧಾನದಂತೆ ನಾವು ದೂರ ಎಂದರೆ ವಿಭಿನ್ನರು. ಆದರೆ ಸಂವಿಧಾನದಂತೆ ಒಂದು. ಇಂದು ನಾವೆಲ್ಲ ಒಂದು  ಎನ್ನುವವರಿದ್ದಾರೆ. ಅದರಲ್ಲಿ ಮೇಲ್ಜಾತಿಯವರು ಊಟದಲ್ಲಿ ಮುಂದು, ಹೊಡೆದಾಟಕ್ಕೆ ಹಿಂದುಳಿದವರನ್ನು ಮುಂದೆ ದೂಡಿ ಅವರು  ಹಿಂದು ಇರುತ್ತಾರೆ ಎಂದರು ಸೋಮಯಾಜಿ.

ರಾಜ ಪ್ರಭುತ್ವದಲ್ಲಿ ಒಳ್ಳೆಯ ರಾಜ ಕೆಟ್ಟ ರಾಜ ಇರಬಹುದು. ಆದರೆ ಫ್ಯಾಸಿಸಂ ಎನ್ನುವುದು ತನ್ನನ್ನು ತಾನು ದೇವರೆಂದು ತಾವೇ ಹೇಳಿಕೊಂಡ ವ್ಯವಸ್ಥೆ. ಅದು ಈಗ ದೇಶದಲ್ಲಿ ಸಂವಿಧಾನದ ನಡುವೆಯೇ ತೂರಿ ಬರುತ್ತಿದೆ. ನೆಹರೂ ಹೇಳಿದ್ದರು, ಬಹುಸಂಖ್ಯಾತರ ಕೋಮು ವಾದ ಅಪಾಯಕಾರಿ ಎಂದು. ಆದರೆ ಈಗಿನ ಫ್ಯಾಸಿಸ್ಟರು ತಮ್ಮನ್ನು ತಾವೇ ದೇಶಪ್ರೇಮಿಗಳು ಎಂದು ಕರೆದುಕೊಳ್ಳುತ್ತಾರೆ. ಅವರ ಕೂಗು ಇಂದು ಮುಗಿಲು ಮುಟ್ಟಿರುವುದರಿಂದ ಇತರರ ನೋವು ಕೇಳಿದಾಗಿದೆ ಎಂದು ಸೋಮಯಾಜಿ ತಿಳಿಸಿದರು.

ವಿಚಾರ ಸಂಕಿರಣದ ಬಳಿಕ ಜಿ. ರಾಜಶೇಖರರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಪ್ರಸ್ತುತ ಪ್ರಧಾನ ಸಂಪಾದಕರಾದ ಅಬ್ದುಲ್ ರಜಾಕ್ ಕೆಮ್ಮಾರ, ಸಾಮಾಜಿಕ ಹೋರಾಟಗಾತಿ ಬಿ. ಟಿ. ಲಲಿತಾ ನಾಯಕ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷರಾದ ಯಾಸಿರ್ ಹಸನ್ ಉಪಸ್ಥಿತರಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಮುಕುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಪ್ರಧಾನಿಯವರ ಭೇಟಿ ಬಚಾವೋ ಭೇಟಿ ಪಡಾವೊ ಯಾರಿಗೂ ಒದಗದ ಒಣ ಮಾತಾಗಿದೆ. ಫ್ಯಾಸಿಸ್ಟ್ ಮುಸುಕು ಅಂತರಜಾಲ ತಡೆಯುವವರೆಗೆ ದಮನ ನೀತಿ ಅನುಸರಿಸುತ್ತದೆ ಎಂದರೆ ಉಸಿರು ಕಟ್ಟುವಿಕೆ ಸಾರ್ವತ್ರಿಕ ಆಗಿದೆ ಎಂದು ಶಾಹಿದಾ ತಿಳಿಸಿದರು.