ಮಂಗಳೂರು: ನಮ್ಮ ಕುಡ್ಲ 24x7 ವಾಹಿನಿ ಪ್ರಸ್ತುತಿಯಲ್ಲಿ ಇದೇ ಮೊದಲ ಬಾರಿಗೆ ಆರಂಭಗೊಂಡಿರುವ 'ನೃತ್ಯ ಭಜನಾ ಸ್ಪರ್ಧೆ'ಯ ಉದ್ಘಾಟನಾ ಕಾರ್ಯಕ್ರಮ ನಗರದ ಡೊಂಗರಕೇರಿಯ ಕೆನರಾ ಪ್ರೌಢ ಶಾಲೆಯ ಶ್ರೀ ಸುಧೀಂದ್ರ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಜನೆ ಎಂದರೆ ಭಜಿಸಬೇಕು, ಜಪಿಸಬೇಕು, ನೆನೆಯಬೇಕು. ಭಜಿಸುವುದರಿಂದ, ನೆನೆಯುವುದರಿಂದ ಭಾವನಾತ್ಮಕ ಸಂಬಂಧ ಗಟ್ಟಿಗೊಳ್ಳುತ್ತದೆ. ಭಜನೆ ಅನ್ನುವುದು ನಮ್ಮ ಸಂಸ್ಕೃತಿ. ಭಜನೆ ಮಾಡುವ ಮನೆಯಲ್ಲಿ ಶಾಂತಿ, ನೆಮ್ಮದಿ ಇರುತ್ತದೆ. ಅಲ್ಲಿ ರಾಗ, ದ್ವೇಷಗಳಿಲ್ಲ. ಆ ಮನೆ ದೇವಾಲಯವಾಗಿ ಉಳಿದುಕೊಳ್ಳುತ್ತದೆ. ಆದ್ದರಿಂದ ಭಜನೆ ಮನೆ ಮನದಲ್ಲಿ ಆಗಬೇಕು. ಇದು ವಿಶಿಷ್ಟ ಹಾಗೂ ವಿಶೇಷ ಕಾರ್ಯಕ್ರಮ ಎಂದು ಆರ್ಶಿವಚನ ನೀಡಿದರು
ಮುಖ್ಯ ಅತಿಥಿಗಳಾಗಿ ಸಾಧ್ವಿ ಶ್ರೀ ಮಾತಾನಂದಮಯಿ, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಸ್ಪರ್ಧಿಗಳಿಗೆ ಶುಭಕೋರಿದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಜಿತೇಶ್ ಉಚ್ಚಿಲ, ಲೋಕನಾಥ ಬಿ. ಶೆಟ್ಟಿ, ಪ್ರಶಾಂತ್ ಶೇಟ್, ದೇವದಾಸ್ ಗಣಪತಿ ಪೈ ಬಿ. ಮಹೇಶ್ ಪೈ, ರಾಧಾಕೃಷ್ಣ, ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಜಗನ್ನಾಥ್ ಕಾಮತ್, ಅರೆಕೆರೆಬೈಲ್ ಅಂಬಾಮಹೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಎ. ಸೀತಾರಾಮ, ಜಯಲಕ್ಷ್ಮಿ ಸಿಲ್ಕ್ಸ್ ಉದ್ಯಾವರದ ರವೀಂದ್ರ ಹೆಗ್ಡೆ ಮತ್ತು ಅಪರ್ಣ ಹೆಗ್ಡೆ, ಸಿಎ ಎಸ್. ಎಸ್. ನಾಯಕ್, ಚಾನೆಲ್ ನಿರ್ದೇಶಕರಾದ ಹರೀಶ್ ಬಿ. ಕರ್ಕೇರ, ಮೋಹನ ಬಿ. ಕರ್ಕೇರ, ಲೀಲಾಕ್ಷ ಬಿ. ಕರ್ಕೇರ, ಸೌಮ್ಯ ಎಲ್. ಬಿ. ಕರ್ಕೇರ, ಸಿಒಒ ಕದ್ರಿ ನವನೀತ ಶೆಟ್ಟಿ ಉಪಸ್ಥಿತರಿದ್ದರು. ಈ ಸರಣಿ ಕಾರ್ಯಕ್ರಮವು ಜುಲೈ 03 ರಿಂದ ಪ್ರತೀ ಭಾನುವಾರ ಸಂಜೆ 7 ರಿಂದ ನಮ್ಮಕುಡ್ಲ 24X7 ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸ್ಪರ್ಧೆಯು 'ಗೀತ ಸಾಹಿತ್ಯ ಸಂಭ್ರಮ' ಖ್ಯಾತಿಯ ಖ್ಯಾತ ನಿರೂಪಕ ವಿಠಲ ನಾಯಕ್ ಕಲ್ಲಡ್ಕ ನಿರೂಪಣೆಯಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಒಟ್ಟು 49 ತಂಡಗಳು ಭಾಗವಹಿಸಿದ್ದವು. ರಮೇಶ್ ಕಲ್ಮಾಡಿ, ಚಂದ್ರಹಾಸ್ ಶೆಟ್ಟಿ ಹಾಗೂ ದಿಶಾ ಸಿ ಕಟ್ಲ ತೀರ್ಪುಗಾರರಾಗಿದ್ದಾರೆ.