ಮಂಗಳೂರು, ಜೂನ್ 02: ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಪ್ರಧಾನಿ ಮೋದಿಯವರ ಎಂಟು ವರುಷಗಳ ಸಾಧನೆಯನ್ನು ಕೊಂಡಾಡಿ ಪತ್ರಿಕಾಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ದಕ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ ಅವರು ಸಿದ್ದರಾಮಯ್ಯನವರ ಆರೆಸ್ಸೆಸ್ ಟೀಕಿಸುವ ಚಾಳಿಯನ್ನು ಟೀಕಿಸಿದರು.

ಕಾಮಾಲೆ ಕಣ್ಣಿನವರಿಗೆ ಲೋಕವೇ ಹಳದಿ ಕಾಣುವಂತೆ ಸಿದ್ದರಾಮಯ್ಯನವರಿಗೆ ಆರೆಸ್ಸೆಸ್ ಎಂದರೆ ಪೂರ್ವಗ್ರಹ ಪೀಡಿತರಾಗಿ ಮಾತನಾಡುತ್ತಾರೆ. ಸಂಘ ದೇಶಕ್ಕೆ ಸೇವೆ ಸಲ್ಲಿಸುವುದರಲ್ಲಿ ಖ್ಯಾತವಾಗಿದೆ. ಸಿದ್ದರಾಮಯ್ಯನವರನ್ನು ತೀವ್ರವಾಗಿ ಖಂಡಿಸುವುದಾಗಿ ಸುದರ್ಶನ ಎಂ ತಿಳಿಸಿದರು.

ಜಗತ್ತು ಭಾರತವನ್ನು ನೋಡುವ ರೀತಿಯಲ್ಲಿ ಪ್ರಧಾನಿ ಮೋದಿಯವರು ಆಡಳಿತ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಸೂಚನೆ ಮೇಲೆ ಇಡೀ ದೇಶದಲ್ಲಿ ಮೋದಿಯವರ ಎಂಟು ವರುಷಗಳ ಆಡಳಿತವನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ನಮ್ಮ ಜನರು ಮಾಡುತ್ತಿದ್ದಾರೆ. ಮೋದಿಯವರ ಸರಕಾರವು ಜಮ್ಮು ಕಾಶ್ಮೀರದಿಂದ ಹಿಡಿದು ದೇಶದ ನಾನಾ ಸಮಸ್ಯೆಗಳನ್ನು ಪರಿಹರಿಸಿ, ಅಭಿವೃದ್ಧಿಯನ್ನು ಮೇರು ಮುಟ್ಟಿಸಿದ್ದಾರೆ ಎಂದು ಸುದರ್ಶನ ಹೇಳಿದರು.

ಜನಧನ್, ಜನೌಷಧಿ, ರೈತ ಸೇವೆ ಸಹಿತ ರಾಷ್ಟ್ರ ಪರಿವರ್ತನೆ ಮಾಡುತ್ತಿದೆ ಮೋದಿ ಸರಕಾರ. ಸಾಂಸ್ಕೃತಿಕವಾಗಿಯೂ ಮೋದಿಯವರ ಸಾಧನೆ ಹಿರಿದು. ಈಗ ಅಯೋಧ್ಯೆಯಲ್ಲಿ ರಾಮನ ಹೆಸರಿನಲ್ಲಿ ರಾಷ್ಟ್ರೀಯ ಮಂದಿರ ನಿರ್ಮಾಣ ಆಗುತ್ತಿದೆ. ಜೂನ್ 15ರವರೆಗೆ ನಮ್ಮ ಕಾರ್ಯಕರ್ತರು ಮೋದಿ ಸಾಧನೆ ಹರಡಲಿದ್ದಾರೆ ಎಂದು ಸುದರ್ಶನ ತಿಳಿಸಿದರು.

ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸ್ಪೀಕರ್ ಎಲ್ಲರೂ ಸಂಘ ಪರಿವಾರದ ಕೊಡುಗೆ. ಇತ್ತೀಚೆಗೆ ಎಸ್‌ಡಿಪಿಐ ಸಮ್ಮೇಳನದಲ್ಲಿ ತೆಗೆದುಕೊಂಡ ತೀರ್ಮಾನವನ್ನು ನಾವು ಖಂಡಿಸುವುದಾಗಿ ಸುದರ್ಶನ್ ಹೇಳಿದರು.

ಪಠ್ಯ ಪುಸ್ತಕ ವಿರೋಧ ಎನ್ನುವುದು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಅಷ್ಟೇ ಎಂದರು ಸುದರ್ಶನ್. ಸುಂದರ ಹೆದ್ದಾರಿ, ಪ್ಲಾಸ್ಟಿಕ್ ಪಾರ್ಕ್, ಬಂದರು ಅಭಿವೃದ್ಧಿ, ಜಲಜೀವನ ಮಿಶನ್ ಇವೆಲ್ಲ ಜಿಲ್ಲೆಗೆ ಮೋದಿ ಕೊಡುಗೆಗಳು ಎಂದು ಶಾಸಕ ಕಾಮತ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ,  ಶಾಸಕ ವೇದವ್ಯಾಸ ಕಾಮತ್ ರವಿಶಂಕರ್ ಮಿಜಾರ್, ಕಸ್ತೂರಿ ಪಂಜ ಮೊದಲಾದವರು ಉಪಸ್ಥಿತರಿದ್ದರು.