ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ಪುರಸಭೆಯ ಮಾಸಿಕ ಸಭೆ ಜುಲೈ 15 ರಂದು ನಡೆಯಿತು. ಮಾರುಕಟ್ಟೆ ಪ್ರದೇಶ, ನಾಗರಕಟ್ಟೆ , ಅಲಂಗಾರು ಕಡಲಕರೆ, ಪ್ರದೇಶದಲ್ಲಿ ವಿಪರೀತ ಬೀದಿನಾಯಿಗಳ ಕಾಟವಿದ್ದು ತಕ್ಷಣ ಕ್ರಮ ಕೈಗೊಳ್ಳಲು ಕೊರಗಪ್ಪ, ನಾಗರಾಜ ಪೂಜಾರಿ, ರಾಜೇಶ್ ನಾಯಕ್ ಆಗ್ರಹಿಸಿದರು. ಸ್ವಚ್ಛತೆ ರಹಿತ ಫಾಸ್ಟ್ ಫುಡ್ ಗಳಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಈ ಬಗ್ಗೆ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಅಮೃತ ಯೋಜನೆಯ ಕಳಪೆ ಕಾಮಗಾರಿ:- ಕಾಮಗಾರಿ ಮುಂದುವರಿಯುತ್ತಿದೆ, ಪುರಸಭಾ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಕಳಪೆ ಕಾಮಗಾರಿ ನಡೆದು ಜನರನ್ನು ಹೆದರಿಸಲಾಗುತ್ತಿದೆ. ತಕ್ಷಣ ಕಾಮಗಾರಿ ನಿಲ್ಲಿಸಲು ಜಿಲ್ಲಾಧಿಕಾರಿಗಳನ್ನು ಸಂಧಿಸಲು, ಪುರಸಭಾ ಲಾಯರ್ ಮೂಲಕ ಕಂಪನಿಗೆ ನೋಟೀಸು ನೀಡುವಂತೆ ಸುರೇಶ್ ಪ್ರಭು, ಪಿ.ಕೆ.ಥೋಮಸ್, ಪುರಂದರ ದೇವಾಡಿಗ, ಕೊರಗಪ್ಪ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪೈಪ್ ಲೈನ್ ಕಾಮಗಾರಿ ಅರೆ ಬರೆ ಮಾಡಿದ್ದು ಎಲ್ಲ ಕಡೆ ಜನರಿಗೆ ತೊಂದರೆದಾಯಕ ವಾಗಿದೆ. ರುದ್ರ ಭೂಮಿ, ಪಂಪ್ ಹೌಸ್ ಗೆ ಹೋಗುವ ಮಾರ್ಗದಲ್ಲಿ ಚಲಿಸಲು ಸಾಧ್ಯವಿಲ್ಲ. ಇದೆಲ್ಲವನ್ನೂ ನಿವಾರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಅಗತ್ಯವಿದೆ ಎಂದು ರೂಪ ಶೆಟ್ಟಿ, ಜೋಸ್ಸಿ ಮಿನೇಜಸ್ ಗಮನ ಸೆಳೆದರು. 

ಮೆಸ್ಕಾಂ ಸಹಾಯಕ ಇಂಜಿನಿಯರ್ ಅಸಡ್ಡೆ:- ಮೂಡುಬಿದಿರೆ ಮೆಸ್ಕಾಂ ನ ಸಹಾಯಕ ಇಂಜಿನಿಯರ್ ಅವರು ಅತೀ ತುರ್ತು ಸಂದರ್ಭದಲ್ಲಿ ಪುರಸಭಾ ಸದಸ್ಯರು ಫೋನ್ ಮಾಡಿದರೂ ಸ್ಪಂದಿಸುತ್ತಿಲ್ಲ. ಸಾರ್ವಜನಿಕ ರಸ್ತೆಯಲ್ಲಿ ಸರ್ವಿಸ್ ವಯರ್ ತುಂಡಾಗಿ ಬಿದ್ದು ನಾಯಿಯೊಂದು ಸತ್ತಾಗಲೂ ಸ್ಪಂದಿಸದೇ ಅಸಡ್ಡೆ ತೋರುತ್ತಿದ್ದಾರೆ. ಕೊನೆಗೆ ಲೈನ್ ಮೆನ್ ಗೆ ಫೋನ್ ಮಾಡಿ ಸಂಪರ್ಕ ಕಡಿತಗೊಳಿಸಲಾಯಿತು. ಪ್ರಾಣಹಾನಿ ಆಗುವ ತನಕ ಇವರು ಅಸಡ್ಡೆ ತೋರುತ್ತಿದ್ದಾರೆ ಎಂದು ಪುರಂದರ ದೇವಾಡಿಗ ಖಂಡಿಸಿದರು. 

