ಉಡುಪಿ: ಜನಪರ ಕೇಂದ್ರ ಪ್ರಾಯೋಜಿತ ಯೋಜನೆಗಳು ಹಾಗೂ ಕಾರ್ಯಕರಮಗಳನ್ನು ಸಮರ್ಪಕ ಅನುಷ್ಠಾನಗೊಳಿಸುವರೊಂದಿಗೆ ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದರು.
ಅವರು ನಗರದ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ 7 ಲಕ್ಷ ಮಾನವ ದಿನಗಳ ಗುರಿಯನ್ನು ನೀಡಲಾಗಿದ್ದು, ಪ್ರಸ್ತುತ 9.25 ಲಕ್ಷ ಮಾನವ ದಿನಗಳ ಕೂಲಿ ಕಾರ್ಯಗಳನ್ನು ಮಾಡುವುದರೊಂದಿಗೆ ಶೇ. 132.14 ರಷ್ಟು ಗುರಿ ಸಾಧಿಸಲಾಗಿದೆ. ಈ ಅನುದಾನದಿಂದ ಕೆರೆ ಹೂಳೆತ್ತುವುದು, ಬಾವಿ ತೋಡುವುದು ಸೇರಿದಂತೆ ಮತ್ತಿತರ ಶಾಶ್ವತ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಪ್ರಧಾನ ಮಂತ್ರಿಗಳ ಮಹಾತ್ವಾಕಾಂಕ್ಷೆಯ ಯೋಜನೆಯಾದ ಅಮೃತ್ ಸರೋವರ್ ಅಡಿಯಲ್ಲಿ 1 ಎಕರೆಗಿಂತ ಹೆಚ್ಚು ವಿಸ್ತೀರ್ಣವಿರುವ ಜಿಲ್ಲೆಯ 75 ಕೆರೆಗಳ ಅಭಿವೃದ್ಧಿ ಕಾರ್ಯಗಳನ್ನು ನರೇಗಾ, ಸಿ.ಎಸ್.ಆರ್ ನಿಧಿ ಸೇರಿದಂತೆ ಇತರೆ ಇಲಾಖೆಗಳ ಅನುದಾನವನ್ನು ಬಳಕೆ ಮಾಡಿಕೊಂಡು ಸಾರ್ವಜನಿಕರ ಉಪಯೋಗವಾಗುವ ರೀತಿಯಲ್ಲಿ ಹೊಸ ಅಥವಾ ಹಾಲಿ ಇರುವ ಕೆರೆಗಳ ಅಭಿವೃದ್ಧಿ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸುವ ಸ್ವ-ನಿಧಿಯ ಸಾಲವನ್ನು 50,000 ರೂ. ಗಳ ವರೆಗೆ ಹೆಚ್ಚಿಸಲಾಗಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಾಗಿರುವ ಬೀದಿ ಬದಿ ವ್ಯಾಪಾರಿಗಳನ್ನು ಇದರ ಪ್ರಯೋಜನವನ್ನು ಪಡೆದುಕೊಂಡು ಆರ್ಥಿಕ ಅಭಿವೃದ್ಧಿ ಹೊಂದುವAತಾಗಬೇಕು ಎಂದರು.
ಕಳೆದ ಸಾಲಿನಲ್ಲಿ ಸ್ವ-ನಿಧಿ ಯೋಜನೆಯಡಿ 3500 ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದು ಶೇ. 82 ರಷ್ಟು ಸಾಧನೆ ಮಾಡಲಾಗಿದೆ ಎಂದ ಅವರು, ಈ ಯೋಜನೆಯ ಅನುಷ್ಠಾನಕ್ಕೆ ಕೆಲವು ಖಾಸಗಿ ಬ್ಯಾಂಕುಗಳು ಸಹಕಾರ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ, ಅಂತಹ ಬ್ಯಾಂಕುಗಳಲ್ಲಿ ಸರಕಾರದ ಹಣವನ್ನು ಠೇವಣಿ ಮಾಡಿದಲ್ಲಿ ಅವುಗಳನ್ನು ವಾಪಾಸು ಪಡೆಯುವುದರ ಜೊತೆಗೆ ಕೇಂದ್ರ ಸರಕಾರದ ಹಣಕಾಸು ಸಚಿವರಿಗೆ ಪತ್ರ ಬರೆಯಲಾಗುವುದು ಎಂದರು.
ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಹಾಗೂ ಕೃಷಿ ಮೂಲ ಸೌಕರ್ಯ ನಿಧಿ ಅಡಿಯಲ್ಲಿ ದೇಶದಾದ್ಯಂತ 1 ಲಕ್ಷ ಕೋಟಿ ಅನುದಾನವು ಮೀಸಲಿಡಲಾಗಿದೆ. ರಾಜ್ಯಕ್ಕೆ 14,000 ಕೋಟಿ ರೂ. ಬಿಡುಗಡೆಯಾಗಿದೆ. ಸ್ವ-ಸಹಾಯ ಗುಂಪುಗಳು, ಖಾಸಗಿ ವ್ಯಕ್ತಿಗಳು ಅಥವಾ ಸಹಕಾರಿ ಸಂಘದವರಿಗೆ 2 ಕೋಟಿ ರೂ. ವರೆಗೆ ಶೇ. 3 ರಷ್ಟು ಬಡ್ಡಿಯ ಆರ್ಥಿಕ ನೆರವನ್ನು ನೀಡಿ, ಪ್ರಯೋಗಾಲಯ, ಆಹಾರ ಸಂಸ್ಕರಣಾ ಘಟಕಗಳು, ಕೋಲ್ಡ್ ಸ್ಟೋರೆಜ್ಗಳು, ಮಣ್ಣು ಪರೀಕ್ಷಾ ಕೇಂದ್ರಗಳು, ಗೋದಾಮು ಸೇರಿದಂತೆ ಮತ್ತಿತರ ಕೃಷಿ ಆಧಾರಿತ ಸೌಕರ್ಯಗಳನ್ನು ನಿರ್ಮಾಣ ಮಾಡಬಹುದಾಗಿದೆ. ಕೃಷಿಗೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳನ್ನು ಈ ಯೋಜನೆಯಡಿ ಕೈಗೊಳ್ಳಲು ಜಿಲ್ಲಾ ಕೃಷಿ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ಸೂಚನೆ ನೀಡಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮೊದಲನೇ, ಎರಡನೇ ಹಾಗೂ ಮೂರನೇ ಹಂತದ 31 ರಸ್ತೆ ಕಾಮಗಾರಿಗಳನ್ನು 90.28 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ ಕೆಲವು ಕಾಮಗಾರಿಗಳು ಮುಗಿದಿವೆ. ಬಾಕಿ ಉಳಿದ ಕಾಮಗಾರಿಗಳನ್ನು ಮಳೆಗಾಲ ಪ್ರಾರಂಭಕ್ಕಿAತ ಮುಂಚಿತವಾಗಿ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಜಲಜೀವನ್ ಮಿಷನ್ ಯೋಜನೆಯಡಿ 1,09,765 ಹೊಸದಾಗಿ ನಳ ಸಂಪರ್ಕ ಒದಗಿಸುವ ಕಾಮಗಾರಿಗಳನ್ನು ಕೈಗೊಂಡು 41,711 ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕ ಒದಗಿಸಲಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಪ್ರತೀ ಮನೆಗೂ ನಳ ಸಂಪರ್ಕವನ್ನು ಶೀಘ್ರವಾಗಿ ಕಲ್ಪಿಸಬೇಕು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕಾರ್ಯಕ್ಕನುಗುಣವಾಗಿ ಕೃಷಿ, ತೋಟಗಾರಿಕೆ ಸೇರಿದಂತೆ ಮತ್ತಿತರ ಇಲಾಖೆಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ಹೆಚ್ಚಿಸಬೇಕು ಎಂದ ಅವರು, ಇಲಾಖೆಗಳು ರೈತರಿಗೆ ಬೀಜ, ರಸಗೊಬ್ಬರ ಹಾಗೂ ಪರಿಕರಗಳನ್ನು ಕೊಡುವ ಕೆಲಸಕ್ಕೆ ಸೀಮಿವಾಗಬಾರದು ಎಂದರು.
