ಮಂಗಳೂರು: ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 13 ದಿನಗಳ ಶಕ್ತಿ ಕ್ಯಾನ್‍ಕ್ರಿಯೇಟ್– 2022 ರ ಬೇಸಿಗೆ ಶಿಬಿರವು ಶನಿವಾರದಂದು ಸಮಾರೋಪಗೊಂಡಿತು.

    ಶಕ್ತಿ ವಸತಿ ಶಾಲೆಯರೇಷ್ಮ ಮೆಮೋರಿಯಲ್ ಸಭಾಂಗಣದಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ, ಎನ್. ಶಶಿಕುಮಾರ್, ಪೋಲಿಸ್ ಆಯುಕ್ತರು ಮಂಗಳೂರು ಭಾಗಿಯಾಗಿದ್ದರು. ದೀಪ ಬೆಳಗಿಸಿ ಮಾತನಾಡಿದ ಅವರು “ಈ ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ಹೆಚ್ಚಿಸುವಂತೆ ಮಾಡುತ್ತದೆ. ಗುರು ಹಿರಿಯರಿಗೆ ಗೌರವಕೊಡುವುದನ್ನು ಕಲಿಯುತ್ತಾರೆ. ರಜಾ ದಿನಗಳನ್ನು ಇಂತಹ ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು. ಆ ಮೂಲಕ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಯಾಗುತ್ತಾರೆ. ಶಕ್ತಿ ವಸತಿ ಶಾಲೆಯು ಈ ಬೇಸಿಗೆ ಶಿಬಿರದ ಮೂಲಕ ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುತ್ತಿದೆ. ಪಾಠದ ಜೊತೆಗೆ, ಆಟ, ಹಾಡು, ನೃತ್ಯಗಳಂತಹ ವಿವಿಧ ಕಲೆಗಳನ್ನು ಮಕ್ಕಳು ಮೈಗೂಡಿಕೊಳ್ಳಬೇಕು.” ಎಂದು ತಿಳಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ಅವರು ಮಾತನಾಡಿ “ಶಕ್ತಿ ವಸತಿ ಶಾಲೆಗೆ ಬರುವ ಮಕ್ಕಳು ಒಳ್ಳೆಯ ಭಾವನೆ, ಒಳ್ಳೆಯ ಮನಸ್ಥಿತಿಯನ್ನು ಪಡೆದುಕೊಂಡು ಹೋಗುತ್ತಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ಮಕ್ಕಳಿಗೆ ಈ ಬೇಸಿಗೆ ಶಿಬಿರದಿಂದ ಸಾಕಷ್ಟು ವಿಷಯಗಳು ಕಲಿಯಲು ಸಿಕ್ಕಿದವು. ಎಲ್ಲಾ ರೀತಿಯ ಕೌಶಲ್ಯಗಳನ್ನು ಪ್ರತಿಒಬ್ಬ ವಿದ್ಯಾರ್ಥಿ ಪಡೆದುಕೊಂಡು ಆತನ ಸರ್ವತೋಮುಖ ಅಭಿವೃದ್ಧಿಯಾಗಬೇಕು ಎಂಬುದೇ ಈ ಶಿಬಿರದ ಮುಖ್ಯ ಉದ್ದೇಶವಾಗಿತ್ತು” ಎಂದು ತಿಳಿಸಿದರು.

    ನಂತರದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮುಖ ಪತ್ರಗಳನ್ನು ವಿತರಿಸಲಾಯಿತು. ಶಿಬಿರದ ಮಕ್ಕಳಿಂದ ಹಾಡು, ನೃತ್ಯ, ನಾಟಕದ ಜೊತೆ ವಿವಿಧ ವಿನೋದಾವಳಿಗಳು ಜರುಗಿದವು. ಸಮಾರೋಪ ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಮಂಗಳ ಮ್ಯಾಜಿಕ್ ತಂಡದಿಂದ ರಾಜೇಶ್ ಮಲ್ಲಿ, ಅಪೂರ್ವ ಮಲ್ಲಿ ಮತ್ತು ಅಂಜನಾ ಮಲ್ಲಿ ಇವರಿಂದ ಮ್ಯಾಜಿಕ್ ಶೋ ನಡೆಯಿತು. ತದ ನಂತರಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

    ಈ ಸಮಾರಂಭದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‍ನ ಪ್ರಧಾನ ಸಲಹೆಗಾರರಾದ ರಮೇಶ್ ಕೆ., ಶಕ್ತಿ  ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‍ರೈ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ನೀಮಾ ಸಕ್ಸೇನಾ ಶಿಬಿರದ ಸಂಯೋಜಕರಾದ ಪೂರ್ಣೇಶ್ ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಾದ ಋತ್ವಿಕ್ ಮತ್ತು ಭುವಿ ಕಾರ್ಯಕ್ರಮ ನಿರೂಪಿಸಿದರು. ಶಿವಮ್ ಸ್ವಾಗತ ಮಾಡಿದರು ಮತ್ತು ಶಮಿತ್ ವಂದಿಸಿದರು.