ಸೆಟ್ ಬ್ಯಾಕ್ ಸಮಸ್ಯೆ:- ಸೆಟ್ ಬ್ಯಾಕ್ ಬಿಟ್ಟು ಕಟ್ಟಲು ಪರವಾನಿಗೆ ನೀಡಿದ್ದರೂ, ಕೆಲವರು ಅದನ್ನು ಇತರ ರೀತಿ ಉಪಯೋಗಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಎಲ್ಲ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. 

ಬಸ್ ನಿಲ್ದಾಣದ ಸಮಸ್ಯೆಗಳು:- ಬಸ್ಸು ನಿಲ್ದಾಣದ ಪುರಸಭಾ ಕಟ್ಟಡದ ರಕ್ಷಣೆ ಇಲ್ಲದಿರುವುದು ಆತಂಕಕಾರಿಯಾಗಿದೆ. ಯಾರುಯಾರೋ ಇದ್ದು, ಹೋಗುತ್ತಿದ್ದಾರೆ. ಸುಂದರ ಬಸ್ ನಿಲ್ದಾಣದ ಕಪ್ಪು ಚುಕ್ಕೆಯಂತೆ ನಮ್ಮ ಪತ್ರಿಕೆಯಲ್ಲಿ ತೆರೆ ಕಂಡ ಇರುವೈಲು ಬಸ್ ನಿಲ್ಲುವ ಪ್ರದೇಶದಲ್ಲಿರುವ ಹಳೆಯ ಕುಡಿಯುವ ನೀರಿನ ಕಟ್ಟಡದ ಅವ್ಯವಸ್ಥೆಯ, ಶೌಚಾಲಯದ ದಯನೀಯ ಪರಿಸ್ಥಿತಿಗಳ ಫೋಟೋ ಸಹಿತ ಪ್ರದರ್ಶಿಸಿ ಕ್ರಮ ಕೈಗೊಳ್ಳಲು ಸುರೇಶ್ ಕೋಟ್ಯಾನ್ ಆಗ್ರಹಿಸಿ, ಮೇಲಂತಸ್ತಿಗೆ ತೆರಳಲಾಗದಂತೆ ಬೀಗ ಜಡಿಯಲು ಕೇಳಿಕೊಂಡರು.

ವಿಜಯ ನಗರದ ನೀರಿನ ಸಮಸ್ಯೆಗೆ ಮೂಲ ಕಾರಣ ಫ್ಲ್ಯಾಟ್ ನ ವ್ಯಕ್ತಿ ಗೇಟ್ ವಾಲ್ವ್ ತಿರುಗಿಸಿ ತೊಂದರೆ ಕೊಡುತ್ತಿರುವುದು. ಆ ಅನಧಿಕೃತ ವ್ಯಕ್ತಿಯ ಮೇಲೆ ಕ್ರಮ ಜರುಗಿಸಬೇಕು. ಒಂದು ವೇಳೆ ಮುಂದುವರಿದರೆ ಫ್ಲ್ಯಾಟ್ ನ ನೀರಿನ ಸಂಪರ್ಕವನ್ನು ನಿಲ್ಲಿಸಿ ಎಂದು ಮುಖ್ಯಾಧಿಕಾರಿಗಳಿಗೆ ಉಪಾಧ್ಯಕ್ಷ ನಾಗರಾಜ ಪೂಜಾರಿ ಖಾರವಾಗಿ ಆದೇಶಿಸಿದರು.

ಗಣೇಶೋತ್ಸವದ ಸಂದರ್ಭದಲ್ಲಿ ದೀಪಾಲಂಕಾರದ ಜೊತೆಗೆ ಚರಂಡಿಗಳನ್ನು ಸರಿಪಡಿಸುವ ಕೆಲಸ ಮಾಡಲು ಎಲ್ಲಾ ಸದಸ್ಯರೂ ಕೇಳಿಕೊಂಡರು.

