ಮೂಡುಬಿದಿರೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಹಲವಾರು ಕಟ್ಟಡಗಳು ನಿರ್ಮಾಣ ಗೊಂಡ ಬಗೆಗೆ ಪುರಸಭೆ, ಪಂಚಾಯತ್ ಗಳಲ್ಲಿ ಆಗಾಗ ಕಚ್ಚಾಟ, ತಡೆ ಇತ್ಯಾದಿ ಸಾಮಾನ್ಯವಾಗಿದೆ. ಇದಕ್ಕೆ ಇದೀಗ ಇಂದಿರಾ ಕ್ಯಾಂಟೀನ್ ಕೂಡಾ ಸೇರ್ಪಡೆಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ. 

ಮೂಡುಬಿದಿರೆ ತಾಲೂಕು ಕಛೇರಿಯ, ಮೂಡಾ  ಕಛೇರಿಯ ಎದುರು ಮುಖ್ಯ ರಸ್ತೆಯ ಬದಿಯಲ್ಲಿಯೇ ಕೇವಲ 8-10 ಫೀಟ್ ದೂರದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಲಾಗುತ್ತಿದೆ. ಒಳ ರಸ್ತೆ ಆಳ್ವಾಸ್ ರಸ್ತೆಯಿಂದ 5 ಫೀಟ್ ಕೂಡಾ ಇಲ್ಲ. ಸರಕಾರದ ನಿಯಮದಂತೆ ರಸ್ತೆಯಿಂದ 60 ಫೀಟ್ ದೂರ ಇರಬೇಕು ಎಂದಿದೆ . ಹೀಗಿದ್ದರೂ ಸರಕಾರದ ಕಟ್ಟಡಕ್ಕೇ ನಿಯಮ ಗಾಳಿಗೆ ತೂರಿದ ಘಟನೆ ನಡೆದಿದೆ.

ಈ ಕಟ್ಟಡದ ಕೊಳಚೆ ನೀರು ಎಲ್ಲಿಗೆ ಬಿಡಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಈಗಾಗಲೇ ಮೇಲ್ಗಡೆ ಇರುವ ಮೀನು ಮಾಂಸ ಮಾರುಕಟ್ಟೆಯ ಕೊಳಚೆ ನೀರು ರಸ್ತೆಯಲ್ಲಿ ಹರಿದು ಬಂದು ಆಳ್ವಾಸ್ ರಸ್ತೆಯಲ್ಲೂ ಕಳೆದ ಹಲವಾರು ತಿಂಗಳುಗಳಿಂದ ನಿರಂತರವಾಗಿ ಹರಿದು ಹೋಗುವ ಬಗ್ಗೆ ಸ್ವತಃ ಪುರಸಭಾ ಸದಸ್ಯರು ಗಮನ ಸೆಳೆದಿದ್ದಾರೆ. ಅದನ್ನೇ ಸರಿಪಡಿಸದ ಪುರಸಭೆ ಇದನ್ನೇನು ಮಾಡಲು ಸಾಧ್ಯ? ಎಂದು ಸಾರ್ವಜನಿಕರು ಮಾತಾಡಿ ಕೊಳ್ಳುತ್ತಿದ್ದಾರೆ. ಸಮರ್ಪಕವಾಗಿ ನಿಯಮದಂತೆ ರಚಿಸಿ, ಸಾಕಷ್ಟು ಜನರಿಗೆ ನೆಮ್ಮದಿಯಿಂದ ಆಹಾರ ಸೇವಿಸುವಂತೆ ಅವಕಾಶ ಒದಗಿಸಬೇಕು. ಆಳ್ವರು ಸಮಯಕ್ಕೆ ಮಹತ್ವ ಕೊಟ್ಟು ಮಾದರಿಯಾದಂತೆ,  ಮೂಡುಬಿದಿರೆಯ ಜನತೆ ನಿಯಮಕ್ಕೆ ಬದ್ಧರಾಗಿ ಕಟ್ಟಡ ರಚಿಸುವ ಪರಿಪಾಠ ಬೆಳೆಸಿಕೊಳ್ಳಲಿ ಎಂದು ಹಾರೈಸೋಣ.