ಮಂಗಳೂರು:- ಶುಚಿ ಯೋಜನೆ ಪುನರ್ ಜಾರಿಗೊಳಿಸುವಂತೆ ಒತ್ತಾಯಿಸಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರ ನೇತೃತ್ವದ ನಿಯೋಗ ಮಂಗಳವಾರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

14ರಿಂದ 19 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ವೈಯಕ್ತಿಕ ಶುಚಿತ್ವದ ಕೊರತೆಯಿಂದ ಜನಾಂಗದ ಸೋಂಕು ತಗುಲಿ ಗರ್ಭಕೋಶದ ತೊಂದರೆಗೆ ಒಳಗಾಗುವುದರ ಬಗ್ಗೆ ಆರೋಗ್ಯ ಇಲಾಖೆ ವರದಿ ಪರಿಗಣಿಸಿ ರಾಜ್ಯ ಸರ್ಕಾರ 2014ರಲ್ಲಿ ಶುಚಿ ಯೋಜನೆ ಆರಂಭಿಸಿತ್ತು. ಶಿಕ್ಷಣ ಇಲಾಖಾ ವತಿಯಿಂದ 6ನೇ ತರಗತಿಯಿಂದ 10ನೇ ತರಗತಿವರೆಗೂ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮುಖಾಂತರ ಶಾಲೆ ಬಿಟ್ಟ 19 ವರ್ಷದೊಳಗಿನ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಉಚಿತ ನ್ಯಾಪ್ ಕೀನ್ ನೀಡಲಾಗುತ್ತಿತ್ತು. ಆದರೆ, ಸರ್ಕಾರ ಕೋವಿಡ್ ನೆಪವೊಡ್ಡಿ ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದು ಖಂಡನೀಯ. ಗ್ರಾಮೀಣ ಕಡುಬಡತನದ ಕುಟುಂಬಗಳ ಹೆಣ್ಣುಮಕ್ಕಳ ಆರೋಗ್ಯದ ದೃಷ್ಟಿಯನ್ನು ಗಣನೆಗೆ ತೆಗೆದುಕೊಂಡು ಈ ಕೂಡಲೇ ಶುಚಿ ಯೋಜನೆಯನ್ನು ಪುನರ್ ಜಾರಿಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಅಪ್ಪಿ, ಸುರೇಖ ಚಂದ್ರಹಾಸ್, ನಮಿತಾ ಡಿ ರಾವ್, ಶಶಿಕಲಾ ಪದ್ಮನಾಭನ್, ಚಂದ್ರಕಲಾ, ರೂಪ ಚೇತನ್, ಮಂಜುಳಾ ನಾಯಕ್,  ಡಾ. ಮಧುಶ್ರೀ, ಗೀತಾ ಅತ್ತಾವರ್, ವಿದ್ಯಾ, ಗೀತಾ ಪ್ರವೀಣ್ ಉಪಸ್ಥಿತರಿದ್ದರು.