ಮಂಗಳೂರು, ಮೇ 07:  ಬಿ. ಎಂ. ರೋಹಿಣಿಯವರು ಅಧ್ಯಯನ ಮಾಡಿ ಬರೆದ ವೇಶ್ಯಾವಾಟಿಕೆಯ ಕತೆ ವ್ಯಥೆ ಎಂಬ ಸಂಶೋಧನಾ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವು ಏಪ್ರಿಲ್ 7ರ ಶನಿವಾರ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಹಾಲ್‌ನಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕಿ ರೋಹಿಣಿಯವರು ಇದು ನನ್ನ 45 ವರುಷಗಳ ಚಿಂತನೆ. ಆದರೆ ವೇಶ್ಯೆಯರ ಸಂಘಟನೆಯಲ್ಲಿ ತೊಡಗಿದ್ದ ಹರಿಣಿ ಅವರ ಸಹಾಯ ಇಲ್ಲದಿದ್ದರೆ ಈ ಪುಸ್ತಕ ಈಗಲೂ ಬರುತ್ತಿರಲಿಲ್ಲ. ಅವರೊಡನೆ ಇಣುಕಿ ನೋಡಿದಾಗ ಈ ವೇಶ್ಯಾವಾಟಿಕೆ ಲೋಕ ಬಲು ಕಷ್ಟದ ಅಂಡರ್ ವರ್ಲ್ಡ್ ಎಂಬುದು ತಿಳಿದು ಬಂತು. ನನ್ನ ಸಂಶೋಧನೆಗಳಲ್ಲಿ ಇದು ಅತ್ಯಂತ ಕ್ಲಿಷ್ಟ ಸಂಗತಿ ಆಗಿದೆ. ಅದನ್ನು ಹಲವರ ಸಹಕಾರದಿಂದ ನಾನು ಮಾಡಿ ಮುಗಿಸಿದ್ದೇನೆ. ಇದು ಮುಜುಗರದ ಸಂಗತಿಯೂ ಆಗಿರುವುದರಿಂದ ಇದು ಸಾಹಸವೇ ಸರಿ ಎಂದು ಹೇಳಿದರು.

1997ರಿಂದ 2005ರವರೆಗೆ ಈ ವಿಷಯದಲ್ಲಿ ಕೆಲಸ ಮಾಡಿದ್ದೇನೆ. ತುಂಬ ಕಷ್ಟದ ಕಾಲದಲ್ಲಿ ದೊರೆತ ಸಮಾಜ ಸೇವೆ ಕೆಲಸ ಹಿಡಿದುಕೊಂಡೆ. ಬರ್ಡ್ಸ್ ಸಂಸ್ಥೆ ಮೂಲಕ ಏಡ್ಸ್ ಮತ್ತು ಸೆಕ್ಸ್ ವರ್ಕರ್ಸ್ ಬಗೆಗೆ ಕೆಲಸ ಮಾಡುವಾಗ ಅದರ ಆಳ ಅಗಲ, ಕತ್ತಲೆಯ ಕರಾಳ ಲೋಕ ಪರಿಚಯವಾಯಿತು ಎಂದು ಪುಸ್ತಕ ಬಿಡುಗಡೆ ಮಾಡಿದ ಹರಿಣಿ ಹೇಳಿದರು.

ಧರ್ಮ ತಾಕಲಾಟ ಇಲ್ಲದ ವೃತ್ತಿ ಇದು. ಇವರಲ್ಲಿ ಗ್ರಾಹಕರ ಬಗೆಗೆ ಕೆಲವೊಮ್ಮೆ ತಕರಾರು ಆಗುತ್ತಿತ್ತೇ ಹೊರತು ಇತರ ತಾರತಮ್ಯ ಇರಲಿಲ್ಲ. ವೇಶ್ಯೆಯರ ಅತಿ ಮುಖ್ಯ ಶೋಷಕರು ಪೋಲೀಸರು ಎಂದೂ ಹರಿಣಿ ತಿಳಿಸಿದರು.

ವೇದಿಕೆಯಲ್ಲಿ ಲೇಖಕಿ ರೋಹಿಣಿ, ಮೋಹನಚಂದ್ರ, ಕಲೇವಾಸಂ ಅಧ್ಯಕ್ಷೆ ಜ್ಯೋತಿ ಚೇಳ್ಯಾರ್, ರೇಶ್ಮಾ ಉಳ್ಳಾಲ, ಸಮಾಜ ಸೇವಕಿ ಹರಿಣಿ, ನಾಗೇಶ್  ಉಪಸ್ಥಿತರಿದ್ದರು .