ಮಂಗಳೂರು, ಮೇ: ಸಾಮಾಜಿಕ ಜಾಲ ತಾಣಗಳನ್ನು ದುರುಪಯೋಗ ಮಾಡಿ ಸಮಾಜವನ್ನು ತಪ್ಪು ದಾರಿಗೆಳೆಯುವ, ಸಮುದಾಯದಲ್ಲಿ ಗೊಂದಲ ಎಬ್ಬಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಕಾನೂನು ಪಾಲಕರು ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದಿರಲು ಕಾರಣವೇನು ಎಂದು ಮಾಜೀ ಸಚಿವ ಯು. ಟಿ. ಖಾದರ್ ಹೇಳಿದರು.

ವಿಳಾಸ ನೀಡದೆ ಮುಸ್ಲಿಮರ ವಕಾಲತ್ತು ವಹಿಸುವ, ಯಾರದ್ದಾದರೂ ವರ್ಚಸ್ಸಿಗೆ ನಿರಂತರ ಮಸಿ ಬಳಿಯುವ ಕೆಲಸ ಆಗುತ್ತಿದೆ. ಪೋಲೀಸರು ಕಠಿಣ ಕ್ರಮ ತೆಗೆದುಕೊಂಡಿದ್ದರೆ ಇದೆಲ್ಲ ಮತ್ತೆ ಮತ್ತೆ ನಡೆಯುತ್ತಿತ್ತೆ ಎಂದು ಯುಟಿಕೆ ಪ್ರಶ್ನಿಸಿದರು.

ಇಂದು ಬಿಜೆಪಿಯ ಶಾಸಕರೊಬ್ಬರು ಮುಖ್ಯಮಂತ್ರಿ ಸ್ಥಾನವು ಕೋಟಿ ಕೋಟಿ ರೂಪಾಯಿಗೆ ಹರಾಜಾಗುವುದಾಗಿ ಹೇಳಿದ್ದಾರೆ. ಅದೇ ಪಕ್ಷದ ಒಬ್ಬರ ಹೇಳಿಕೆ ನಮ್ಮ ರಾಜ್ಯಕ್ಕೆ ಅವಮಾನಕರ. ಅತ್ತ ಪಿಎಸ್‌ಐ ನೇಮಕಾತಿಯಲ್ಲಿ ಬಿಜೆಪಿಯ ಭ್ರಷ್ಟಾಚಾರ ಮೇರೆ ಮೀರಿದೆ. ಬಿಜೆಪಿ ಎಲ್ಲ ಕಡೆ ಸಂಪೂರ್ಣ ‌ವಿಫಲವಾಗಿದ್ದು ಜನರನ್ನು ಭಾವನಾತ್ಮಕವಾಗಿ ಕೆರಳಿಸುತ್ತಿದ್ದಾರೆ. ಅವರ ಹೇಳಿಕೆಗಳನ್ನು ನಂಬಬಾರದು ಎಂದು ಖಾದರ್ ಹೇಳಿದರು.

ಮುಸ್ಲಿಂ ಹಿತರಕ್ಷಣೆಯ ಸುಳ್ಳು ಜಾಲ ತಾಣಗಳನ್ನು ಸೃಷ್ಟಿಸಿದವರು ಯಾರು? ಯಾರದೋ ಹೆಸರಿನಲ್ಲಿ ಜಾಲ ತಾಣ ತೆಗೆಯಲು ಸಾಧ್ಯವಾಗುವುದಾದರೆ ಅದರ ವಿರುದ್ಧ ಜಿಲ್ಲಾಡಳಿತ, ಪೋಲೀಸರು ಯಾಕೆ ಕಡಿವಾಣ ಹಾಕುತ್ತಿಲ್ಲ ಎಂದು ಖಾದರ್ ಪ್ರಶ್ನಿಸಿದರು.

ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಹೋಗುವ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿಗೆ ಸೋಲುವ ಭಯ ಇರುವುದರಿಂದ ಅವರು ಬರುತ್ತಾರೆ ಇವರು ಬರುತ್ತಾರೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯರನ್ನು ಪಕ್ಷ ಬಿಡುತ್ತದೆ ಎಂಬ ಬಿಜೆಪಿಯ ಹೇಳಿಕೆ ಅದರ ಸೋಲುವ ಭಯದ ಪ್ರತೀಕ ಎಂದು ಪ್ರಶ್ನೆಗೆ ಖಾದರ್ ಹೇಳಿದರು.

ನಮಗೆ ಸಾಮಾಜಿಕ ಶಾಂತಿ ಸೌಹಾರ್ದ, ಸಾಮರಸ್ಯ ಬೇಕು. ಅದನ್ನು ಕಾಯುವ ಕೆಲಸವನ್ನು ಮೊದಲು ಪೋಲೀಸರು ಮಾಡಲಿ ಎಂದೂ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದ. ಕ. ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಮಾಜೀ ಮಂತ್ರಿ ಅಭಯಚಂದ್ರ ಜೈನ್, ಸದಾಶಿವ ಉಳ್ಳಾಲ್, ನೀರಜ್ ಪಾಲ್, ನಜೀರ್, ಸಂತೋಷ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.