ಮಂಗಳೂರು,  ಜನವರಿ 11: ಕೊರೋನಾ ಸಮಸ್ಯೆ ಈಗಲೂ ಇದೆ. ಮೂರನೆಯ ಅಲೆಯ ಈ ಸಂದರ್ಭದಲ್ಲಿಯೂ ಹಲವರು ಇಲ್ಲೂ ಮಾಸ್ಕ್ ಧರಿಸಿಲ್ಲ. ಕೊರೋನಾ ಜನರಿಗೆ ಸಮಸ್ಯೆ ಆಗಿರುವುದರಿಂದ ಅದು ಹರಡದಂತೆ ನಾವೆಲ್ಲ ಕೊರೋನಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಮಾಜೀ ಸಚಿವ ರಮಾನಾಥ ರೈ ಹೇಳಿದರು.

ಕಾಲಾವಧಿ ಜಾತ್ರೆಗಳು, ನಾನಾ ಧಾರ್ಮಿಕ ಉತ್ಸವಗಳು, ಮುಸ್ಲಿಂ, ಕ್ರಿಶ್ಚಿಯನರ ಆಚರಣೆಗಳೂ ನಡೆಯುತ್ತಿವೆ. ಈಗ ಅಯ್ಯಪ್ಪ ಯಾತ್ರೆಯೂ ಜೋರಿದೆ. ಇವೆಲ್ಲವೂ ಕೊರೋನಾ ಬಾಧೆಗೆ ಈಡಾಗಿವೆ. ಕೇರಳದಲ್ಲಾಗಲಿ, ಮುಂಬಯಿಯಲ್ಲಾಗಲಿ ಲಾಕ್‌ಡೌನ್ ಹೇರಿಲ್ಲ. ಎಲ್ಲರ ಬದುಕು ಕಸಿಯುವ ಲಾಕ್‌ಡೌನ್ ಹೇರಬಾರದು ಎಂದು ನಾನು ಕೋರುವುದಾಗಿ ರೈ ತಿಳಿಸಿದರು.

ಪ್ರಧಾನಿ ಮೋದಿಯವರು ಓಮೈಕ್ರಾನ್, ಕೋವಿಡ್‌ ನಡುವೆ ಲಾರಿಗಳಲ್ಲಿ ಜನ ತರಿಸಿ ಚುನಾವಣಾ ಜಾಥಾಗಳನ್ನು ನಡೆಸಿದ್ದಾರೆ. ಆರೋಗ್ಯ ಮಂತ್ರಿ ಸುಧಾಕರ್ ಹೇಳಿದಂತೆ ಹಿಂದೆ ಹೇರಿದ್ದ ಅನುಭವ ಇಲ್ಲದ ಲಾಕ್‌ಡೌನ್ ಹೇರಿಕೆಯಿಂದ ಲಕ್ಷಾಂತರ ಜನರು ಸತ್ತರು. ಇನ್ನೊಮ್ಮೆ ಇದು ಬೇಡ ಎಂದು ರಮಾನಾಥ ರೈ ಹೇಳಿದರು.

ಯಾರೋ ಹೇಳಿದಂತೆ ಇದು ಓಮೈಕ್ರಾನ್ ಅಲ್ಲ ಮೆಕೆಕ್ರೋನ್ ಅಂತೆ. ಅದರಲ್ಲಿ ರಾಜಕೀಯ ಇರಬಹುದು. ಲಾಕ್‌ಡೌನ್ ಈ ಕೊರೋನಾ ತಡೆಗೆ ಮದ್ದಲ್ಲ. ಅದು ಪರಿಹಾರವೂ ಅಲ್ಲ. ಜನಾಭಿಪ್ರಾಯವು ಲಾಕ್‌ಡೌನ್‌ಗೆ ವಿರುದ್ಧವಿದೆ. ವ್ಯಾಪಾರಸ್ಥರು ಮತ್ತು ಕೆಳ ಮಧ್ಯಮ ವರ್ಗದವರು ಹಿಂದಿನ ಲಾಕ್‌ಡೌನ್‌ನಲ್ಲಿ ನೆಲ ಕಚ್ಚಿದ್ದಾರೆ. ಇನ್ನೊಮ್ಮೆ ಜನರಿಗೆ ಅಂಥ ಸ್ಥಿತಿ ತರಬೇಡಿ ಎಂದು ರೈ ತಿಳಿಸಿದರು.

ಮದುವೆಯಂಥ ಕಾರ್ಯಕ್ರಮಗಳು ವೀಕೆಂಡ್‌ನಲ್ಲಿ ಬರುತ್ತವೆ. ಅದಕ್ಕೆ ತಡೆ ಅನವಶ್ಯಕ. ಬಿಜೆಪಿಯ ನಳಿನ್ ಕಟೀಲ್ ಮೇಕೆದಾಟು ಪಾದಯಾತ್ರೆಯನ್ನು ದೊಡ್ಡ ನಾಟಕ ಎಂದಿದ್ದಾರೆ. ಅವರ ಎತ್ತಿನಹೊಳೆ ನಾಟಕದಷ್ಟು ಕೆಟ್ಟ ನಾಟಕ ಇದಲ್ಲ ಎಂದು ರೈ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಪ್ಪಿ, ಹರಿನಾಥ್, ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ಇಬ್ರಾಹಿಂ ಕೋಡಿಜಾಲ್, ಗಣೇಶ್ ಪೂಜಾರಿ, ದೀಪಕ್, ಲಾರೆನ್ಸ್, ಸಾಹುಲ್ ಹಮೀದ್, ಪಾಲ್ ಮೊದಲಾದವರು ಉಪಸ್ಥಿತರಿದ್ದರು.