ವರದಿ: ಜಯಾನಂದ ಪೆರಾಜೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನ ಬಿಸಿರೋಡಿನ ಶ್ರೀ ರಕ್ತೇಶ್ವರೀ ದೇವಿ ಪುನರ್ಪ್ರತಿಷ್ಠೆ  ಬ್ರಹ್ಮ ಕಲಶಾಭಿಶೇಕ,ನಾಗದೇವರ ಹಾಗೂ ಪರಿವಾರ ದೈವದ ಪ್ರತಿಷ್ಠೆ ಬುಧವಾರ ವೇ.ಮೂ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ  ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಸುಮಾರು ಒಂದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ  ಜೀರ್ಣೋದ್ಧಾರ ಕಾರ್ಯಗಳು ಆಗಿದ್ದವು. 48 ದಿನಗಳ ಭಜನಾ ಸೇವೆ ಜರಗಿ ಏ.3ರಿಂದ ವಿವಿಧ ಧಾರ್ಮಿಕ ವಿಧಿಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆಯೊಂದಿಗೆ ಸಹಸ್ರಾರು ಮಂದಿ ಭಾಗವಹಿಸುವ ಮೂಲಕ ಸಂಪನ್ನಗೊಂಡಿತು.

ಮಹಿಳೆಯರು ಮತ್ತು ಯುವಕರು ದೇಶವನ್ನು ಮತ್ತು ಸಂಸ್ಕೃತಿಯನ್ನು ಉಳಿಸುವ ಶಕ್ತಿಯಾಗಿದ್ದಾರೆ. ರಕ್ತೇಶ್ವರೀ ದೇವಿಯು ವಿದ್ಯೆ, ಬುದ್ದಿ ರಕ್ಷಣೆಯನ್ನು ಕೊಡುವ ದೇವತೆಯಾಗಿದ್ದಾಳೆ ಎಂದು ಒಡಿಯೂರು  ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಬಿ.ಸಿ.ರೊಡಿನ ಶ್ರೀ  ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಮುನ್ನಾದಿನ ನಡೆದ ಧಾರ್ಮಿಕ ಸಭೆಯಲ್ಲಿ ಆರ್ಶೀವಚನ ನೀಡಿದರು.

ಯೌವನ ಮತ್ತು ಸಂಪತ್ತು ಸ್ಥಿರವಲ್ಲ . ಇಚ್ಛಾ ಶಕ್ತಿ ,ಜ್ಞಾನ ಶಕ್ತಿ ,ಕ್ರಿಯಾ ಶಕ್ತಿ ಜಾಗೃತವಾಗಬೇಕಾದರೆ ಧರ್ಮ, ಸಂಸ್ಕೃತಿಯಿಂದ ಬದುಕಬೇಕು ಎಂದು ಆಶೀರ್ವಚನ ನೀಡಿದರು.

ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ  ಬಿ.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎರ್ಮಾಳ್ ಕಲ್ಪನಾ ಚಂದ್ರಶೇಖರ್ ಮಾತನಾಡಿದರು. 

ಸೇವಾ ಸಮಿತಿಯ ಸದಸ್ಯ ಎಮ್. ಅಶ್ವನಿ ಕುಮಾರ್ ರೈ ಸಾಗತಿಸಿ ಪ್ರಸ್ತಾವನೆ ಗೈದರು. ಉಪಾಧ್ಯಕ್ಷ ಸಂಜೀವ ಪೂಜಾರಿ, ಗ ಕೋಶಾಧಿಕಾರಿ ಬಿ. ಮೋಹನ್, ಬ್ರಹ್ಮ ಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಕೆ. ನಾರಾಯಣ ಹೆಗ್ಡೆ, ಸಹಕೋಶಾಧಿಕಾರಿ ಕೆ. ವಸಂತ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ರಘುಪತಿ ಭಟ್  ಹಾಗೂ ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶೋತ್ಸವ ಕಾರ್ಯದಲ್ಲಿ ತೊಡಗಿಸಿಕೊಂಡ ಪ್ರಮುಖರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ಐತ್ತಪ್ಪ ಪೂಜಾರಿ ವಂದಿಸಿದರು.  ಎಚ್. ಕೆ. ನಯನಾಡು ನಿರೂಪಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ವಿದುಷಿ ರೋಹಿಣಿ ಉದಯ್  ಶಿಷ್ಯೆಯರಿಂದ ನೃತ್ಯ ರಂಜಿನಿ, ಕಲಾನಿಕೇತನ ಡ್ಯಾನ್ಸ್ ಪೌಂಡೇಶನ್ ಕಲ್ಲಡ್ಕ ವಿದುಷಿ ವಿದ್ಯಾಮನೋಜ್  ಇವರ ಶಿಷ್ಯರಿಂದ ನೃತ್ಯ ಸಿಂಚನ, ಕಾರ್ಯಕ್ರಮ ನಡೆಯಿತು.