ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಬಹಳ ನಿರೀಕ್ಷೆಗಳನ್ನು ಮನದಲ್ಲಿ ಇಟ್ಟುಕೊಂಡು ಮೂಡುಬಿದಿರೆಗೆ ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನ ವಿಭಾಗ ತರಿಸಲಾಯಿತು. ಶಾಸಕರ ಮುತುವರ್ಜಿಯಿಂದ ಬನ್ನಡ್ಕದಲ್ಲಿ ಪಾಡ್ಯಾರು ಶಾಲಾ ವಠಾರದಲ್ಲಿ ಕಾಲೇಜು ಬಹಳ ನಿರೀಕ್ಷೆಗಳೊಂದಿಗೆ ಪ್ರಾರಂಭವಾಯಿತು. ಶಾಸಕರ ಎಣಿಕೆಯಂತೆ ಬಡವರ್ಗದ ಜನರ ಒಳಿತಿಗಾಗಿ ಬಹಳ ಕಡಿಮೆ ಅಥವಾ ಶುಲ್ಕ ರಹಿತವಾಗಿ ವಿದ್ಯಾರ್ಥಿಗಳಿಗೆ ಕೋರ್ಸುಗಳು ಲಭ್ಯವಾಗಬೇಕಾಗಿತ್ತು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿ ಗೊಳಿಸುವಂತೆ ವಿಶ್ವ ವಿದ್ಯಾಲಯ ಪ್ರತೀ ವರ್ಷ ಶುಲ್ಕ ಏರಿಸುತ್ತಲೇ ಹೋಗುತ್ತಿದ್ದರು.

ಈ ಕಾಲೇಜು ಹೊರತು ಇತರ ಖಾಸಗಿ ಕಾಲೇಜುಗಳಲ್ಲಿ ನಿಶ್ಶುಲ್ಕ ಅಥವಾ ಅತೀ ಕಡಿಮೆ ಶುಲ್ಕದಲ್ಲಿ ಪದವಿ ಕೋರ್ಸ್ ಒದಗಿಸುತ್ತಿರುವಾಗ ಇಲ್ಲಿ ಶುಲ್ಕ ಏರಿಸುತ್ತಲೇ ಹೋದರೆ ಯಾರು ತಾನೇ ಸೇರಿಕೊಳ್ಳಲು ಆಸಕ್ತಿ ವಹಿಸುತ್ತಾರೆ? ಅದೂ ಮೂಡುಬಿದಿರೆಯಿಂದ ಬಹಳ ದೂರದಲ್ಲಿರುವುದೂ ವಿದ್ಯಾರ್ಥಿಗಳಿಗೆ ತೊಂದರೆದಾಯಕ ವಾಗಿದೆ. ಎರಡನೇ ಬ್ಯಾಚ್ ಈಗಷ್ಟೇ ಹೊರಬಂದಿದೆ. ಆದರೆ ಈ ವರ್ಷವೇ ಪ್ರಥಮ ಪದವಿಗೆ ಅರ್ಜಿ ನೀಡಲಾಗುತ್ತಿಲ್ಲ ಎಂದು ತಿಳಿದುಬಂದಿದೆ. ಬೇಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿಲ್ಲ ಎಂದು ಪಡೆದ ಅರ್ಜಿಗಳನ್ನು ಹಿಂತಿರುಗಿಸಲಾಗಿದೆ ಎಂದೂ ವಿದ್ಯಾರ್ಥಿಗಳು, ಹೆತ್ತವರು ತಿಳಿಸಿರುತ್ತಾರೆ.

ಈ ಬಗ್ಗೆ ವಿಶ್ವ ವಿದ್ಯಾಲಯದ ಮಂದಿಯನ್ನು ವಿಚಾರಿಸಿದಾಗ, ಸಿಂಡಿಕೇಟ್ ನಿರ್ಣಯದಂತೆ ಕನಿಷ್ಠ 30 ಮಂದಿ ವಿದ್ಯಾರ್ಥಿಗಳು ಬರದ ಕಾರಣ ಅರ್ಜಿಗಳನ್ನು ಹಿಂತಿರುಗಿಸಲಾಗಿದೆ. ನೇಮಕಗೊಂಡ ಉಪನ್ಯಾಸಕರು, ಇತ್ಯಾದಿಯರಿಗೆ ಪ್ರತೀ ವರ್ಷ 65-80 ಲಕ್ಷ ವೆಚ್ಚವಾಗುತ್ತದೆ. ಸರಕಾರ ಈತನಕ ಯಾವುದೇ ಸಹಕಾರ ನೀಡದಿರುವುದು ಬಹಳ ಕಷ್ಟವನ್ನು ತಂದಿಟ್ಟಿದೆ. ಹೀಗಾಗಿ ಇಂತಹ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಲ್ಲಿ ಕಾಲೇಜಿನ ಉನ್ನತಿಗಾಗಿ ಶ್ರಮಿಸಿದ ದಯಾನಂದ ನಾಯಕ್, ಆಶಾ ಶಾಲೆಟ್, ಅಜಿತ್ ಕುಮಾರ್, ಕುಮಾರ ಸುಬ್ರಹ್ಮಣ್ಯ ರವರನ್ನೂ, ಉಪನ್ಯಾಸಕೇತರರನ್ನೂ, ವಿದ್ಯಾರ್ಥಿಗಳು ಸ್ಮರಿಸಿಕೊಳ್ಳುತ್ತಾರೆ.