ಪುತ್ತಿಗೆಯ ಕೊಳಚೆ ನೀರು ಸಮಸ್ಯೆ:- ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಸಾಯಿ ಮಂಜ್ ಅಪಾರ್ಟ್ ಮೆಂಟ್ ನವರು ಕದ್ದುಮುಚ್ಚಿ ರಾತ್ರೆ ಹೊತ್ತು ಕೊಳಚೆಯನ್ನು ಪುರಸಭಾ ತೋಡಿಗೆ ಬಿಡುತ್ತಾರೆ ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಪಂಚಾಯತ್ ಗೆ ತಿಳಿಸಲಾಗಿದೆ. ಆದರೂ ಪರಿಸ್ಥಿತಿ ಸ್ಥಿರವಾಗಿದೆ. ಯಾವುದೇ ಪರಿಹಾರ ದೊರಕಲಿಲ್ಲ. ತಕ್ಷಣ ಕ್ರಮ ಜರುಗಿಸಿ ಪೈಪ್ ಬಂದ್ ಮಾಡಲು ಎಲ್ಲಾ ಸದಸ್ಯರೂ ಕೇಳಿಕೊಂಡರು.

ತುಂಡು ಕಲ್ಲಿನಿಂದ ಕಟ್ಟಿದ ಕಾಮಗಾರಿ ಕಳಪೆ ಗುಣಮಟ್ಟ ಪ್ರದರ್ಶಿಸಿದರೆ ಪುರಸಭೆಯ ಕುರಿತು ತಪ್ಪು ಮಾಹಿತಿ, ಅಭಿಪ್ರಾಯ ಮೂಡುವ ಸಂಶಯ ವ್ಯಕ್ತಪಡಿಸಿ ಪ್ರಸಾದ್ ಕುಮಾರ್ ಸರಿಪಡಿಸಲು ಇಂಜಿನಿಯರ್ ರವರಲ್ಲಿ ಕೇಳಿಕೊಂಡರು.

ಪುರಸಭೆಗೆ ಅಗತ್ಯ ಇರುವ ನೂತನ ಹಿಟಾಚಿ, ಜೆಸಿಬಿ ಯಂತ್ರ ಖರೀದಿಗೆ, ಅಂಬೇಡ್ಕರ್ ಭವನ ರಿಪೇರಿಗೆ, ಶೌಚಾಲಯ ಸ್ವಚ್ಛತೆ-ನಿರ್ವಹಣೆಗೆ, ರಸ್ತೆ ಬದಿಯ ತೊಂದರೆ ದಾಯಕ ಮರಗಳ ನಿರ್ವಹಣೆಗೆ, ಲಾಡಿ ದೇವಾಲಯದ ಮಾರ್ಗ ಸರಿಪಡಿಸಲು, ಬಿಡ್ಡು ದಾರರು ಇಲ್ಲದ ಟೆಂಡರ್ ಕಡಿಮೆಗೊಳಿಸಲು, ಎಲ್ಲಾ ರಾಜ ಕಾಲುವೆಗಳ ಪರಿಸ್ಥಿತಿ ಸರಿಪಡಿಸಲು ಸಭೆ ಒಪ್ಪಿಗೆ ನೀಡಿತು. ಪಿವಿಸಿ ಪೈಪ್ ಒಡೆಯುತ್ತಿರುವದರಿಂದ ಉತ್ತಮ ಗುಣಮಟ್ಟದ ಜಿಐ ಪೈಪ್ ಅಳವಡಿಸಿ ಮುಖ್ಯ ಪೈಪ್ ದುರಸ್ತಿ ಗೊಳಿಸಲು ಸುರೇಶ್ ಪ್ರಭು, ರುದ್ರ ಭೂಮಿ ಸುಂದರಗೊಳಿಸಲು ಶಕುಂತಲಾ ಇತ್ಯಾದಿಯರು ಕೇಳಿಕೊಂಡರು. ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮದಂತೆ ಆರೋಗ್ಯಾಧಿಕಾರಿಗೆ ಸಹಾಯಕರಾಗಿ ಆಗಮಿಸಿದ ಆಶಾ, ರಾಜೇಶ್ವರಿ, ಚಂದ್ರಿಕಾ, ಅನುಷಾರನ್ನು ಸ್ವಾಗತಿಸಿದರು. ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು, ಮುಖ್ಯಾಧಿಕಾರಿ ಇಂದು ವೇದಿಕೆಯಲ್ಲಿ ಉಪಸ್ಥಿತರಿದ್ದರು.