ಜಿಲ್ಲೆಯಲ್ಲಿ ಮೀನುಗಾರರು ಕಷ್ಟಪಟ್ಟು ಮೀನುಗಳನ್ನು ಹಿಡಿಯುತ್ತಾರೆ. ಆದರೆ ಅವರಿಗೆ ಉತ್ತಮ ಧಾರಣೆ ಸಿಗುವುದಿಲ್ಲ. ಪಕ್ಕದ ರಾಜ್ಯ ಕೇರಳದ ಕೊಚ್ಚಿನ್ಗೆ ಮೀನುಗಳು ಹೋಗಿ, ಅವು ವಿದೇಶಕ್ಕೆ ರಫ್ತಾಗುತ್ತಿವೆ. ಜಿಲ್ಲೆಯಿಂದಲೇ ಹೊರ ದೇಶಕ್ಕೆ ಮೀನು ರಫ್ತಾಗುವ ವ್ಯವಸ್ಥೆಯನ್ನು ಕೈಗೊಳ್ಳಬೇಕೆಂದು ಮೀನುಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ದೂರವಾಣಿ ಸೇರಿದಂತೆ ಮೊಬೈಲ್ ಸಂಪರ್ಕಗಳು ಸರಿಯಾಗಿ ಸಿಗುತ್ತಿಲ್ಲ ಎಂಬ ದೂರುಗಳು ಪದೇ ಪದೇ ಕೇಳಿ ಬರುತ್ತಿವೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜಿನ ವ್ಯತ್ಯಯದಿಂದ ಈ ಸಮಸ್ಯೆ ಕಂಡು ಬರುತ್ತಿದ್ದು, ಇದಕ್ಕೆ ಅಗತ್ಯವಿರುವ ಬ್ಯಾಟರಿ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ, ಮೆಸ್ಕಾಂ ಇಲಾಖೆಯವರು ವಿದ್ಯುತ್ ಸರಬರಾಜಿನ ವ್ಯತ್ಯಯವಾಗದಂತೆ ಎಚ್ಚರವಹಿಸಬೇಕು ಎಂದ ಅವರು, ರಸ್ತೆ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಮೊಬೈಲ್ ನೆಟ್ವರ್ಕ್ನ ಕೇಬಲ್ಗಳು ಹಾಳಾಗುತ್ತಿವೆ. ಇದಾಗದಂತೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಉಡುಪಿ ಹಾಗೂ ಕುಂದಾಪುರದ ರೈಲ್ವೆ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆ, ಬೀದಿ ದೀಪ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟಿçÃಯ ಹೆದ್ದಾರಿಯ ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರದಲ್ಲಿ ಕೈಗೊಳ್ಳುವುದರೊಂದಿಗೆ ಹೆದ್ದಾರಿಗಳಲ್ಲಾಗುವ ಅಪಘಾತಗಳನ್ನು ತಪ್ಪಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ 30 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಅಗತ್ಯವಿರುವ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಂಡು ಅಪಘಾತವನ್ನು ತಪ್ಪಿಸಬೇಕು ಎಂದ ಅವರು, ಕಟಪಾಡಿ , ಅಂಬಲಪಾಡಿ ಯಲ್ಲಿ ಮೇಲು ಸೇತುವೆ ನಿರ್ಮಾಣ, ಸಂತೆಕಟ್ಟೆಯಲ್ಲಿ ಸರ್ಕಲ್ ನಿರ್ಮಿಸುವ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದರು.
ಅರೋಗ್ಯ ಇಲಾಖೆಯ ಅಧಿಕಾರಿಗಳು ಸಂಭವನೀಯ ಕೋವಿಡ್ 4 ನೇ ಅಲೆ ಎದುರಿಸಲು ಅಗತ್ಯವಿರುವ ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಳ್ಳಬೇಕು , ಜಿಲ್ಲೆಯಲ್ಲಿ 80 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆದು ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ನೀಡಲಾಗುತ್ತಿದೆ ಈ ಕೇಂದ್ರಗಳಲ್ಲಿ ಕ್ಯಾನ್ಸರ್ ಖಾಯಿಲೆಗೆ ಔಷಧಿಗಳು ಲಭ್ಯವಾಗಬೇಕೆಂಬ ಜನರ ಬೇಡಿಕೆ ಇದ್ದು, ಇದಕ್ಕೆ ಸ್ಪಂದಿಸುವುದಾಗಿ ತಿಳಿಸಿದರು.
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮಾತನಾಡಿ, ಬಡಜನರಿಗೆ ಸ್ವಂತ ಸೂರನ್ನು ಕಲ್ಪಿಸಬೇಕೆಂದು ಪ್ರಧಾನಮಂತ್ರಿ ರಾಷ್ಟಿçÃಯ ಆಶ್ರಯ ಯೋಜನೆಯಡಿ ಅನುದಾನವನ್ನು ನೀಡಲಾಗುತ್ತಿದೆ. ಆದರೆ, ಪ್ರಗತಿಯು ಶೇ. 45.99 ರಷ್ಟು ಇದೆ. ಕೆಲವರು ಸರಕಾರದ ಅನುದಾನವನ್ನು ವೈಯಕ್ತಿಕವಾಗಿ ಬಳಸಿಕೊಂಡು ಮನೆ ನಿರ್ಮಾಣ ಮಾಡದೇ ಇರುವುದು ಕಂಡುಬರುತ್ತಿದೆ. ಇವುಗಳ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಿ, ಗೃಹ ನಿರ್ಮಾಣ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಶಾಸಕರುಗಳಾದ ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಹಾಹೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.