ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಧರ್ಮಸ್ಥಳ, ಕರ್ನಾಟಕ ಅರಣ್ಯ ಇಲಾಖೆ, ಮಂಗಳೂರು ಪ್ರಾದೇಶಿಕ ಅರಣ್ಯ ವಿಭಾಗ, ಉಪ್ಪಿನಂಗಡಿ ವಲಯ, ಜನಜಾಗೃತಿ ಮತ್ತು ಕೃಷಿ ಪ್ರಾದೇಶಿಕ ವಿಭಾಗ ಹಾಗೂ ಗ್ರಾಮ ಅರಣ್ಯ ಸಮಿತಿ ಬೆಳಾಲು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಸಂರಕ್ಷಣೆಯ ಮಹತ್ವಾಕಾಂಕ್ಷೆಯ ಯೋಜನೆಗೆ ಅರಣ್ಯದಲ್ಲಿ ಕಾಡು ಪ್ರಾಣಿಗಳಿಗಾಗಿ ಹಣ್ಣು ಹಂಪಲುಗಳ ಗಿಡಗಳನ್ನು ನೆಡುವ ಉದ್ದೇಶದೊಂದಿಗೆ “ಬಿತ್ತೋತ್ಸವ” ಕಾರ್ಯಕ್ರಮವನ್ನು ಇದೇ ಬರುವ 08, ಜೂನ್ 2022ನೇ ಬುಧವಾರದ ಡಂತಮಲೆ ರಕ್ಷಿತಾರಣ್ಯ ಬೆಳಾಲು- ಬೈಪಾಡಿ, ಬಂದಾರು ಗ್ರಾಮ ಇಲ್ಲಿನ ಕಾಡು ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದೆ. 

      ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆಯ ‘ಭೂಮಿ ತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ’ ಇದಕ್ಕಾಗಿ ‘ಹಸಿರು ಬೆಳೆಸಿ- ಉಸಿರು ಉಳಿಸಿ’ ಎನ್ನುವ ಧ್ಯೇಯವಾಕ್ಯದಲ್ಲಿ ಯೋಜನೆಯ ಮೂಲಕ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ. 10 ಲಕ್ಷ ಗಿಡಗಳನ್ನು 35 ಲಕ್ಷ ವೆಚ್ಚದಲ್ಲಿ ನಾಟಿ ಮಾಡಲು, ಅದರಲ್ಲೂ ಹಣ್ಣು ಹಂಪಲುಗಳ ಗಿಡಗಳಿಗೆ ಆದ್ಯತೆ ನೀಡಲಾಗಿದೆ. ಈ ಕಾರ್ಯಕ್ರಮವನ್ನುಅರಣ್ಯಇಲಾಖೆಯ ಸಹಕಾರದೊಂದಿಗೆ ಮಾಡುತ್ತಿದ್ದು, ಯೋಜನೆಯ 5055 ವಿಪತ್ತು ನಿರ್ವಹಣಾ “ಶೌರ್ಯ” ಸ್ವಯಂಸೇವಕರು ನಾಟಿ ಮಾಡುವ ಕಾರ್ಯದಲ್ಲಿ ಸಹಕರಿಸಲಿದ್ದಾರೆ.

      ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಾಡಿನಲ್ಲಿ ಬೀಜ ಬಿತ್ತನೆ ಮಾಡುವುದರ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಲಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಾನ್ಯ ಶಾಸಕರಾದ ಹರೀಶ್ ಪೂಂಜರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವೃತ್ತದ ಮುಖ್ಯ ಅರಣ್ಯಾಧಿಕಾರಿ ಪ್ರಕಾಶ್‍ಎಸ್. ನೆಟಲ್‍ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ವೈ. ಕೆ. ದಿನೇಶ್ ಕುಮಾರ್, ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ| ಎಲ್. ಹೆಚ್. ಮಂಜುನಾಥ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಕೆ. ಗೌಡ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಗಂಗಾಧರ ಗೌಡ, ಸರಕಾರಿ ಪ್ರೌಢಶಾಲೆ ಬಂದಾರಿನ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಬೈಪಾಡಿ ಯೋಜನೆಯ ಒಕ್ಕೂಟದ ಸದಸ್ಯರು, ಸಾರ್ವಜನಿಕರು ಈ ಸಭೆಯಲ್ಲಿ ಪಾಲ್ಗೊಂಡು ಕಾಡಿನುದ್ದಕ್ಕೂ ವಿವಿಧ ಹಣ್ಣು ಹಂಪಲು ಗಿಡಗಳ ಬೀಜ ಬಿತ್ತನೆ ಮಾಡಿ “ಬಿತ್ತೋತ್ಸವ” ಆಚರಿಸಲಿದ್ದಾರೆ ಎಂದು ಉಪ್ಪಿನಂಗಡಿ ವಲಯದ ಅರಣ್ಯಾಧಿಕಾರಿ ಎ. ಮಧುಸೂಧನ್, ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಮನೋಜ್ ಮಿನೇಜಸ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುತ್ತೂರು ವಿಭಾಗದ ವಿ.ಪಿ. ಕಾರ್ಯಪ್ಪ, ಯೋಜನೆಯ ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ್, ಸುರೇಂದ್ರರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.