ಉಡುಪಿ: ರಾಜ್ಯೋತ್ಸವ ಪೆರೇಡ್ ಗೆ  ಬ್ರಹ್ಮಶ್ರೀ  ನಾರಾಯಣ ಗುರು ಸ್ವಾಮೀಜಿಯವರ  ಸ್ತಬ್ಧಚಿತ್ರವನ್ನು ನಿರಾಕರಣೆ ,ಮಾನವ ಕುಲಕ್ಕೆ ಮಾಡಿದ ಅಪಮಾನ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕಾರ್ನೆಲಿಯೋ ರವರು ತಿಳಿಸಿದ್ದಾರೆ.

ನಾರಾಯಣ ಗುರುಗಳು ಮಾನವತೆಯ ಹಾಗೂ ಸಮಾನತೆಯ ಸಂದೇಶ ಸಾರಿದ ಮಹಾ ಮಾನವತಾವಾದಿ. ಅವರ ತತ್ವ ಆದರ್ಶಗಳು ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ತಂದಿದೆ. ಕೇಂದ್ರ ಸರಕಾರದ ಈ ನಿಲುವು ನಾರಾಯಣ ಗುರುಗಳನ್ನು ಹಾಗೂ ಅವರ ಚಿಂತನೆಗಳನ್ನು ಅಪಮಾನಿಸಿದೆ.  ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ತಳಸಮುದಾಯದ ಮಹಾಪುರುಷರ ಬಗ್ಗೆ ಬಿಜೆಪಿ ಪಕ್ಷ ಮತ್ತು ಕೇಂದ್ರ ಸರ್ಕಾರಕ್ಕೆ ಇರುವ ಪೂರ್ವಗ್ರಹ ಮತ್ತು ತಿರಸ್ಕಾರಕ್ಕೆ ಸಾಕ್ಷಿ.

ಓರ್ವ ಸಮಾಜ ಸುಧಾರಕ, ಸಮಾಜದಲ್ಲಿರುವ ಅಸಮಾನತೆಯನ್ನು ತೊಡೆದುಹಾಕಿ ಎಲ್ಲರೂ ಸಮಾನವಾಗಿ ಬದುಕಲು ತನ್ನ ಜೀವ ಹಾಗೂ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಜ್ಯಾತ್ಯಾತೀತ ನಿಲುವು ಹೊಂದಿದ ಇವರು ಸರ್ವ ಜಾತಿ ಹಾಗೂ ಸರ್ವ ಧರ್ಮವನ್ನು ಪ್ರೀತಿಸುತ್ತಿದ್ದರು. ಸರ್ವ ಜಾತಿಯವರು ಗೌರವಿಸುವ ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ನಾವೆಲ್ಲರೂ ಮನುಜರು ಎಂದು ಸರ್ವಕಾಲೀನ ಸಂದೇಶವನ್ನು ನೀಡಿ ಸಮಸ್ತರ ಮನ ಗೆದ್ದ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು 2022 ರಾಜ್ಯೋತ್ಸವ ಪೆರೇಡ್ ಗೆ  ಅಳವಡಿಸಲು ಅವಕಾಶ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.