ಮಂಗಳೂರು: ಸಂಶೋಧಕಿ ವೈಷ್ಣವಿ ಮೂರ್ತಿ ಹಾಗೂ ವಿನೋದ್ ರಾಜನ್ ಅವರು ಸಲ್ಲಿಸಿದ ಪ್ರಸ್ತಾವನೆ ಮೇರೆಗೆ ತುಳು-ತಿಗಳಾರಿ ಲಿಪಿಗೆ ಯುನಿಕೋಡ್ ಅನುಮೋದನೆ ನೀಡಿದೆ ಎಂಬುದನ್ನು ಯುನಿಕೋಡ್ ತನ್ನ ಅಂತರ್ಜಾಲ ಮಾಹಿತಿಯಲ್ಲಿ ಉಲ್ಲೇಖಿಸಿದೆ.
ಸಂಶೋಧಕಿ ವೈಷ್ಣವಿ ಮೂರ್ತಿ ಹಾಗೂ ವಿನೋದ್ ರಾಜನ್ ಅವರ ಪ್ರಯತ್ನವನ್ನು ಮನಪೂರ್ವಕವಾಗಿ ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.
ನಿರಂತರ ಪ್ರಯತ್ನದಲ್ಲಿ ಸಾಕಷ್ಟು ದಾಖಲೆಗಳನ್ನು ಲಗತ್ತಿಸಿ ವೈಷ್ಣವಿ ಮೂರ್ತಿ ಹಾಗೂ ವಿನೋದ್ ರಾಜನ್ ಅವರು ಸಲ್ಲಿಸಿದ ಪ್ರಸ್ತಾವನೆಯ ಹಿಂದೆ ದೊಡ್ಡ ಪರಿಶ್ರಮ ಇದೆ ಎಂದು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಅವರು ಶ್ಲಾಘಿಸಿದ್ದಾರೆ.
ಇದೇ ಸಂದರ್ಭದಲ್ಲಿ ಇನ್ನೊಂದು ಬೇಡಿಕೆಯಂತೆ ಯುನಿಕೋಡ್ ನಲ್ಲಿ ತುಳುವನ್ನು ಮಾತ್ರ ಒಂದೇ ಶಬ್ದವಾಗಿ ಉಲ್ಲೇಖಿಸಿ ಯುನಿಕೋಡ್ ಅನುಮೋದನೆ ನೀಡಬೇಕೆಂಬ ಪ್ರಸ್ತಾವನೆಗೆ ಕೂಡ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರ ಇರುವುದಾಗಿ ಅವರು ತಿಳಿಸಿದ್ದಾರೆ.
ತುಳು-ತಿಗಾಳಾರಿ ನಡುವಿನ ಸಾಮ್ಯತೆ, ವ್ಯತ್ಯಾಸದ ಬಗ್ಗೆ ಭಾಷಾ ಪಂಡಿತರು, ಲಿಪಿ ತಜ್ಞರು ಈಗಾಗಲೇ ಸಾಕಷ್ಟು ಅಧ್ಯಯನ ನಡೆಸಿ ಬರೆದಿದ್ದಾರೆ, ಅಭಿಪ್ರಾಯಮಂಡಿಸಿದ್ದಾರೆ, ಈ ವಿಚಾರಗಳನ್ನು ಗಮನದಲ್ಲಿರಿಸಿಕೊಳ್ಳುವುದು ಸೂಕ್ತವಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.