ಮಂಗಳೂರು: ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ವೈಭವದ ಹಸಿರು ಹೊರೆ ಕಾಣಿಕೆ ಮೆರವಣಿಗೆ ಇಂದು ನಡೆಯಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆಯಿಂದ ತರಕಾರಿ, ಅಕ್ಕಿ, ತೆಂಗಿನಕಾಯಿ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಹೊತ್ತ ಸುಮಾರು 150 ವಾಹನಗಳು ಹೊರೆ ಕಾಣಿಕೆ ಮೆರವಣಿಗೆಯಲ್ಲಿದ್ದವು. ಹೊರೆ ಕಾಣಿಕೆ ಮೆರವಣಿಗೆಯು ಕದ್ರಿ, ನಂತೂರು ಮಾರ್ಗವಾಗಿ ಸಾಗಿ ಕಾಲಭೈರವ ದೇವಸ್ಥಾನ ಸೇರಿತು.
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಹೊರೆ ಕಾಣಿಕೆ ಮೆರವಣಿಗೆಗೆ ತೆಂಗಿನ ಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದ ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಶ್ರೀ ಕಾಲಭೈರವ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಮೂಲಕ ಶ್ರೀಮಂತಿಕೆಯ ಇತಿಹಾಸ ನಿರ್ಮಾಣವಾಗಲಿದೆ. ಜೋಗಿ ಸಮುದಾಯ ಅತ್ಯಂತ ಪ್ರತಿಷ್ಠಿತ ಸಮುದಾಯವಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಈ ಸಮುದಾಯದ ಅನೇಕ ಮಂದಿ ಈ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಅಪರೂಪದ ಕಾಲ ಭೈರವ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಚ್ಛೇಂದ್ರನಾಥ, ಗೋರಕ್ಷನಾಥರವರ ಚಿಂತನೆಯನ್ನು ಮತ್ತೊಮ್ಮೆ ಅವಲೋಕಿಸುವ ಅವಕಾಶ ನೀಡಿದೆ. ಕದ್ರಿ ಮಂಜುನಾಥನ ಸನ್ನಿಧಿಯಿಂದ ಹೊರೆಕಾಣಿಕೆ ಮೂಲಕ ಆರಂಭಗೊಳ್ಳುವ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದಿಂದ ದೇಶದ ಕಂಟಕ ದೂರವಾಗಿ, ಸರ್ವರಿಗೂ ಒಳಿತಾಗಲಿ ಎಂದು ಎಂದರು.
ಮುಖ್ಯು ಅತಿಥಿ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ಕದ್ರಿ ಪರಿಸರದಲ್ಲಿ ಆಗಾಧವಾದ ಭೂ ಸಂಪತ್ತನ್ನು ಹೊಂದಿದ್ದ ಜೋಗಿ ಮಠವು ಆಗಿನ ಕೆಲ ತಪ್ಪುಗಳಿಂದ ಅದನ್ನು ಕಳೆದುಕೊಳ್ಳುವಂತಾಗಿದೆ. ಈಗಿರುವ ಭೂಮಿಯನ್ನು ಉಳಿಸಿಕೊಂಡು ರಕ್ಷಿಸಬೇಕಾಗಿದೆ ಎಂದರು.
ನನ್ನ ರಾಜಕೀಯ ಜೀವನದ ಯಶಸ್ವಿಯಾಗಲು ಕಾಲಭೈರವನ ಕೃಪೆ ಕಾರಣ. ಕಳೆದ ಚುನಾವಣೆಯಲ್ಲಿ ಕಾಲಭೈರವನಿಗೆ ಪೂಜೆ ಸಲ್ಲಿಸಿ ಆ ಬಳಿಕ ನಾಮಪತ್ರ ಸಲ್ಲಿಸಿದ್ದನ್ನು ಸ್ಮರಿಸಿದ ಅವರು, ಜೋಗಿ ಮಠದ ಸರ್ವಾಂಗೀಣ ಪ್ರಗತಿಗೆ ನಾನು ಬದ್ಧನಾಗಿದ್ದೇನೆ. ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ಮಂಜೂರಾಗಿದ್ದು, ಅನುದಾನ ಬಂದ ಕೂಡಲೇ ಕೆಲಸ ಆರಂಭಿಸಲಾಗುವುದು. ಮಠದ ಪರಿಸರಕ್ಕೆ ಈಗಾಗಲೇ 25 ಲಕ್ಷ ರೂ ವೆಚ್ಚದಲ್ಲಿ ಇಂಟರ್‍ಲಾಕ್ ಆಳವಡಿಸುವ ಕೆಲಸ ನಡೆದಿದೆ ಎಂದು ತಿಳಿಸಿದರು.
ಕದ್ರಿ ದೇವಸ್ಥಾನದ ಆರ್ಚಕ ಕೃಷ್ಣ ಅಡಿಗೆ ಆಶೀರ್ವಚನ ನೀಡಿದರು. ಮಂಗಳೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಕೀಲಾ ಕಾವ, ಸದಸ್ಯರಾದ ಮನೋಹರ ಶೆಟ್ಟಿ, ವನಿತಾ ಪ್ರಸಾದ್, ಕದ್ರಿ ಮಂಜುನಾಥ ದೇವಸ್ಥಾನದ ಮೊಕ್ತೇಸರರಾದ ಮನೋಹರ ಸುವರ್ಣ, ರಾಜೇಶ್ ಜೋಗಿ, ಕುಸುಮ ದೇವಾಡಿಗ, ಮಹಾಬಲ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಹೊರೆಕಾಣಿಕೆ ಮೆರವಣಿಗೆ ಸಂಚಾಲಕ ವಿನಯಾನಂದ ಕಾನಡ್ಕರವರನ್ನು ಗೌರವಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಲಹೆಗಾರ ಹರಿನಾಥ್ ಜೋಗಿ, ಪ್ರಧಾನ ಕಾರ್ಯದರ್ಶಿ ಸತೀಶ್ ಜೋಗಿ ಮಾಲೆಮಾರ್, ಕೋಶಾಧಿಕಾರಿ ಶಿವರಾಮ್ ಜೋಗಿ, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಸಾಂಸ್ಕøತಿಕ ಸಮಿತಿಯ ಸಂಚಾಲಕ ಮೋಹನ ಕೊಪ್ಪಲ, ಆಲಂಕಾರ, ಚಪ್ಪರ, ಧ್ವನಿವರ್ಧಕ ಮತ್ತು ಬೆಳಕು ಸಮಿತಿ ಸಂಚಾಲ ಸುಮನ್ ಕದ್ರಿ, ಮಹಿಳಾ ಘಟಕದ ಆದ್ಯಕ್ಷೆ ಸುನಂದಾ ಸುರೇಶ್ ಬಿಜೈ, ಉಪಾಧ್ಯಕ್ಷೆ ಅಮಿತಾ ಸಂಜೀವ, ಹರೀಶ್ ಜೋಗಿ ಶಕ್ತಿನಗರ, ಸತೀಶ್ ಜೋಗಿ ಮೊದಲಾದವರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಜೋಗಿ ದತ್ತನಗರ ಸ್ವಾಗತಿಸಿ, ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಫೆ.3ರಿಂದ 6ರ ತನಕ ನಡೆಯಲಿದೆ.