ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಚಾಣಕ್ಯ, ವಿವೇಕಾನಂದರಂತಹ ಶ್ರೇಷ್ಠ ರಾಷ್ಟ್ರ ನಿರ್ಮಾಪಕರಿಂದ ಪ್ರೇರಣೆ ಪಡೆದು ಗುರು ಶಿಷ್ಯ ಪರಂಪರೆ ಬೆಳೆಯಬೇಕು. ಗುರುಗಳು ತಮ್ಮ ಉತ್ತಮ ಜ್ಞಾನ, ಶ್ರೇಷ್ಠ ಸಂಸ್ಕಾರದಿಂದ ಶಿಷ್ಯರಿಗೆ ಯೋಗ್ಯ ಮಾರ್ಗದರ್ಶನ ಮಾಡಬೇಕು. ಪ್ರಾಮಾಣಿಕತೆ, ಸಾತ್ವಿಕ ಜೀವನವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾರ್ಗದರ್ಶಕರಾಗಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆಕೊಟ್ಟರು.
ಅವರು ಜುಲೈ 26ರಂದು ಆಳ್ವಾಸ್ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಭಾಗದ ಅಧ್ಯಾಪಕ ಭೂಷಣ ಪುರಸ್ಕಾರ ಪ್ರೇರಣಾ ದಿವಸ್ ಕಾರ್ಯಕ್ರಮದಲ್ಲಿ ಪುರಸ್ಕಾರ ವಿತರಿಸಿ ಮಾತನಾಡಿದರು. ಜೀವಮಾನ ಸಾಧನೆ ಪುರಸ್ಕಾರಕ್ಕೆ ಉತ್ತರಿಸಿದ ಮಣಿಪಾಲ ಮಾಹೆ ಕುಲಾಧಿಪತಿ ಡಾ.ಹೆಚ್.ಎಸ್.ಬಲ್ಲಾಳ್ ಮಾತನಾಡಿ ಉತ್ತಮ ಕೆಲಸ ಎಲ್ಲರಿಂದಲೂ ಪ್ರಶಂಸಿಸಲ್ಪಡುತ್ತದೆ. ಅದು ಇತರರಿಗೆ ಪ್ರೇರಣೆಯನ್ನು ನೀಡುತ್ತದೆ. ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಡಾ.ಪಿ.ಅನಂತಕೃಷ್ಣ ಭಟ್ ಮಾತನಾಡಿ ಗುರು ಸದಾ ಸಕಾರಾತ್ಮಕವಾಗಿ ಬೆಳೆದು ಸಮಾಜದ ಋಣವನ್ನು ತೀರಿಸಲು ಕೇಳಿಕೊಂಡರು.
ಉತ್ತಮ ಆಡಳಿತಗಾರ ಪ್ರಶಸ್ತಿ ಆಳ್ವಾಸ್ ನ ಡಾ.ಕುರಿಯನ್, ಹಾಗೂ ಮಂಗಳೂರು ಕೆನರಾ ಕಾಲೇಜ್ ನ ಡಾ. ಪ್ರೇಮಲತಾ, ಉತ್ತಮ ಸಂಶೋಧಕ ಪ್ರಶಸ್ತಿ ಮಾಹೆಯ ಪ್ರೊ ಹರೀಶ್ ಜೋಶಿ, ಎಜೆ ಸಂಸ್ಥೆಯ ಡಾ.ಶಾಂತಾರಾಮ ರೈ, ಉತ್ತಮ ಶಿಕ್ಷಕ ಪ್ರಶಸ್ತಿ ವಿಶ್ವವಿದ್ಯಾಲಯ ಕಾಲೇಜಿನ ಡಾ.ಸುಭಾಷಿಣಿ ಶ್ರೀವತ್ಸ, ಉಡುಪಿ ಡಾ.ಜಿ.ಶಂಕರ್ ಕಾಲೇಜಿನ ಡಾ.ರಾಜೇಂದ್ರ, ಉತ್ತಮ ಗ್ರಂಥಪಾಲಕ ಪುರಸ್ಕಾರ ಮಡಿಕೇರಿಯ ಪ್ರೊ.ವಿಜಯಲತಾ ಸಿ, ಉಡುಪಿ ಕಾಪುವಿನ ಯಶೋಧ, ಉತ್ತಮ ಶಾರೀರಿಕ ಶಿಕ್ಷಕ ಪ್ರಶಸ್ತಿ ಬೆಳ್ತಂಗಡಿಯ ಡಾ.ರಾಧಾಕೃಷ್ಣ ಹೆಚ್ ಬಿ, ಕೊಡಗು ವಿರಾಜಪೇಟೆಯ ತಮ್ಮಯ್ಯ ಕೆ.ಎಸ್. ರಾಜ್ಯಪಾಲರಿಂದ ಸಂಮಾನಿಸಲ್ಪಟ್ಟರು.
ವಿಕಸಿತ ಭಾರತದ ನಿರ್ಮಾಣವಾಗಲಿ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಶಿಸಿದರು. ಹೊಸದಿಗಂತದ ಪಿ ಎಸ್ ಪ್ರಕಾಶ್ ತಮ್ಮ ದಿಕ್ಸೂಚಿ ಭಾಷಣದಲ್ಲಿ ಇಂದಿನ ದಿನಗಳಲ್ಲಿ ಯಮ ನಿಯಮಗಳನ್ನು ಪಾಲಿಸಿ ಸ್ವಾಭಿಮಾನಿ ಸಮಾಜದ ನಿರ್ಮಾಣ ಮಾಡಲು ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದು ತಿಳಿಸಿದರು. ಯುವಕರಲ್ಲಿ ರಾಷ್ಟ್ರವೇ ಪರಮ ಆದರ್ಶ ಆಗಬೇಕಾದ ಅಗತ್ಯ ಇದೆ ಎಂದು ಆಶಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಸಿಂಡಿಕೇಟ್ ಸದಸ್ಯರುಗಳಾದ ಡಾ.ಕೆ.ಸಿ.ಮಹದೇಶ, ಡಾ. ಎಸ್ ಬಿ ಎಂ ಪ್ರಸನ್ನ, ಸ್ವಾಗತ ಸಮಿತಿಯ ಅಧ್ಯಕ್ಷ ವಿವೇಕ್ ಆಳ್ವ, ರಾಜ್ಯ ಜತೆ ಕಾರ್ಯದರ್ಶಿ ಡಾ.ಮಾಧವ ಎಂ.ಕೆ. ಹಾಜರಿದ್ದರು.
ಸಂಘದ ಅಧ್ಯಕ್ಷ ಡಾ.ಗುರುನಾಥ ಬಡಿಗೇರ್ ಸ್ವಾಗತಿಸಿದರು. ವೆಂಕಟೇಶ್ ನಾಯಕ್ ಹಾಗೂ ಮಮತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಯಲಕ್ಷ್ಮಿ ಶೆಟ್ಟಿ ವಂದಿಸಿದರು.